ವಂಡರ್‌ಲಾ ಸಮೀಪ ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ
ರಾಮನಗರ: ಅಂತರ್ಜಾತಿ ವಿವಾಹಕ್ಕೆ ಪೋಷಕರ ಸಮ್ಮತಿ ಸಿಗದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿಯ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ.
ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಿವಾಸಿ ರೂಪಶ್ರೀ (22) ಹಾಗೂ ಸುಂಕದಕಟ್ಟೆಯ ಪ್ರಶಾಂತ್(28) ಮೃತಪಟ್ಟವರು. ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು, ಸಾವಿನಲ್ಲಿ ಒಂದಾಗಿದ್ದಾರೆ.
ವಂಡರ್‌ಲಾ ಗೇಟ್ ಸನಿಹದ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಸಂಜೆ ವಿಷ ಸೇವಿಸಿ ಪ್ರೇಮಿಗಳು ನರಳುತ್ತಿದ್ದರು. ಅದನ್ನು ಕಂಡ ದಾರಿ ಹೋಕರು ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಇಬ್ಬರೂ ಕೊನೆಯುಸಿರೆಳೆದರು. ಎಂಬಿಎ ಮುಗಿಸಿದ್ದ ರೂಪಶ್ರೀ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದರೆ, ಪ್ರಶಾಂತ್ ಬ್ಯಾಂಕೊಂದರ ನೌಕರ. ಬೇರೆ ಬೇರೆ ಜಾತಿಗೆ ಸೇರಿದ ಅವರ ಪ್ರೀತಿ ಮತ್ತು ಮದುವೆಗೆ ಪೋಷಕರಿಂದ ಸಮ್ಮತಿ ಸಿಗದಿರುವುದೇ ಆತ್ಮಹತ್ಯೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರೇಮದ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಉಭಯ ಕುಟುಂಬದವರ ವಾದವಾಗಿತ್ತು. ಶವ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು. ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸಕೋಟೆ- ಬೆಂಗಳೂರು ಸಂಪರ್ಕ ಸಾರಿಗೆ
ಬೆಂಗಳೂರು: ರಾಜ್ಯ ಸೇರಿದಂತೆ, ದೇಶದಲ್ಲಿ ಕಾಂಗ್ರೆಸ್ ಈ ಬಾರಿ ಭರ್ಜರಿ ಗೆಲುವು ಸಾಧಿಸಲಿದೆ. ಈ ಮೂಲಕ ಕೇಂದ್ರದಲ್ಲಿ ಯುಪಿಎ ಸರ್ಕಾರ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಕೇಂದ್ರದ ಪೆಟ್ರೋಲಿಯಂ ಸಚಿವ ಡಾ.ಎಂ.ವೀರಪ್ಪಮೊಯ್ಲಿ ಅಭಿಪ್ರಾಯಪಟ್ಟರು.
ಬಿಎಂಟಿಸಿ ವತಿಯಿಂದ ಹೊಸಕೋಟೆಯ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಬಿಗ್ ಟ್ರಂಕ್ ಹಾಗೂ ಫೀಡರ್ ಸರ್ವೀಸ್ ಬಸ್ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುಪಿಎ ಸರ್ಕಾರ ಇದುವರೆಗೂ ಉತ್ತಮ ಆಡಳಿತ ನೀಡಿದೆ. ನಾವು ಚುನಾವಣೆಗೆ ಸಿದ್ಧರಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಪಕ್ಷ ಎಲ್ಲೆಡೆ ಗೆಲವು ಸಾಧಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಒಟ್ಟು 12 ಕಾರಿಡಾರ್‌ಗಳಲ್ಲಿ ಈ ಸೇವೆ ಪ್ರಾರಂಭಿಸಲು ನಿರ್ಧರಿಸಿದ್ದು, ಆನೇಕಲ್, ಕನಕಪುರದಲ್ಲಿ ಚಾಲನೆ ದೊರೆತಿದೆ. ಉಳಿದೆಡೆ ಹಂತಹಂತವಾಗಿ ಆರಂಭಿಸಲಾಗುವುದು ಎಂದರು.
ಸೇವೆ ಆರಂಭ: ಹೊಸಕೋಟೆ ತಾಲೂಕಿನ ಗ್ರಾಮೀಣ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಿಡಿ ಬಸ್- ಫೀಡರ್(ಸಂಪರ್ಕ ಸಾರಿಗೆ ಬಸ್) ಸೇವೆ ಹಾಗೂ ಹೊಸಕೋಟೆಯಿಂದ ಬೆಂಗಳೂರಿಗೆ- ಬೆಂಗಳೂರಿನಿಂದ ಹೊಸಕೋಟೆಗೆ ಸೇವೆ ನೀಡಲು ಬಿಗ್ ಟ್ರಂಕ್ ಎಂಬ ನೂತನ ಸೇವೆಯನ್ನು ಬುಧವಾರದಿಂದ ಆರಂಭವಾಗಿದೆ.
ಬಿಗ್ ಟ್ರಂಕ್ ಬಸ್ ಕೆ.ಆರ್.ಮಾರುಕಟ್ಟೆಯಿಂದ- ಹೊಸಕೋಟೆ(ಸಂಖ್ಯೆ ಎಂಕೆಟಿ 12 ಎಚ್), ಮೆಜೆಸ್ಟಿಕ್-ಹೊಸಕೋಟೆ(ಸಂಖ್ಯೆ ಕೆಬಿಎಸ್ 12ಎಚ್)ಮಾರ್ಗವಾಗಿ ಪ್ರತಿ 10 ನಿಮಿಷಕ್ಕೊಂದರಂತೆ 20 ಬಸ್ ಸಂಚರಿಸಲಿವೆ.
ಅದೇ ರೀತಿ 30 ಮಿಡಿ ಬಸ್ ಫೀಡರ್‌ಗಳನ್ನು ಒದಗಿಸಲಾಗಿದೆ. ಈ ಬಸ್‌ಗಳು ಹೊಸಕೋಟೆಯ 81 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತವೆ ಹಾಗೂ 5 ಮಾರ್ಗಗಳಲ್ಲಿ ಸಂಚರಿಸಲಿವೆ. ಈ ಬಸ್‌ಗಳು 30 ನಿಮಿಷಕ್ಕೊಂದು ಸಂಚರಿಸಲಿವೆ.
ಬಸ್ ಮಾರ್ಗ ಸಂಖ್ಯೆ
12ಎಫ್1, 12ಎಫ್2, 12ಎಫ್3, 12ಎಫ್4, 12ಎಫ್5
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

