ಆಲಿಕಲ್ಲು ಮಳೆಯಿಂದ ಅಪಾರ ಬೆಳೆ ಹಾನಿ: ಶಾಸಕ
ವಿಜಯಪುರ: ಇತ್ತೀಚೆಗೆ ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಬಿದ್ದ ಆಲಿಕಲ್ಲು ಮಳೆ, ಗಾಳಿಯಿಂದಾಗಿ ಸುಮಾರು 1 ಕೋಟಿಗೂ ಅಧಿಕ ಮೊತ್ತದ ಬೆಳೆ ಹಾನಿಯಾಗಿ ನಷ್ಟವುಂಟಾಗಿದೆ ಎಂದು ದೇವನಹಳ್ಳಿ ಶಾಸಕ ಪಿಳ್ಳಮುನಿಶ್ಯಾಮಪ್ಪ ತಿಳಿಸಿದರು.
ಅವರು ಪಟ್ಟಣದ ಸುತ್ತಮುತ್ತ ಗ್ರಾಮಗಳಲ್ಲಿ ತಹಸೀಲ್ದಾರ್ ಕೇಶವಮೂರ್ತಿ ಅವರೊಡನೆ ಮಳೆಯಿಂದಾಗಿ ಹಾನಿಯಾದ ಬೆಳೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೋಬಳಿ ಸುತ್ತಮುತ್ತಲ ಗ್ರಾಮಗಳಾದ ಚಿಕ್ಕನಹಳ್ಳಿ ಗೊಡ್ಲುಮುದ್ದೇನಹಳ್ಳಿ,ರಂಗನಾಥಪುರ, ಪಿ.ರಂಗನಾಥಪುರ, ಭಟ್ರೇನಹಳ್ಳಿ, ಹರಳೂರು ನಾಗೇನಹಳ್ಳಿಗಳಲ್ಲಿ ಹಾನಿಯಾಗಿರುವ ಹಿಪ್ಪು ನೆರಳೆ ಸೊಪ್ಪು, ದ್ರಾಕ್ಷಿ, ಮಾವು ಹಾಗೂ ಬಾಳೆ ಹಲವಾರು ತರಕಾರಿ ಬೆಳೆಗಳನ್ನು ವೀಕ್ಷಿಸಿದ ನಂತರ ಈ ಅಂದಾಜಿಗೆ ಬರಲಾಗಿದೆ ಎಂದರು.
ನಷ್ಟ ಅನುಭವಿಸಿರುವ ರೈತರಿಗೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯವರಿಂದ ಮಾಹಿತಿ ಪಡೆದು ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಒತ್ತಾಯಿಸುವುದಾಗಿ ತಿಳಿಸಿದರು. ಆಲಿಕಲ್ಲು ಮಳೆ ಬಿದ್ದ ಪರಿಣಾಮ ಚಿಕ್ಕನಹಳ್ಳಿಯಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಅವರ 9 ಎಕರೆ ಸಪೋಟ, 11 ಎಕರೆ ಮಾವಿನ ತೋಟದ ಮರಗಳಲ್ಲಿನ ಗಾಳಿಯಿಂದ ಉದುರಿದೆ.
ಮರದಲ್ಲಿನ ಹಣ್ಣುಗಳು ಸಹ ಸಂಪೂರ್ಣ ಹಾಳಾಗಿ ಮಾರುಕಟ್ಟೆಗೂ ಕಳುಹಿಸಲಾಗದ ಸ್ಥಿತಿಯಲ್ಲಿವೆ ಎಂದು ತೋಟದ ಮಾಲೀಕ ತಿಳಿಸಿದರು. ಗೊಡ್ಡುಮುದ್ದೇನಹಳ್ಳಿಯ ಆರ್. ಬಚ್ಚೇಗೌಡ, ಮರಿತಮ್ಮಣ್ಣ ಹಾಗೂ ಚಿಕ್ಕನಹಳ್ಳಿಯ ಜಯರಾಮಪ್ಪ ಅವರ ಮಾವಿನ
ತೋಟದ ಪರಿಸ್ಥಿತಿಯೂ ಹೀಗೆ ಇದೆ. ಎ.ರಂಗನಾಥಪುರದ ನಾರಾಯಣಪ್ಪ ಅವರ 5 ಎಕರೆಯಲ್ಲಿನ 15 ಲಕ್ಷ ರು. ಬೆಲೆಯ ದ್ರಾಕ್ಷಿ, 9 ಎಕರೆ ಸೋರೆಕಾಯಿ, 2.5 ಎಕರೆಯ ಹಿಪ್ಪುನೆರಳೆ ಸೊಪ್ಪುಗಳು ಸಂಪೂರ್ಣ ಹಾಳಾಗಿದೆ. ಈ ಸಂದರ್ಭದಲ್ಲಿ ವಿಜಯಪುರ ಹೋಬಳಿ ಜೆಡಿಎಸ್ ಅಧ್ಯಕ್ಷ ವೀರಪ್ಪ, ಜಿಲ್ಲಾ ಉಪಾಧ್ಯಕ್ಷ ಚಿ.ಮಾ.ಸುಧಾಕರ್, ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣ್ ಕುಮಾರ್, ಕಂಚೇಗೌಡ, ಗೋಪಾಲಸ್ವಾಮಿ ಮತ್ತಿತರರು ಇದ್ದರು.
ಅತಿರೇಕದ ವರ್ತನೆಯಿಂದ ಪ್ರಾಕೃತಿಕ ಅಸಮತೋಲನ
ಚನ್ನಪಟ್ಟಣ: ಮನುಷ್ಯನ ಅತಿರೇಕದ ವರ್ತನೆಯಿಂದ ಪ್ರಾಕೃತಿಕ ಅಸಮತೋಲನ ಎದುರಾಗಿದ್ದು ಇದರಿಂದಾಗಿ ಇಡೀ ಜೀವ ಸಂಕುಲ ವಿನಾಶದ ಅಂಚಿನಲ್ಲಿದೆ ಎಂದು ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ಅಸಿರ ಚಿತ್ರಕಲಾ ಇನ್ಸ್ಟಿಟ್ಯೂಟ್ ಮತ್ತು ಶಾಲೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡ ಮಾತನಾಡಿ, ಪ್ರಕೃತಿ ನಮ್ಮ ಅಗತ್ಯತೆಗಳನ್ನ ಪೂರೈಸಲು ಶಕ್ತವಾಗಿದೆಯೇ ವಿನಾ ನಮ್ಮ ದುರಾಸೆಗಳನ್ನಲ್ಲ. ಇದನ್ನರಿಯದ ಮಾನವ ಪ್ರಕೃತಿ ಮಾತೆಯ ಒಡಲನ್ನು ಬಗೆದು ಪರಿಸರ ವಿನಾಶದ ಜತೆಗೆ ತಾನೂ ಸರ್ವನಾಶ ವಾಗುತ್ತಿದ್ದಾನೆ ಎಂದರು.
ಸಂಪತ್ತಿನ ಬಗ್ಗೆ ಅತಿಯಾದ ವ್ಯಾಮೋಹ ಬೆಳೆಸಿ ಕೊಂಡಿರುವ ಕೆಲ ಮಂದಿಯ ಪೈಶಾಚಿಕ ಕೃತ್ಯ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ಭವಿಷ್ಯದ ದಿನಗಳಲ್ಲಿ ಮಾನವ ಉಸಿರಾಡುವ ಗಾಳಿಯೂ ಸಿಗದೆ ಸಾವನ್ನಪ್ಪುವ ಧಾರುಣ ಸನ್ನಿವೇಶ ನಿರ್ಮಾಣ ಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ತಪ್ಪಿಸಲು ನಾವೆಲ್ಲ ಒಗ್ಗೂಡಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ ಎಂದರು.
ಶಾಲೆಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮೆಹರು ಸುಲ್ತಾನ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾಶಂಕರ್, ಅಸಿರ ಚಿತ್ರಕಲಾ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಕಾರ್ಯದರ್ಶಿ ರಮೇಶ್ ಅಕ್ಕೂರು, ಶಾಲೆಯ ದೈಹಿಕ ಶಿಕ್ಷಕರುಗಳಾದ ವೀರಬ್ರಹ್ಮಚಾರ್, ಚಂದ್ರಯ್ಯ, ಶಿಕ್ಷಕರುಗಳಾದ ಮಮತಾ, ದೊಳ್ಳಯ್ಯ ಹಾಗೂ ಹಲವಾರು ಶಿಕ್ಷಕವರ್ಗ ಹಾಜರಿದ್ದರು.
ಗಿಡನೆಡುವ ಕಾರ್ಯಕ್ರಮ
ಕನಕಪುರ: ಲಯನ್ಸ್ ಮತ್ತು ಲಿಯೋ ಕ್ಲಬ್ ಕನಕಪುರ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡನೆಡುವ ಕಾರ್ಯಕ್ರಮ ಹೊಸಕೋಟೆ ಸಮೀಪದ ಇರುಳಿಗರ ಕಾಲೊನಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಪರಿಸರ ಸಮಿತಿ ಅಧ್ಯಕ್ಷ ಮರಸಪ್ಪ ರವಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಲಯನ್ಸ್ ಅಧ್ಯಕ್ಷ ಕೆ.ಜಿ.ಸತೀಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಕಟ್ಟಡ ಕಾರ್ಮಿಕ ನಿಗಮದ ನಿರ್ದೇಶಕ ಮಹದೇವ ನಾಯ್ಕ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗಿ ಪರಿಸರವೇ ನಾಶವಾಗುತ್ತಿರುವ ಈ ಪರ್ವ ಕಾಲದಲ್ಲಿ ಮಕ್ಕಳಿಂದ, ಜನಸಾಮಾನ್ಯರಿಂದ ಮೊದಲಾಗಿ ಎಲ್ಲರಿಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಘಸಂಸ್ಥೆಗಳು ನೆರವೇರಿಸಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಹೇಳಿದರು. ಪರಿಸರ ಸಮಿತಿ ಅಧ್ಯಕ್ಷ ಮರಸಪ್ಪರವಿ ಮಾತನಾಡಿ, ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಹತ್ತಾರು ಶಾಲೆಗಳಲ್ಲಿ ಸಾವಿರಾರು ಉಪಯುಕ್ತ ಗಿಡಗಳನ್ನು ವಿತರಿಸಲಾಗುತ್ತಿದೆ. ಗ್ರಾಮಗಳಲ್ಲಿ ರುದ್ರಭೂಮಿಗಳಲ್ಲಿ ಮರಗಳನ್ನು ಬೆಳೆಸಲು ಉತ್ತೇಜನ ನೀಡಲಾಗುತ್ತಿದೆ, ಹಳ್ಳಿಗಳಲ್ಲಿ ಅರಳೀಕಟ್ಟೆಗಳನ್ನು ಸ್ಥಾಪಿಸುವ ವಿನೂತನ ಕಾರ್ಯಕ್ರಮವನ್ನೂ ನಡೆಸುತ್ತಿದ್ದೇವೆಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

