ಬೆಂಗಳೂರು ಗ್ರಾಮಾಂತರ

ಹೊಸ ಆಲೋಚನೆ, ಅನ್ವೇಷಣೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಿ

Published On :

ಬೆಂಗಳೂರು: ವಿದ್ಯಾರ್ಥಿಗಳು ಹೊಸ ಆಲೋಚನೆ ಮತ್ತು ಅನ್ವೇಷಣೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಬೇಕೆಂದು ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಧಾನ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಕಿವಿಮಾತು ಹೇಳಿದರು.
ಭಾನುವಾರ ಬೇಸ್ ಸಂಸ್ಥೆ ಏರ್ಪಡಿಸಿದ್ದ ಗ್ಯ್ರಾಂಡ್‌ಸ್ಲ್ಯಾಮ್ 2014, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ವೃತ್ತಿ ಶಿಕ್ಷಣ ಪಡೆಯುವ ಹಂತದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಅಡೆತಡೆಗಳನ್ನು ಮೀರಿ ಗುರಿ ತಲುಪಬೇಕೆಂದು ತಿಳಿಸಿದರು. ಕ್ವಾಲಿಟಿ ಎಂಜಿನಿಯರಿಂಗ್ ನಿರ್ದೇಶಕ ಪಿ.ಎಸ್.ರವೀಂದ್ರನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಸ್ ಶೈಕ್ಷಣಿಕ ತಳಹದಿಯನ್ನು ಹಾಕಿದೆ. ಇನ್ನು ಅವರು ಸಾಧನೆ ಉತ್ತುಂಗವನ್ನು ಏರಬೇಕು. ಎಡಬಿಡದೆ ಗುರಿಯ ಹಿಂದೆ ಸಾಗಬೇಕು ಎಂದರು. ಜೆಇಇ, ಸಿಇಟಿ, ಎಐಐಎಂಎಸ್, ಜೆಐಪಿಎಂಇಆರ್, ಎನ್‌ಇಇಟಿ, ಕೆವಿಪಿವಾಯ್, ಎನ್‌ಟಿಎಸಿ, ಒಲಂಪಿಯಾಡ್ಸ್ ಸ್ಪರ್ಧೆಗಳಲ್ಲಿ ಉತ್ತಮ ಅಂಕ ಗಳಿಸಿದ 300 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ತಪಸ್ ಯೋಜನೆಯಲ್ಲಿ ತರಬೇತಿ ನೀಡಲಾಗಿತ್ತು. ಸಾಧನೆ ಮಾಡಿರುವ ತಪಸ್ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಮಾಟ ಮಂತ್ರ ನೆಪದಲ್ಲಿ ಮಹಿಳೆಯರ ದೇಹ ಸ್ಪರ್ಶ ಆರೋಪ
ದೇವನಹಳ್ಳಿ: ಇಲ್ಲಿಗೆ ಸಮೀಪದ ಚನ್ನಹಳ್ಳಿ ಗ್ರಾಮದ ಬಳಿ ಇರುವ ಮಾರಮ್ಮ ದೇವಾಲಯದ ಪೂಜಾರಿ ನಾರಾಯಣಸ್ವಾಮಿ (50) ತಮ್ಮ ಬಳಿ ಬರುವ ಮಹಿಳೆಯರಿಗೆ ಮಾಟ ಮಂತ್ರ ಹಾಕುವ ನೆಪದಲ್ಲಿ ಅವರ ಮೈ ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಯಲಹಂಕದ ಮಹಿಳೆ ಭಾಗ್ಯಮ್ಮ ಹಾಗೂ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯರಿಗೆ ಮಂತ್ರಹಾಕಿ ಮೈ ಕೈ ಸವರುವ ಈ ಪೂಜಾರಿ ಬಗ್ಗೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದಂತೆ ದೇವನಹಳ್ಳಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮಂತ್ರವಾದಿ ನಾರಾಯಣಪ್ಪ ದೇವಾಲಯದ ಸಮೀಪವಿರುವ ಅಗಲಕೋಟೆ ಗ್ರಾಮದವರೆಂದು ಹೇಳಲಾಗಿದ್ದು ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗನಿದ್ದಾನೆ. ಅಲ್ಲದೆ ಮೊಮ್ಮಕ್ಕಳು  ಇದ್ದಾರೆ ಎನ್ನಲಾಗಿದೆ. ಪೂಜಾರಿಯ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ದೇವಾಲಯ ಸುತ್ತಮುತ್ತ ಇರುವ ಗ್ರಾಮಸ್ಥರು ಇಲ್ಲಿನ ಪೊಲೀಸ್ ಠಾಣೆ ಬಳಿ ಜಮಾಯಿಸಿದರಲ್ಲದೆ ಮಂತ್ರವಾದಿ ನಾರಾಯಣಪ್ಪ ಕಳೆದ 20 ವರ್ಷಗಳಿಂದಲೂ ಮಾರಮ್ಮ ದೇವಾಲಯದಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಮತ್ತು ಕಷ್ಟ ನಿವಾರಿಸುವ ಬಗ್ಗೆ  ಮಂತ್ರ ಹಾಕಿ ಕಳುಹಿಸುತ್ತಿದ್ದರು. ಅಲ್ಲದೆ ಭಕ್ತಾದಿಗಳು ನೀಡಿದ ಕಾಣಿಕೆಯನ್ನು ಸ್ವೀಕರಿಸುತ್ತಿದ್ದರು. ಈ ಕಾಣಿಕೆಯಿಂದ  ಕಲ್ಯಾಣ ಮಂಟಪ ಕಟ್ಟುತ್ತಿದ್ದಾರೆ. ಮಂತ್ರವಾದಿ ನಾರಾಯಣಪ್ಪ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ತಂದೆಯ ಕಾಲದಿಂದಲೂ ಕಷ್ಟ ಪರಿಹಾರಕ್ಕಾಗಿ ಬಂದವರಿಗೆ ಮಂತ್ರಹಾಕುತ್ತಿದ್ದಾರೆ. ಯಾರೋ ಉದ್ದೇಶಪೂರ್ವಕವಾಗಿ ಅವರ ಮೇಲೆ ಸುಳ್ಳು ದೂರನ್ನು ನೀಡಿದ್ದಾರೆ ಎಂದು ಚನ್ನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ನಾಗರಾಜು, ಗ್ರಾಮದ ಮುಖಂಡರಾದ ನರೇಂದ್ರ ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರ ಆಧರಿಸಿ ಮುಂದಿನ ಕ್ರಮ
ಕೃಷ್ಣರಾಜಪುರ: ಬಾಲಕಿ ಅತ್ಯಾಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ಪ್ರತಿಭಟನೆಯ ಸ್ವರೂಪ ನಿರ್ಧಾರವಾಗಲಿದೆ. ಮಾಧ್ಯಮಗಳ ಜತೆ ಮಾತನಾಡಿದ ಪೋಷಕರು ಈ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಭಾನುವಾರ ಶಾಲೆಯ ಸುತ್ತ ಯಾವುದೇ ಪ್ರತಿಭಟನೆ ನಡೆಯಲಿಲ್ಲ. ಇದರ ಹೊರತಾಗಿಯೂ ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ. 30ಕ್ಕೂ ಹೆಚ್ಚು ಮಂದಿ ಪೊಲೀಸರು ಕಾವಲು ಕಾಯುತ್ತಿದ್ದರು.
ಯೋಗದ ಪ್ರಚಾರ ಅಗತ್ಯ
ಬೆಂಗಳೂರು: ಮಾನವನ ಆಂತರಿಕ ಶಕ್ತಿ ಹೆಚ್ಚಿಸುವ ಯೋಗವನ್ನು ದೇಶದಲ್ಲಿ ಪ್ರಚಾರ ಮಾಡುವ ಅಗತ್ಯವಿದೆ ಎಂದು ಶಾಸಕ ನರೇಂದ್ರ ಬಾಬು ಅಭಿಪ್ರಾಯಪಟ್ಟರು.
ಶ್ರೀ ಕೃಷ್ಣ ಯೋಗ ಸಂಘ ಭಾನುವಾರ ಶ್ರೀ ರಾಮ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಯೋಗ ಸ್ಪರ್ಧೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸಂಪತ್ತಾದ ಯೋಗವು ಮಾನವನ ಆಂತರಿಕ ಶಕ್ತಿ ಹೆಚ್ಚಿಸಿ ಜ್ಞಾನಾರ್ಜನೆಗೆ ಕಾರಣವಾಗುತ್ತದೆ. ಆದರೆ ದೇಶದಲ್ಲೇ ಯೋಗಕ್ಕೆ ಪ್ರಚಾರದ ಕೊರತೆಯಿದೆ. ಯೋಗ ಮಾಡಲು ಆಸ್ಪತ್ರೆಗಳು ಪ್ರಶಸ್ತ ಸ್ಥಳವಾಗಿದ್ದರೂ ರೋಗಿಗಳು ಯೋಗ ಮಾಡಬಾರದೆಂದು ಹೆದರುತ್ತಾರೆ. ಪ್ರಾಣಾಯಾಮದಂತಹ ಯೋಗವನ್ನು ಎಲ್ಲರೂ ಅಭ್ಯಸಿಸಬಹುದು. ಮಹಿಳೆಯರು ಕೆಲವು ಆಸನಗಳನ್ನು ಹೊರತುಪಡಿಸಿ ಎಲ್ಲಾ ಯೋಗಾಸನಗಳನ್ನು ಮಾಡಬಹುದು ಎಂದರು.
ಸಾಧಕರಿಗೆ ಮಾತ್ರ ಒಲಿಯುವ ಯೋಗ ಸೋಮಾರಿಗಳ ಸ್ವತ್ತಲ್ಲ. ಯೋಗದಲ್ಲಿ ಪರಿಣತರಾಗಿರುವ ಮಕ್ಕಳು ಸಾಕಷ್ಟಿದ್ದರೂ, ಹಿರಿಯರು ಪ್ರೋತ್ಸಾಹ ನೀಡುತ್ತಿಲ್ಲ. ಮನೆಯಲ್ಲೇ ಅಭ್ಯಾಸ ಮಾಡಿ ಪ್ರೋತ್ಸಾಹ ನೀಡಬೇಕು ಎಂದರು. ಸಂಘದ ಅಧ್ಯಕ್ಷ ಬಿ.ಸಿ.ಸೋಮಪ್ರಸಾದ್, ಕಾರ್ಯದರ್ಶಿ ಡಿ.ಪುಟ್ಟೇಗೌಡ, ರಾಜ್ಯ ಯೋಗ ಸಂಘದ ಅಧ್ಯಕ್ಷ ಆರ್.ರಾಮಮೂರ್ತಿ, ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಇದ್ದರು.  
ಪ್ರಶಸ್ತಿ: 8-28 ವಯಸ್ಸಿನ ವಿಭಾಗದಲ್ಲಿ ಫಿರೋಜ್ ಹಾಗೂ 28 ಕ್ಕಿಂತ ಅಧಿಕ ವಯೋವಾನದ ವಿಭಾಗದಲ್ಲಿ ರುದ್ರಸ್ವಾಮಿ 'ಭಾರತ ಯೋಗ ಕಿಂಗ್‌' ಪ್ರಶಸ್ತಿ ಪಡೆದರು. ಪ್ರಿಯಾಂಕ 'ಯೋಗ ಕ್ವೀನ್‌' ಪ್ರಶಸ್ತಿ ಗಳಿಸಿದರು.
ಡಿ.ಆರ್.ನೇಹಾ 'ಯೋಗ ಕಿಶೋರಿ', ಎಸ್.ಸೋಮಶೇಖರ್ ಹಾಗೂ ಎಸ್.ಬಾಲಹರಿ 'ಯೋಗಕುಮಾರ್‌', ಎಸ್.ಎಚ್.ನಾಗರಾಜ 'ಯೋಗಚೈತನ್ಯ' ಪ್ರಶಸ್ತಿ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.