ಬೆತ್ತಲೆ ಜೋಡಿ ಚಕ್ಕಂದದ ವೀಡಿಯೋ ಚಿತ್ರೀಕರಿಸಿದ್ದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಲ್ಲ
ಕ.ಪ್ರ.ವಾರ್ತೆ ರಾಮನಗರ ಜೂ.7
ಕಾವೇರಿ ನದಿ ಪಾತ್ರದ ನಿರ್ಜನ ಪ್ರದೇಶದಲ್ಲಿ ಬೆತ್ತಲೆ ಜೋಡಿ ಹಕ್ಕಿಗಳ ಚಕ್ಕಂದದ ವೀಡಿಯೋ ಚಿತ್ರೀಕರಿಸಿರುವುದು ಅರಣ್ಯ ಇಲಾಖೆ ಸಿಬ್ಬಂದಿಯೇ ಹೊರತು ಪೊಲೀಸರಲ್ಲ. ವೀಡಿಯೋ ಚಿತ್ರೀಕರಿಸಿರುವ ಸ್ಥಳ ನೆರೆಯ ಮಂಡ್ಯ ಜಿಲ್ಲೆಯ ಸರಹದ್ದಿಗೆ ಸೇರಿದ್ದೆಂದು ರಾಮನಗರ ಎಸ್ಪಿ ಅನುಪಮ್ ಅಗ್ರವಾಲ್ ಸ್ಪಷ್ಟಪಡಿಸಿದ್ದಾರೆ.
ವೀಡಿಯೋ ಚಿತ್ರೀಕರಣದ ಹಿಂದೆ ಪೊಲೀಸರ ಕೈವಾಡ ಶಂಕೆ ವ್ಯಕ್ತಪಡಿಸಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಒಬ್ಬರನ್ನು ತನಿಖೆಗೆ ನಿಯೋಜಿಸಿ, ಪಡೆಯಲಾದ ಪ್ರಾಥಮಿಕ ಹಂತದ ವರದಿಯಲ್ಲಿ ಮೇಲಿನ ಅಂಶ ರುಜುವಾತಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನಿಖಾಧಿಕಾರಿ ವೀಡಿಯೋ ವೀಕ್ಷಣೆ ನಡೆಸಿದಾಗ ಅದರಲ್ಲಿ ಖಾಕಿ ಪ್ಯಾಂಟ್ ಮತ್ತು ಚಪ್ಪಲಿ ಧರಿಸಿದ ಕಾಲು ಕಾಣಿಸಿದೆ. ಅದರಲ್ಲಿ ಕಂಡು ಬಂದ ಲಾಠಿ ಕೂಡ ಅರಣ್ಯ ಸಿಬ್ಬಂದಿಯದ್ದೆನ್ನಲಾಗುತ್ತಿದೆ. ನಗ್ನಳಾಗಿದ್ದ ಮಹಿಳೆ ತಾನು ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ ಧ್ವನಿಯಿದೆ. ರಾಮನಗರ ಸರಹದ್ದಿನ ಕಾವೇರಿ ನದಿ ಪಾತ್ರದಲ್ಲೆಲ್ಲೂ ದೇಗುಲ ಇಲ್ಲ. ಹೀಗಾಗಿ ಆ ಸ್ಥಳ ಮುತ್ತತ್ತಿಯೆ ಎಂದು ಅವರು ಖಚಿತಪಡಿಸಿದರು.
ವೀಡಿಯೋ ಚಿತ್ರೀಕರಿಸಿದಾತ ಪ್ರಸ್ತಾಪಿಸಿದ ಹೆಸರಿನ ವ್ಯಕ್ತಿ ಆ ಭಾಗದಲ್ಲೆಲ್ಲೂ ಪೊಲೀಸ್ ಇಲಾಖೆಯಲ್ಲಿಲ್ಲ. ಬದಲಾಗಿ ಅರಣ್ಯ ಇಲಾಖೆಯಲ್ಲಿ ಇದ್ದಾನೆಂದು ತಿಳಿದು ಬಂದಿದೆ. ಚಿತ್ರೀಕರಿಸಲ್ಪಟ್ಟ ವೀಡಿಯೋ ರಾಮನಗರದಾದ್ಯಂತ ಮೊಬೈಲ್‌ಗಳಲ್ಲಿ ಹರಿದಾಡುತ್ತಿರಬಹುದು. ಆದರೆ, ಅದು ಆಗಿರುವುದು ಮಂಡ್ಯ ಸರಹದ್ದಿನಲ್ಲಿ ಮತ್ತು ಚಿತ್ರೀಕರಿಸಿದವರು ಅರಣ್ಯ ಸಿಬ್ಬಂದಿ ಎಂದರು.
ಪ್ರಕರಣ ದಾಖಲಿಸಲು ಸಿದ್ಧ: ಬೆತ್ತಲಾಗಿದ್ದ ಮಹಿಳೆ ಮತ್ತು ಪುರುಷನ ಚಕ್ಕಂದದ ದೃಶ್ಯವನ್ನು ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿ, ಯುಟ್ಯೂಬ್ ಹಾಗೂ ಮೊಬೈಲ್‌ಗಳಿಗೆ ಹರಿಯಬಿಟ್ಟಿರುವ ಅಪರಾಧ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮಂಡ್ಯ ಪೊಲೀಸರಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಅನುಪಮ್ ಅಗ್ರವಾಲ್ ತಿಳಿಸಿದರು.
ಇಂತಹ ಪ್ರಕರಣಗಳಲ್ಲಿ ಸರಹದ್ದು ಮೀರಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಅವಕಾಶವಿದೆ. ಒಂದೊಮ್ಮೆ ಮಂಡ್ಯ ಜಿಲ್ಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳದಿದ್ದರೆ, ಆಗ ನಾವೇ ದೂರು ದಾಖಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

