ಬೆಂಗಳೂರು ಗ್ರಾಮಾಂತರ

ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

Published On :

ಕ.ಪ್ರ. ವಾರ್ತೆ ಟಿ ರಾಮನಗರ ಟಿ ಜೂ. 30
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಶ್ರಯಗಳಲ್ಲಿ ಗ್ರಾಮೀಣ ಸ್ವಚ್ಛತೆಯು ಒಂದಾಗಿದೆ. ತನ್ನ ಅಧೀನ ಇಲಾಖೆಗಳಿಗೆ ಮಾದರಿಯಾಗುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿ.ಪಂ. ಆವರಣದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಮತ್ತಿತರ ಕಳೆಯನ್ನು ಕೀಳುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಹಾಗೂ ಹಂಗಾಮಿ ಅಧ್ಯಕ್ಷ ಎಂ.ಕೆ. ಧನಂಜಯ ನೇತೃತ್ವದಲ್ಲಿ ಜಿ.ಪಂ. ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧೀನ ಇಲಾಖೆಗಳ ಅಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು.
ಗ್ರಾಮ ನೈರ್ಮಲ್ಯೀಕರಣದ ಅರಿವಿಗಾಗಿ ಸರ್ಕಾರವು ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸತ್ತಿದೆ. ಕಸ ವಿಲೇವಾರಿಯು ಎಲ್ಲೆಡೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಜಿಲ್ಲಾ ಅಭಿವೃದ್ಧಿಗೆ ಮೂಲವಾದ ಜಿ.ಪಂ. ಆವರಣದಲ್ಲಿಯೇ ಸ್ವಚ್ಛತೆ ಇಲ್ಲದಿದ್ದರೆ ಏನು ಪ್ರಯೋಜನ. ಇದನ್ನು ಮನಗಂಡ ಸಿಇಒ ಅವರು ಪ್ರತಿ ತಿಂಗಳ ಕೊನೆಯ ದಿನ ಸಂಜೆ 5.30 ರಿಂದ ಅರ್ಧ ಗಂಟೆ ಕಾಲ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಂಚಾಯತ್ ಭವನದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವಂತೆ ಸುತ್ತೋಲೆ ಹೊರಡಿಸಿ ಇಂದಿನಿಂದಲೇ ತಮ್ಮ ಅಧಿಕಾರಿ ಸಿಬ್ಬಂದಿಗಳ ಸಹಕಾರದಿಂದ ಶ್ರಮದಾನದ ಕೆಲಸಕ್ಕೆ ಮುನ್ನುಡಿ ಇಟ್ಟರು.
ಗ್ರಾಮ ನೈರ್ಮಲ್ಯೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಒಂದೆಡೆಯಾದರೆ ಸ್ವಚ್ಛತೆ ಅನ್ನುವುದು ಕೇವಲ ಒಂದು ದಿನ ಮಾಡುವುದಲ್ಲ. ಜೀವನ ಪರ್ಯಂತ ನಡೆಸುವುದು. ನುಡಿದಂತೆ ನಡೆ ಎಂಬ ನಾಣ್ಣುಡಿಯಂತೆ ನಮ್ಮ ಪರಿಸರ ನಮ್ಮ ಕಚೇರಿಯನ್ನು ಮೊದಲು ನೈರ್ಮಲ್ಯೀಕರಣಗೊಳಿಸಬೇಕಿದೆ. ಅದಕ್ಕಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಒಂದೆಡೆ ಸೇರಿಸಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದಾಗಿ ಈ ಸಂದರ್ಭದಲ್ಲಿ ಸಿಇಒ ವೆಂಕಟೇಶ್ ತಿಳಿಸಿದರು.
ಶ್ರಮದಾನದಲ್ಲಿ ಜಿ.ಪಂ. ಸದಸ್ಯ ಎಚ್.ಸಿ.ರಾಜಣ್ಣ, ಯೋಜನಾ ನಿರ್ದೇಶಕ ಬಸವರಾಜಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ, ಬಿಸಿಎಂ ಅಧಿಕಾರಿ ಸುಮಯ್ಯರೂಹಿ, ತೋಟಗಾರಿಕೆ ಅಧಿಕಾರಿ ಹೇಮಾ, ಜವಳಿ ಇಲಾಖೆಯ ಅಧಿಕಾರಿ ರವೀಂದ್ರ, ವಯಸ್ಕರ ಶಿಕ್ಷಣಾಧಿಕಾರಿ ಸಿದ್ದೇಗೌಡ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.