ಬೆಂಗಳೂರು ಗ್ರಾಮಾಂತರ

ಲಂಚಕ್ಕೆ ಬಾಯ್ತೆರೆದಿದೆ ಗೊಂಬೆಗಳ ಊರು

Published On :

ಮತ್ತೀಕೆರೆ ಜಯರಾಮ್
ರಾಮನಗರ: ನಿವೇಶನಕ್ಕೆ ಖಾತೆ ಮಾಡಿಕೊಟ್ಟಿದ್ದು, ಅದಕ್ಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸಿಕೊಂಡು ನಮೂನೆ-3 ವಿತರಣೆ, ಅದೇ ನಿವೇಶನವನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿ ಮಾರಾಟ ಮಾಡಿರುವುದು ಇವಿಷ್ಟೂ ಪ್ರಕ್ರಿಯೆ ಒಂದೇ ದಿನಾಂಕದಲ್ಲಿ ನಡೆದಿದೆ. ಇದೇನಪ್ಪಾ ಸರ್ಕಾರಿ ಕಚೇರಿಯಲ್ಲಿ ಇಷ್ಟು ವೇಗದಲ್ಲಿ ಕೆಲಸ ಆಗೋದುಂಟೇ ಎಂದು ಹುಬ್ಬೇರಿಸಬೇಡಿ. ಚನ್ನಪಟ್ಟಣ ನಗರಸಭೆ, ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡಿದರೆ ಸಾಕು ಅದೆಂತಹ ಕಾನೂನು ಬಾಹಿರ ಕೆಲಸವಾಗಿದ್ದರೂ ಎಷ್ಟು ವೇಗವಾಗಿ ಆಗಿಬಿಡುತ್ತವೆ ಎನ್ನುವುದಕ್ಕೆ ಇದು ನಿದರ್ಶನ.
ಅಕ್ರಮದ ಮಜಲು
ಚನ್ನಪಟ್ಟಣದ ಅನಧಿಕೃತ ಬಡಾವಣೆಗಳ ಪೈಕಿ ಮಹದೇಶ್ವರ ದೇವಾಲಯ ಸಮೀಪದಲ್ಲಿರುವ ಬಡಾವಣೆಯೂ ಒಂದು. ಅಲ್ಲಿನ ನಿವೇಶನಕ್ಕೆ 157 ಎಂದು ಖಾತೆ ಸಂಖ್ಯೆಯೊಂದನ್ನು ನೀಡಿ ಇದೇ ವರ್ಷ ಫೆಬ್ರವರಿ 11ರಂದು ಅಕ್ರಮವಾಗಿ ಖಾತೆ ಮಾಡಲಾಗಿದೆ. ಖಾತೆ ಪ್ರಕರಣಗಳಲ್ಲಿ ಕಡತ ಸಿದ್ಧಪಡಿಸಿ, ಅದಕ್ಕೆ ಆಯುಕ್ತರ ಅನುಮೋದನೆ ಪಡೆಯಬೇಕು. ಆದರೆ, ಇಲ್ಲಿ ಯಾವುದೇ ಪ್ರಕ್ರಿಯೆ ನಡೆದೇ ಇಲ್ಲ. ಕಂದಾಯ ಅಧಿಕಾರಿಯೇ ನಮೂನೆ 3ಕ್ಕೆ ಸಹಿ ಹಾಕಿದ್ದಾರೆ. ಫೆ.11ರಂದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯ ಪತ್ರ ನೋಂದಣಿಯಾಗಿದೆ.

ಅವಧಿ ಮೀರಿ ಕೆಲಸ
ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗದ, ಅವಧಿಗೂ ಮುನ್ನ ಜಾಗ ಖಾಲಿ ಮಾಡುವ ಅದೆಷ್ಟೋ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ. ಆದರೆ, ಚನ್ನಪಟ್ಟಣ ನಗರಸಭೆ ಕಚೇರಿ ಬೆಳಗ್ಗೆ 7.30ಕ್ಕೆಲ್ಲಾ ಬಾಗಿಲು ತೆರೆದುಕೊಂಡರೆ, ಮುಚ್ಚಲ್ಪಡುವುದು ತಡರಾತ್ರಿಯಾಗುತ್ತದೆ.  ಆಯಕಟ್ಟಿನ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಹೀಗೆ ಅವಧಿ ಮೀರಿ ಸೇವೆ ಸಲ್ಲಿಸುವುದರ ಹಿಂದಿನ ಗುಟ್ಟು ಲಂಚ ಬಾಚುವುದು ಬಿಟ್ಟರೆ ಬೇರೇನೂ ಇಲ್ಲ. ಇಂತಹ ಅವಧಿಯಲ್ಲಿ ಅಕ್ರಮ ಕಡತಗಳ ವಿಲೇವಾರಿ ಪ್ರಕ್ರಿಯೆ ಬಿರುಸಾಗಿಯೇ ನಡೆದಿರುತ್ತದೆ.
ಲಂಗು ಲಗಾಮಿಲ್ಲ
ಚನ್ನಪಟ್ಟಣ ನಗರಸಭೆಯಲ್ಲಿ ಅಧೀನ ಸಿಬ್ಬಂದಿ ಮೇಲೆ ಆಯುಕ್ತರಿಗಾಗಲೀ ಚುನಾಯಿತ ವ್ಯವಸ್ಥೆಗಾಗಲೀ ಹಿಡತವಿಲ್ಲ. ಕೆಲ ಸಿಬ್ಬಂದಿ ಲಂಗು ಲಗಾಮಿಲ್ಲದಂತೆ ವರ್ತಿಸುತ್ತಿದ್ದು, ಕಚೇರಿ ಅವಧಿಯಲ್ಲಿ ಸಾರ್ವಜನಿಕರ ಕೈಗೆ ಸಿಗುವುದೇ ಇಲ್ಲ. ಅವರ ಇಡೀ ಚಟುವಟಿಕೆಗಳು ಕಚೇರಿ ಅವಧಿ ಹೊರತಾದ ಸಮಯಕ್ಕೆ ಸೀಮಿತವಾಗಿರುತ್ತದೆ. ಬೆಳಗ್ಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ, ಮೊಬೈಲ್ ಸಂಪರ್ಕಕ್ಕೂ ಸಿಗದೆ ಹೋಗುತ್ತಾರೆ.
ಖಾಸಗಿ ಸಿಬ್ಬಂದಿ
ಈ ನಗರಸಭೆ ಕಚೇರಿಯಲ್ಲಿ ಸರ್ಕಾರದಿಂದ ನೇಮಕಗೊಂಡ ಇಲ್ಲವೇ ಹೊರ ಗುತ್ತಿಗೆ ಪದ್ಧತಿಯಲ್ಲಿ ನಿಯೋಜಿಸಲ್ಪಟ್ಟ ಸಿಬ್ಬಂದಿಯಷ್ಟೇ ಕೆಲಸ ಮಾಡುತ್ತಿಲ್ಲ. ಒಂದಿಬ್ಬರು ಅಧಿಕೃತ ಸಿಬ್ಬಂದಿ ತಮ್ಮ (ಅ)ವ್ಯವಹಾರಗಳನ್ನು ನಿಭಾಯಿಸಲು ಖಾಸಗಿ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದಾರೆ. ವ್ಯವಹಾರ ಕುದುರಿಸುವುದು, ಅಕ್ರಮ ಖಾತೆ ಮತ್ತಿತರೆ ಕಾನೂನು ಬಾಹಿರ ಕಡತಗಳನ್ನು ಸಿದ್ಧಪಡಿಸುವುದು ಅನಧಿಕೃತ ಸಿಬ್ಬಂದಿಗಳ ಮೂಲಕವೇ. ಹೀಗೆ ಮಾಡಿದರೆ ತಾವೆಷ್ಟೇ ಲಂಚ ಪಡೆದು, ಅಕ್ರಮಗಳನ್ನು ಎಸಗಿದರೂ ತಾವು ಸಿಕ್ಕಿ ಬೀಳುವುದಿಲ್ಲ ಎನ್ನುವುದು ತಂತ್ರವಾಗಿವೆ. ಒಂದೊಮ್ಮೆ ಸಿಕ್ಕಿ ಬೀಳುವ ಸಂದರ್ಭ ಬಂದರೆ ಬೆಂಕಿ ಇಡೋದು ಅವರಿಗೆ ಗೊತ್ತೇ ಇದೆ.
ಗಬ್ಬು ನಾರುವ ನಗರ
ಸುಂದರ ಬೊಂಬೆಗಳ ತಯಾರಿಕೆಗೆ ಹೆಸರಾದ ಚನ್ನಪಟ್ಟಣ ಬೊಂಬೆಗಳ ನಾಡು ಎಂದೇ ಖ್ಯಾತಿ ಹೊಂದಿದೆ. ಆದರೆ, ಈ ನಗರದ ವಾತಾವರಣವನ್ನು ಸುಂದರ ಮತ್ತು ಮಾದರಿಯಾಗಿಸುವುದಕ್ಕೆ ನಗರಸಭೆಯೇ ಅಡ್ಡಗಾಲಾಗಿರುವುದು ವಿಪರ್ಯಾಸದ ಸಂಗತಿ. ಇಲ್ಲಿಗೆ ಬರುವ ಅಧಿಕಾರಿಗಳಿಗೆ ನಗರಾಭಿವೃದ್ಧಿ, ನಾಗರಿಕರ ಹಿತ ಚಿಂತನೆ ಮುಖ್ಯವಾಗಿಲ್ಲ. ಅವರ ಕಾಳಜಿ ಏನಿದ್ದರೂ ಅಕ್ರಮಗಳನ್ನೆಸಗಿ ಸಿಕ್ಕಷ್ಟು ಹಣ ದೋಚುವುದೇ ಗುರಿ. ಅಂತಹವರಿಗೆ ಕಡಿವಾಣ ಹಾಕಲು ಚುನಾಯಿತ ಪ್ರತಿನಿಧಿಗಳೂ ಕಾಳಜಿ ವಹಿಸುತ್ತಿಲ್ಲ.  ಗೆದ್ದು ಹೋದ ಹೊಸತರಲ್ಲಿ ನಗರಸಭೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಯೇ ತೀರುತ್ತೇವೆಂದು ಹೇಳಿಕೊಳ್ಳುವ ಜನಪ್ರತಿನಿಧಿಗಳು ದಿನ ಕಳೆದಂತೆ ತುಟಿ ಪಿಟಿಕ್ ಎನ್ನುವುದೇ ಇಲ್ಲ. ಕೆಲವರಂತೂ ಅಕ್ರಮದಲ್ಲಿ ಪಾಲುದಾರರಾಗುತ್ತಿದ್ದಾರೆ.  ಇದೆಲ್ಲದರ ಫಲವಾಗಿ ಚನ್ನಪಟ್ಟಣದ ಬಹುಪಾಲು ಬಡಾವಣೆಗಳಲ್ಲಿ 12 ರಿಂದ 18 ಅಡಿಯಷ್ಟೇ ಇರುವ ಕಿಷ್ಕಿಂದೆಯಂತಹ ರಸ್ತೆಗಳೇ ರಾರಾಜಿಸುತ್ತಿವೆ. ಒಳ ಚರಂಡಿ ಮಾತಿರಲಿ ಚರಂಡಿಯೂ ಸಮರ್ಪಕವಾಗಿಲ್ಲ. ಎಲ್ಲಿ ಹೋದರೂ ಗಬ್ಬು ನಾರುವ ಸ್ಥಿತಿಯಿದೆ.
ಸಂಕಟ ತಂದ ವೆಂಕಟರಮಣ
ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾಣ್ಣುಡಿಯಿದೆ. ಆದರೆ, ಚನ್ನಪಟ್ಟಣ ನಗರಸಭೆಯ ಪಾಲಿಗೆ ಅದು ತದ್ವಿರುದ್ಧ. ಈ ಸಂಸ್ಥೆಗೆ ವೆಂಕಟರಮಣನೇ ಸಂಕಟ ತಂದಿಟ್ಟು, ಅವಾಂತರ ಸೃಷ್ಟಿಸಿರುವ ಟೀಕಾರೋಪಗಳು ಕೇಳಿ ಬರುತ್ತಿವೆ. ಇದೇನಪ್ಪಾ, ನಂಬಿದ ದೇವರೇ ಸಂಕಟ ತಂದಿಡುವನೇ ಎಂದು ಹುಬ್ಬೇರಿಸಬೇಡಿ. ಈ ಕೆಲಸ ಆಗುತ್ತಿರುವುದಂತೂ ನಿಜ. ಆದರೆ, ಈ ವೆಂಕಟರಮಣ ಬೇರೆ. ಆತನ ದರ್ಶನ ಭಾಗ್ಯ ಕಚೇರಿ ಅವಧಿಯಲ್ಲಿ ಸಾರ್ವಜನಿಕರಿಗಿರಲಿ ಆಯುಕ್ತ, ಸಿಬ್ಬಂದಿ, ಪುರಪಿತೃಗಳಿಗೂ ಲಭ್ಯವಿರದು. ಕನಕನಗರದ ಖಾತಾ ಸಂಖ್ಯೆ 157ಕ್ಕೆ ಸಂಬಂಧಿಸಿದಂತೆ ಪ್ರಥಮ ದರ್ಜೆ ಗುಮಾಸ್ತ ವೆಂಕಟರಮಣ ಎಸಗಿರುವ ಕರ್ತವ್ಯಲೋಪ ಕುರಿತು ನಗರಸಭೆಯ ಹಿಂದಿನ ಆಯುಕ್ತರು ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದರಾದರೂ ಕ್ರಮ ಇನ್ನೂ ಜಾರಿಯಾಗಿಲ್ಲ.
ಕಬಳಿಕೆದಾರರಿಗೆ ಕುಮ್ಮಕ್ಕು
ಈ ಜಿಲ್ಲೆಯ ಬೇರೆ ಯಾವುದೇ ಪೌರ ಸಂಸ್ಥೆಯಲ್ಲೂ ಇರದಷ್ಟು ಸರ್ಕಾರಿ ಆಸ್ತಿ ಚನ್ನಪಟ್ಟಣ ನಗರಸಭೆಗೆ ಇದೆ. ಅದು ಎಷ್ಟಿದೆ, ಎಲ್ಲಿದೆ, ಹೇಗಿದೆ ಎನ್ನುವ ಸಮಗ್ರ ಮಾಹಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇಲ್ಲ. ಸಾಕಷ್ಟು ಸರ್ಕಾರಿ ಆಸ್ತಿಯು ಭೂ ಮಾಫಿಯಾ ಮತ್ತು ಒತ್ತುವರಿದಾರರಿಂದ ಕಬಳಿಕೆಯಾಗಿದೆ. ಸರ್ಕಾರಿ ಆಸ್ತಿಯನ್ನು ಪತ್ತೆ ಹಚ್ಚಿ, ಅದೆಲ್ಲವನ್ನೂ ಸಂರಕ್ಷಿಸುವ ಕಾಳಜಿಯನ್ನು ಅಧಿಕಾರಿಗಳು ತೋರುತ್ತಿಲ್ಲ. ಅದು ಆಳುವ ವರ್ಗಕ್ಕೂ ಬೇಕಿಲ್ಲ. ಇಲ್ಲಿ ಯಾವುದೇ ಅಕ್ರಮಗಳು ಬೆಳಕಿಗೆ ಬಂದರೂ ಜಾತಿ, ರಾಜಕಾರಣದ ಬಣ್ಣ ಹಚ್ಚಿ ಮುಚ್ಚಿ ಹಾಕುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಹೀಗೇ ನಿರ್ಲಕ್ಷಿಸಿದರೆ ನಗರಸಭೆ ಕಚೇರಿ ಮತ್ತು ಆವರಣ ಉಳಿಸಿಕೊಳ್ಳಲೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.