ಬೆಂಗಳೂರು ಗ್ರಾಮಾಂತರ

'ವಿದ್ಯಾರ್ಥಿಗಳು ವ್ಯವಸ್ಥೆಯ ನಿಜವಾದ ತಿರುಳು ಅರಿಯಬೇಕು'

Published On :

ಚನ್ನಪಟ್ಟಣ: ವಿದ್ಯಾರ್ಥಿಗಳು ಭ್ರಮಾಧೀನರಾಗದೆ ವ್ಯವಸ್ಥೆಯ ನಿಜವಾದ ತಿರುಳನ್ನು ಅರಿತು ವ್ಯಕ್ತಿತ್ವ ರೂಪಿಸಿ ಕೊಳ್ಳ ಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ತಿಳಿಸಿದರು. ಇಲ್ಲಿನ ರೋಟರಿ ಭವನದಲ್ಲಿ ಭಾರತ ವಿಕಾಸ್ ಪರಿಷದ್‌ನಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಬೋಧನಾ ತರಗತಿಗಳ ಮುಕ್ತಾಯ ಸಮಾರಂಭ ಹಾಗೂ ಸರಸ್ವತಿ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿಮ್ಮ ಓದು ನಿಮ್ಮ ಬದುಕನ್ನು ಗಂಭೀರವಾಗಿ ಕಟ್ಟಿಕೊಳ್ಳಬೇಕಾಗಿದೆ ಇದಕ್ಕೆ ಕಾಲೇಜು ದಿನಗಳಲ್ಲೇ ಸಿದ್ದತೆ ಮಾಡಿ ಕೊಳ್ಳ ಬೇಕೆಂದು ಕರೆನೀಡಿದರು. ವಿದ್ಯಾರ್ಥಿಗಳಿಗೆ ಅನ್ನ ಮತ್ತು ಭೂಮಿಯ ನಡುವಿನ ಸಂಬಂಧದ ಬಗ್ಗೆ ಅರಿವಿರಬೇಕು. ಜಾಗತೀಕರಣದಿಂದಾಗಿ ನಮ್ಮ ನೆಲದ ಮೂಲ ಸಂಸ್ಕೃತಿಯನ್ನು ಉಳಿಸಿ ಕೊಳ್ಳಲು ನಾವೆಲ್ಲ ಹೋರಾಡುವಂತಾಗಿದೆ. ಕೃಷಿಗೆ ಪೂರಕವಾಗಿ ಬೆಳೆದ ಸಂಸ್ಕೃತಿ ವಿನಾಶದ ಅಂಚಿನಲ್ಲಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಜಾಗೃತಗೊಳ್ಳ ಬೇಕಿದೆ ಎಂದರು. ಮುಖ್ಯ ಅತಿಥಿ ರಾಮನಗರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಸು.ತ. ರಾಮೇಗೌಡ ಮಾತನಾಡಿ, ಬದುಕು ಅರ್ಥಪೂರ್ಣವಾಗಲು ವಿದ್ಯಾರ್ಜನೆಯ ಸಂದರ್ಭದಿಂದಲೇ ಪ್ರತಿ ವಿಷಯವನ್ನು ವಾಸ್ತವ ನೆಲೆಯಲ್ಲಿ ವೈಚಾರಿಕ ಮನ:ಸ್ಥಿತಿಯಲ್ಲಿ ನೋಡಬೇಕಿದೆ ಎಂದು ಹೇಳಿದರು. ರೋಟರಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ವಿದ್ಯಾರ್ಥಿಗಳು ಚನ್ನಾಗಿ ಓದಿ ಸಮಾಜದ ಹಾಗೂ ಗುರು-ಹಿರಿಯರು, ತಂದೆ-ತಾಯಂದಿರಿಗೆ ವಿಧೇಯರಾಗಿ ನಡೆದು ನಿಮ್ಮ ಬದುಕು ಅರ್ಥಪೂರ್ಣವಾಗುವಂತೆ ಮಾಡಿಕೊಳ್ಳಿ ಎಂದರು. ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ವಸಂತ್‌ಕುಮಾರ್, ಕಣ್ವ ಶಾಖೆ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ  ಉಚಿತ ಬೋಧನ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲಾ ಶಿಕ್ಷಕರಿಗೆ ಅಪರ್ಣ ಜ್ಯೂಯಲರ್ಸ್‌ನ ಎಂ.ಕೃಷ್ಣಯ್ಯ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು. ಬೃಂದಾರಾವ್ ನಿರೂಪಿಸಿದರು. ನಾಗರಾಜ್ ವಂದಿಸಿದರು. ಭಾ.ವಿ.ಪ. ದಕ್ಷಿಣ ಪ್ರಾಂತ ಕ್ರೀಡಾ ಸಮಿತಿ ಸಂಚಾಲಕ ಬಿ.ಎನ್.ಕಾಡಯ್ಯ, ಕಾರ್ಯದರ್ಶಿ ಟಿ.ಚನ್ನಪ್ಪ, ಖಜಾಂಚಿ ಎಸ್.ಶಿವಲಿಂಗಯ್ಯ, ಶಿಕ್ಷಕ ಭಂಡಾರಿ, ಟಿ.ಆರ್.ರಂಗಸ್ವಾಮಿ, ಕುಮಾರ್, ಪ್ರಸನ್ನಕುಮಾರ್ ಇದ್ದರು.
ನಾಯಿಗಳ ದಾಳಿ; 5 ಕುರಿ ಸಾವು
ಮಳವಳ್ಳಿ: ನಾಯಿಗಳ ಹಿಂಡೊಂದು ಐದು ಕುರಿಗಳನ್ನು ಕಚ್ಚಿ ಸಾಯಿಸಿರುವ ಘಟನೆ ಚಂದಹಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಮೆಲ್ಲಹಳ್ಳಿ ತಮ್ಮಯ್ಯರಿಗೆ ಸೇರಿದ ಐದು ಕುರಿ ಮೇವಿಗೆ ಬಿಟ್ಟಿದ್ದ ಸಂದರ್ಭದಲ್ಲಿ ನಾಯಿಗಳ ಹಿಂಡು ದಾಳಿ ಮಾಡಿ ಐದು ಕುರಿಗಳನ್ನು ಸಾಹಿಸಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಗ್ರಾಮಾಂತರ ಪಿಎಸ್‌ಐ ಸುಬ್ಬಯ್ಯ  ಪಶು ವೈದ್ಯಾಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿದ್ದಾರೆ.
ಲಯನ್ಸ್‌ನಿಂದ ಶಾಶ್ವತ ಸಮಾಜಮುಖಿ ಸೇವೆ
ಮದ್ದೂರು: ಆರೋಗ್ಯ ಮತ್ತು ಪರಿಸರದಂತಹ ಶಾಶ್ವತ ಸಮಾಜಮುಖಿ ಸೇವಾ ಕಾರ್ಯಕೈಗೊಳ್ಳುವ ಲಯನ್ಸ್ ಸಂಸ್ಥೆಗಳಿಗೆ ಅಂತಾರಾಷ್ಟೀಯ ಸಂಸ್ಥೆಯಿಂದ ಆರ್ಥಿಕ ನೆರವು ನೀಡಲು ಚಿಂತನೆ ನಡೆಸಲಾಗಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಟಿ.ಜೆ. ರಾಮಮೂರ್ತಿ ಹೇಳಿದರು.
ಪಟ್ಟಣದ ಶ್ರೀವೆಂಕಟೇಶ್ವರ ರೆಸಿಡೆನ್ಸಿ ಸಭಾಂಗಣದಲ್ಲಿ ಮದ್ದೂರು ಲಯನ್ಸ್ ಸಂಸ್ಥೆ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ವತಿಯಿಂದ ಈ ವರ್ಷ 1 ಕೋಟಿಗೂ ಹೆಚ್ಚಿನ ಜನರಿಗೆ ಆರೋಗ್ಯ ಶಿಕ್ಷಣ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ದೊರಕಿಸಿಕೊಡಲಾಗಿದೆ ಎಂದು ತಿಳಿಸಿದರು.
ನಿಸ್ವಾರ್ಥ ಸೇವೆಯೇ ಸಂಸ್ಥೆಯ ದ್ಯೇಯ ಎಂದು ಅರಿತಿರುವ ಮದ್ದೂರು ಲಯನ್ಸ್ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮದ್ದೂರು ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ಕೃಷ್ಟಪ್ಪ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಅಪರ ಕಾರ್ಯದರ್ಶಿ ನಾರಾಯಣಸ್ವಾಮಿ, ಪಾಂಡುರಂಗ ಗುಪ್ತ, ಪ್ರಾಂತೀಯ ಅಧ್ಯಕ್ಷ ಎಚ್. ಮಾದೇಗೌಡ, ವಲಯಾಧ್ಯಕ್ಷ ಚಿಕ್ಕಸ್ವಾಮಿ, ಜಿಲ್ಲಾಧ್ಯಕ್ಷ ವಿ.ಕೆ. ಜಗದೀಶ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಎಂ.ಪಿ. ಅಮರಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.