ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ತಲುಪಿಸುವ ಮಾಧ್ಯಮ ಜಾನಪದ ಕಥೆ
ರಾಮನಗರ: ಆಧುನಿಕ ಮಾಧ್ಯಮಗಳ ಭರಾಟೆಯಿಂದಾಗಿ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಕಥೆಗಳನ್ನು ಹೇಳುವವರು ಹಾಗೂ ಕೇಳುವವರು ತೀರಾ ಕಡಿಮೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜು ಅಭಿಪ್ರಾಯಪಟ್ಟರು.
ಜಿಲ್ಲಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ನಗರದ ವಿವಿಧ ಶಾಲೆಗಳಲ್ಲಿ ಜನರ ಬಳಿಗೆ ಸಾಹಿತ್ಯ ಎಂಬ ಘೋಷಣೆಯಡಿ ಹಮ್ಮಿಕೊಂಡಿದ್ದ ಬನ್ನಿ ಕಥೆ ಕೇಳುವ ಎಂಬ ವಿಶೇಷ ಕಾರ್ಯಕ್ರಮವನ್ನು ಶಾಂತಿನಿಕೇತನ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಥೆಗಳು ನಮ್ಮ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುವ ಮಾಧ್ಯಮಗಳಾಗಿವೆ ಎಂದರು.
ಹಿಂದಿನ ಕಾಲದಲ್ಲಿ ತಾಯಿ ತನ್ನ ಮಗುವಿಗೆ ಕಥೆಗಳನ್ನು ಹೇಳುವ ಮೂಲಕ ಕೈತುತ್ತಿನ ಜತೆಗೆ ನಮ್ಮ ಸಂಸ್ಕೃತಿಯನ್ನೂ ಬೆರೆಸಿ ಉಣಿಸುತ್ತಿದ್ದಳು. ಆದರೆ, ಇಂದಿನ ದಿನಗಳಲ್ಲಿ ಯಾವುದೇ ಮನೆ ಹೊಕ್ಕರೂ ದೂರದರ್ಶನದ ಘೀಳನ್ನು ಅಂಟಿಸಿಕೊಂಡು, ಕಥೆ ಹೇಳುವ ಸಂಸ್ಕೃತಿಯೇ ಮಾಯಾವಾಗಿದೆ ಎಂದು ವಿಷಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಥೆ ಹೇಳುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು. ಈ ಕಾರ್ಯಕ್ರಮದಿಂದ ನಾಡಿನ ಜನತೆಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಸಂದೇಶ ಹೋಗಲಿದ್ದು, ನಮ್ಮ ಸಂಸ್ಕೃತಿಯ ಬಗೆಗೆ ಅಭಿಮಾನ ಮೂಡುವಂತಾಗಲಿದೆ ಎಂದರು.
ಇಂದಿನ ಮಕ್ಕಳು ಸೂಕ್ಷ್ಮಮತಿಗಳಾಗಿದ್ದಾರೆ. ಅವರಿಗೆ ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿಯನ್ನು ಬೋಧಿಸಿದರೆ ಅರ್ಥೈಸಿಕೊಳ್ಳುವರು. ಮಕ್ಕಳ ಬದುಕಿಗೆ ಹತ್ತಿರವಾದ ಸಾಹಿತ್ಯ ವಿಷಯ ಹೇಳಿ ಕಲಿಸುವಲ್ಲಿ ನಾವೆಲ್ಲರು ಎಡವುತ್ತಿದ್ದೇವೆ. ಇನ್ನಾದರೂ ಮಕ್ಕಳಲ್ಲಿ ಸಾಹಿತ್ಯ ಚಿಂತನೆ ಮೂಡಿಸುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಂತಿನೀಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕುಮಾರಸ್ವಾಮಿ ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಈ ಹಿಂದೆ ತಾಯಿಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವಾಗ ಇತಿಹಾಸದಲ್ಲಿ ಮಹಾ ಪುಣ್ಯ ಪುರಷರ, ಮಾನವೀಯ ಮೌಲ್ಯ ಮತ್ತು ದೇಶ ಪ್ರೇಮ, ತಾಗ್ಯಮಯಿ ಹಾಗೂ ಜಾನಪದ ಕತೆಗಳನ್ನು ಹೇಳುವ ಮೂಲಕ ಚಕ್ಕಿಂದಿನಿಂದಲೇ ಉತ್ತಮ ಗುಣಗಳನ್ನು ಬೆಳಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಪರಿಪಾಠವಿತ್ತು ಎಂದರು.
ಈ ಸಂಸ್ಕೃತಿ ಕಾಲಕ್ರಮೇಣ ಕಡಿಮೆಯಾಗಿದ್ದು, ಮಾರೆಯಾಗುತ್ತಿರುವ ಇಂತಹ ಜಾನಪದ ಸಂಸ್ಕೃತಿಯನ್ನು ಇಂದಿನ ಯುವ ಸಮಾಜಕ್ಕೆ ನೆನಪು ಮಾಡಿಕೊಟ್ಟು ಸಾಹಿತ್ಯ ಚಿಂತನೆಯತ್ತ ಕರೆದ್ಯೊಯುವ ಪ್ರಾಯೋಗಿಕ ಪ್ರಯತ್ನವಾಗಿದ್ದು, ಅವರಲ್ಲಿನ ಸಾಹಿತ್ಯವನ್ನು ಓರೆಗಚ್ಚುವ ಕೆಲಸವಾದಾಗ ಇಂತಹ ಹೊಸ ಆಲೋಚನೆ ಸಾರ್ಥಕವಾಗಲಿದೆ. ಯುವಜನಾಂಗವು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಬನ್ನಿ ಕಥೆ ಕೇಳುವ ರಥಕ್ಕೆ ಕನ್ನಡ ಬಾವುಟ ಬೀಸುವ ಮೂಲಕ ಡಾ.ಕುರುವ ಬಸುವರಾಜು ಚಾಲನೆ ನೀಡಿದರು. ನಗರದ ವಿವಿಧೆಡೆ ರಥ ಸಂಚಾರ ಮಾಡುವ ಮೂಲಕ ಸಾಹಿತ್ಯಾಸ್ತಕರ ಗಮನ ಸೆಳೆಯಿತು.
ಡಾ.ಮಧೂಸೂದನಾಚಾರ್ಯ ಜೋಷಿ, ಡಿಡಿಪಿಯು ಎಚ್.ಡಿ.ಲಿಂಗರಾಜು, ದೇವರಾಜು, ಸಿ.ವಿ.ಆನಂದ್, ಡಾ.ಕುಡ್ಲೂರು ವೆಂಕಟಪ್ಪ, ಸಿ.ರಾಜಶೇಖರ್ ಕಥೆಗಳನ್ನು ಹೇಳಿದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಟಿ.ದಿನೇಶ, ಶಿವಸ್ವಾಮಿ, ಜಿ.ಟಿ.ಕೃಷ್ಣಪ್ಪ, ತಿಬ್ಬೇಗೌಡ, ರಾಜೇಶ್ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

