ಆನೇಕಲ್ ಅಭಿವೃದ್ಧಿಗೆ ಕೈ ಜೋಡಿಸಿ: ಶಿವಣ್ಣ
ಆನೇಕಲ್ಲು: ಪಟ್ಟಣ 50 ಸಹಸ್ರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಸತತ 17 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಶಾಶ್ವತ ಕುಡಿಯುವ ನೀರು, ಜೋಡಿ ರಸ್ತೆ, ರಸ್ತೆ ಅಗಲೀಕರಣ, ಪಾರ್ಕ್ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಪುರಸಭಾ ಸದಸ್ಯರು ಆನೇಕಲ್ಲಿನ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಿ ಸಹಕರಿಸಬೇಕೆಂದು ಶಾಸಕ ಬಿ. ಶಿವಣ್ಣ ಮನವಿ ಮಾಡಿದ್ದಾರೆ. ಅವರು ಪುರಸಭಾ ಚುನಾವಣೆ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯ ನಂತರ ಮಾತನಾಡಿ ಆನೇಕಲ್ ಪಟ್ಟಣಕ್ಕೆ ಕಾವೇರಿ ನೀರು ತರುವ ನಿಟ್ಟಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಂಸದ ಸುರೇಶ್ ಅವರ ಜೊತೆ ನಿಯೋಗ ತೆರಳಿ ಮುಖ್ಯ ಮಂತ್ರಿಗಳ ಜೊತೆ ನಡೆಸಿದ ಮಾತುಕತೆ ಸಫಲವಾಗಿ 15 ಎಂಎಲ್ಡಿ ಕಾವೇರಿ ನೀರು ಮಂಜೂರಾಗಿ ಕಾಮಗಾರಿ ಟೆಂಡರ್ ಹಂತ ದಾಟಿದೆ. ಆನೇಕಲ್- ಚಂದಾಪುರ 4 ಪಥ ರಸ್ತೆ ಅನುಮೋದನೆ ಪಡೆಯಲಾಗಿದೆ. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗ್ರಾಮಾಂತರ ಸಾರಿಗೆ ಮೂಲಕ ಹಳ್ಳಿ ಹಳ್ಳಿಗಳ ನಡುವೆ ಸಂಚಾರ ಸಂಪರ್ಕ ನೀಡಿ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಮತ್ತು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ರೇಲ್ವೆ ಮುಂಗಡ ಟಿಕೆಟ್ ಕೌಂಟರ್ ಉದ್ಘಾಟಿಸಿ ಜನ ಸಾಮಾನ್ಯರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದರು.
ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ: ಆನೇಕಲ್ ಪುರಸಭೆಯ 23 ವಾರ್ಡುಗಳ ಪೈಕಿ 6 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್ 6 ಅಭ್ಯರ್ಥಿಗಳ ಸಹಕಾರ ಕೋರಿದ್ದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಂಚಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಮತ್ತು ಸಚಿವರ ಸಹಕಾರದಿಂದ ಗಡಿ ತಾಲೂಕಿಗೆ ವಿಶೇಷ ಅನುದಾನ ತರಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಮ ನಿರ್ದೇಶಿತ ಸದಸ್ಯರ ಸಹಕಾರದಿಂದ ಆನೇಕಲ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜೆಡಿಎಸ್ ಸೇರಿದಂತೆ ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಅಭಿವೃದ್ಧಿಗಾಗಿ ಸಹಕಾರ ನೀಡಬೇಕೆಂದು ಕೋರಿದ್ದಾರೆ. ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ. ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

