ಕಸ ವಿಲೇವಾರಿ ಘಟಕ ಬೇಡವೇ ಬೇಡ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಬಳಿ ಕಾರ್ಯನಿರ್ವಹಿಸುತ್ತಿರುವ ಟೆರ್ರಾಫಾರ್ಮದಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ಮಿತಿ ಮೀರಿ ತಂದು ಸುರಿಯುತ್ತಿರುವುದು ಮತ್ತು ದೊಡ್ಡಬೆಳವಂಗಲದಲ್ಲಿ ಮತ್ತೊಂದು ಕಸ ವಿಲೇವಾರಿ ಘಟಕ ಸ್ಥಾಪನೆ ಕುರಿತು ನಡೆದಿರುವ ಪ್ರಕ್ರಿಯೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಸರ್ವಪಕ್ಷಗಳ ಮತ್ತು ಸಂಘಟನೆಗಳ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಜೂ.7ರ ಶನಿವಾರ ದೊಡ್ಡಬೆಳವಂಗಲದಿಂದ ಪಾದಯಾತ್ರೆ ಹಮ್ಮಿಕೊಳ್ಳುವುದು ಮತ್ತು ಹಂತ ಹಂತವಾಗಿ ಹೋರಾಟವನ್ನು ರೂಪಿಸಲು ಸಭೆ ತೀರ್ಮಾನಿಸಿದೆ. ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೈತರ ಅಭಿಪ್ರಾಯ ಸಂಗ್ರಹಿಸಿದ ಶಾಸಕರು, ಯಾವುದೇ ಕಾರಣಕ್ಕೂ ದೊಡ್ಡಬಳ್ಳಾಪುರ ತಾಲೂಕನ್ನು ಬಿಬಿಎಂಪಿ ಕಸದ ತೊಟ್ಟಿಯಾಗಲು ಬಿಡೋದಿಲ್ಲ ಎಂದು ಘೋಷಿಸಿದರು.
ಸರ್ಕಾರ ತೀರಾ ಅವೈಜ್ಞಾನಿಕ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಬಿಬಿಎಂಪಿ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರಕ್ಕೆ ತಂದು ವಿಲೇವಾರಿ ಮಾಡುವುದು ಅಕ್ಷಮ್ಯ. ಇದರಿಂದ ಇಲ್ಲಿನ ಪರಿಸರ ಮತ್ತು ಜನರ
ಬದುಕಿನ ಆಯಾಮಗಳೇ ಬದಲಾಗಿವೆ. ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಜೊತೆಗೆ ರೈತರು, ಸಾರ್ವಜನಿಕರು ದುಸ್ತರದ ಬದುಕು ಸಾಗಿಸುವಂತಾಗಿದೆ. ಮಣ್ಣು ವಿಷವಾಗಿದೆ. ಅಂತರ್ಜಲ ಮಲಿನವಾಗಿದೆ. ಜೊತೆಗೆ ಗಾಳಿಯೂ ಮಾಲಿನ್ಯಗೊಂಡಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಜನ ಸಹಿಸಿದ್ದರು. ಆದರೆ ಈಗ ತಾಲೂಕಿನಲ್ಲಿ ಮತ್ತೊಂದು ಕಸವಿಲೇವಾರಿ ಘಟಕ ಮಾಡಲು ಹೊರಟಿದ್ದು, ನರಕ ಸದೃಶ ಪರಿಸರ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ರೈತರ ಭೂಮಿ ಕಸದ ಕೊಂಪೆಯಾಗುವುದು ಬೇಕಿಲ್ಲ. ಈ ಕೂಡಲೇ ಬಿಬಿಎಂಪಿ ಈ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ನಮ್ಮ ಶಾಂತಿಯುತ ಮನವಿಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ. ನಮ್ಮ ಅಹವಾಲು ಮತ್ತು ವಸ್ತುಸ್ಥಿತಿಗಳನ್ನು ಸರ್ಕಾರ ಅಧ್ಯಯನ ಮಾಡಬೇಕು. ಬೆಂಗಳೂರಿಗರನ್ನು ಮೆಚ್ಚಿಸಲು ಹಳ್ಳಿಗಾಡುಗಳನ್ನು ಹಾಳು ಮಾಡುವುದು ಅಸಹನೀಯ. ಈ ಬಗ್ಗೆ ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕು. ಪಾದಯಾತ್ರೆಯ ಶಾಂತಿಯುತ ಮನವಿಗೆ ಸ್ಪಂದಿಸಿ ಪ್ರಸ್ತಾವನೆ ಕೈಬಿಡಬೇಕು. ತಪ್ಪಿದಲ್ಲಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಸಭೆ ತೀರ್ಮಾನಿಸಿತು.
ಟೆರ್ರಾಫಾರ್ಮಗೂ ಕಸಬೇಡ: ಟೆರ್ರಾಫಾರ್ಮದಲ್ಲಿ ಕೂಡ ಕಸವಿಲೇವಾರಿ ವೈಜ್ಞಾನಿಕವಾಗಿಲ್ಲ. ವಾಸ್ತವವಾಗಿ ದಿನಕ್ಕೆ 40 ಲಾರಿಗಳಿಗೆ ಮಾತ್ರ ಅವಕಾಶವಿರುವ ಈ ಘಟಕದಲ್ಲಿ 100ಕ್ಕೂ ಹೆಚ್ಚು ಲಾರಿ ಕಸ ತಂದು ಸುರಿಯಲಾಗುತ್ತಿದೆ. ಜೊತೆಗೆ ಬೆಟ್ಟದೋಪಾದಿಯಲ್ಲಿ ಕಸ ವಿಲೇವಾರಿಯಾಗದೆ ಬಿದ್ದಿದೆ. ಇದರಿಂದಾಗಿ ಅನೇಕ ಪರಿಸರ ಸಂಬಂಧಿ ಸಮಸ್ಯೆಗಳು ತಲೆದೋರಿವೆ. ಮೊದಲು ಇದಕ್ಕೆ ಶಾಶ್ವತ ಪರಿಸರ ನೀಡಬೇಕು ಎಂದು ಸಂಘಟನೆಗಳ ಪ್ರತಿನಿಧಿಗಳು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

