ಬೆಂಗಳೂರು ಗ್ರಾಮಾಂತರ

ನಗರಸಭೆ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ

Published On :

ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆಯ ಅಧ್ಯಕ್ಷರು ಸ್ವಜನಪಕ್ಷಪಾತದ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ತಾಲೂಕು ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.
ನಗರಸಭಾಧ್ಯಕ್ಷೆ ಅಧ್ಯಕ್ಷೆ ಶಂಶುನ್ನೀಸಾ ವಿರುದ್ಧ ಹಿಂಜಾವೇ ನೇತೃತ್ವದಲ್ಲಿ ನಗರಸಭೆ ಕಚೇರಿ ಮುಂದೆ ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಚಾಲಕ ಅಮರನಾಥ್, ನಗರಸಭಾಧ್ಯಕ್ಷರು ತಾವು ಕೇವಲ ಒಂದು ಕೋಮಿನ ಅಧ್ಯಕ್ಷೆಯ ರೀತಿ ವರ್ತಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸ್ವತ್ತಿಗೆ ಸಂಬಂಧಿಸಿದಂತೆ ಕುಂಬಾರಪೇಟೆ ಮಸೀದಿ ಆಡಳಿತ ಮಂಡಲಿ ಪದೇ ಪದೇ ಕಾನೂನು ಉಲ್ಲಂಘಿಸಲು ಕುಮ್ಮಕ್ಕು ನೀಡುತ್ತಿದ್ದಾರೆ. ಮಸೀದಿ ಪಕ್ಕದ ಖಾಲಿ ಸ್ವತ್ತು ಶಾಂತವೀರ ದೇವರ ಮಠದ್ದಾಗಿದ್ದು, ಮಾಲೀಕತ್ವವನ್ನು ವಾರಸುದಾರರಿಗೆ ದೊರಕಿಸಿಕೊಡಬೇಕೆಂದು ನ್ಯಾಯಾಲಯದಲ್ಲಿ ದಾವೆ ನಡೆಸಲಾಗುತ್ತಿದೆ. ಆದಾಗ್ಯೂ ಅಲ್ಲಿ ಕಟ್ಟಡ ನಿರ್ಮಿಸಲು ನಗರಸಭೆ ಅಧ್ಯಕ್ಷರು ತಮ್ಮ ಪ್ರಭಾವ ಬಳಸಿ ಪರವಾನಗಿ ನವೀಕರಿಸಿಕೊಟ್ಟಿದ್ದಾರೆ. ಪರವಾನಗಿ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರೂ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಧ್ಯಕ್ಷರು ತಮ್ಮದೇ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ನಿರ್ಣಯಗಳನ್ನೇ ಸುಳ್ಳು ಎಂದು ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಹೀಗಾಗಿ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತೀರ್ಪಿಗೆ ಬದ್ಧ: ಬೆಂಗಳೂರು ನಗರ ಹಿಂಜಾವೇ ಕಾರ್ಯದರ್ಶಿ ದೊ.ಕೇಶವಮೂರ್ತಿ ಮಾತನಾಡಿ ಈ ವಿಚಾರದಲ್ಲಿ ಸಚಿವ ಖಮರುಲ್ ಇಸ್ಸಾಂ, ರೋಷನ್‌ಬೇಗ್ ಹಾಗೂ ಕೆಲ ಅಧಿಕಾರಿಗಳೂ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಲಾಬಿ ನಡೆಸುತ್ತಿದ್ದಾರೆ. ಹಿಂದು ಜಾಗರಣ ವೇದಿಕೆ ನ್ಯಾಯಾಲಯದ ಯಾವುದೇ ತೀರ್ಪಿಗೆ ಬದ್ಧವಿದೆ. ಆದರೆ ಕಾನೂನಿನ ಮೇಲೆ ಗೌರವ ಇಲ್ಲದವರಂತೆ ನಡೆದುಕೊಳ್ಳುತ್ತಿರುವ ಜನ ತಮ್ಮ ಹುದ್ದೆ ತೊರೆಯಲಿ ಎಂದರು.
ಇದೇ ಸಂದರ್ಭದಲ್ಲಿ ಕೆಲ ಜೆಡಿಎಸ್ ನಗರಸಭಾ ಸದಸ್ಯರು ತಮ್ಮ ಅಧ್ಯಕ್ಷರ ಧೋರಣೆ ಸಮರ್ಥಿಸಿಕೊಂಡರು. ಅವರು ಯಾವುದೇ ಪಕ್ಷಪಾತ ನಡೆಸಿಲ್ಲ. ಕಾನೂನು ಪ್ರಕಾರವೇ ನಡೆದುಕೊಳ್ಳುತ್ತಿದ್ದು, ಸಾಮಾನ್ಯ ಸಭೆಯ ನಿರ್ಣಯವನ್ನು ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರೂ ಪಾಲಿಸಲೇ ಬೇಕು. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದರು. ಕೂಡಲೇ ಈ ಪ್ರಕರಣದಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ನಗರಸಭಾ ಆಯುಕ್ತರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡರಾದ ರಘುನಾಥ್, ಮಂಜುನಾಥ್, ಯಶವಂತ್, ಬಿಜೆಪಿ ಮುಖಂಡರ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.