ಪಶು ಸಂಗೋಪನೆ ಇಲಾಖೆ ವಿರುದ್ಧ ರೈತ ಸಂಘದ ಆಕ್ರೋಶ, ಪ್ರತಿಭಟನೆ
ಚನ್ನಪಟ್ಟಣ: ಪಶು ಸಂಗೋಪನಾ ಇಲಾಖೆ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಶು ಸಂಗೋಪನಾ ಇಲಾಖೆಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ರೈತಸಂಘದ ಪದಾಧಿಕಾರಿಗಳು, ಹನಿಯೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡಿದ್ದ ಹಸುವಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿಲ್ಲ. ಅರಣ್ಯ ಇಲಾಖೆಯಿಂದ ಪರಿಹಾರ ಪಡೆಯಲು ಗಾಯಗೊಂಡಿರುವ ಪ್ರಮಾಣ ಪತ್ರ ನೀಡದೆ ರೈತನನ್ನು ಸತಾಯಿಸುತಿದ್ದಾರೆ ಎಂದು ಕಿಡಿಕಾರಿದರು.
ಹನಿಯೂರು ಗ್ರಾಮದ ಬೀರಪ್ಪ ವಾರದ ಹಿಂದೆ ಹೊಲ ಉಳುತ್ತಿರುವ ಸಮಯದಲ್ಲಿ ಚಿರತೆ ದಾಳಿ ಮಾಡಿ ಹಸುವಿಗೆ ಗಾಯ ಗೊಳಿಸಿತ್ತು. ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಬಿ.ವಿ.ಹಳ್ಳಿ ಪಶುವೈದ್ಯ ಕೇಂದ್ರದ ವೈದ್ಯರಿಗೆ ದೂರವಾಣಿ ಮೂಲಕ ಸುದ್ದಿ ತಿಳಿಸಿದ್ದರೂ ಅವರು ಸೂಕ್ತ ಚಿಕಿತ್ಸೆ ಕೊಟ್ಟಿಲ್ಲ. ಹಸು ಚಿರತೆ ದಾಳಿಯಿಂದ ಗಾಯ ಗೊಂಡಿರುವ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ವೈದ್ಯರಿಗೆ ತಿಳಿಸಿದ್ದರಾದರೂ ವೈದ್ಯರು ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರಮಾಣ ಪತ್ರ ನೀಡಿಲ್ಲ ಎಂದು ಕಿಡಿ ಕಾರಿದರು.
ರೈತ ಸಂಘದ ಸವಾಲ್: ಇಲಾಖೆ ವೈದ್ಯರ ಕ್ರಮವನ್ನು ಸಮರ್ಥಿಸಿ ಕೊಳ್ಳಲು ಮುಂದಾದ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದು ಕೊಂಡ ರೈತ ಸಂಘದ ಕಾರ್ಯಕರ್ತರು, ಬಿ.ವಿ.ಹಳ್ಳಿ ಮತ್ತು ಸುತ್ತ ಮುತ್ತಲ ವೃತ್ತಗಳಿಗೆ ಖುದ್ದು ಭೇಟಿ ನೀಡಿದರೆ ನಿಮ್ಮ ಇಲಾಖೆಯ ಸಾಚಾತನವನ್ನು ಸಾಕ್ಷಿ ಸಮೇತ ತೋರಿಸುತ್ತೇವೆ ಎಂದು ಸವಾಲಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ಸಹಾಯಕ ನಿರ್ದೇಶಕರು ನಿರುತ್ತರರಾದರು.
ಜಿಲ್ಲಾ ಉಪ ನಿರ್ದೇಶಕರ ಭರವಸೆ: ದೂರವಾಣಿ ಮೂಲಕ ರೈತ ಸಂಘದ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಪಶುಸಂಗೋಪನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ದೇವರಾಜು ಗುರುವಾರ ತಾಲೂಕು ಕಚೇರಿಗೆ ಆಗಮಿಸಿ ರೈತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಕೂಡಲೇ ಗಾಯಗೊಂಡಿರುವ ಹಸುವಿನ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಚಲುವಯ್ಯ, ರಮೇಶ್,ದೇವರಾಜು, ನಂಜಪ್ಪ, ರತ್ನದಾಸ್, ಡಿ.ದೇವರಾಜು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

