ಅಕ್ರಮ ದೃಢಪಟ್ಟಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ತರಾಟೆ
ರಾಮನಗರ: ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪೇದೆ ಎಂ.ರಮೇಶ್ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ, ಕೆಲಸ ಗಿಟ್ಟಿಸಿರುವುದು 4 ವರ್ಷದ ಹಿಂದೆಯೇ ದೃಢಪಟ್ಟಿದ್ದರೂ ಕ್ರಮ ಕೈಗೊಳ್ಳದ ಉನ್ನತ ಅಧಿಕಾರಿಗಳ ಧೋರಣೆಗೆ ರೈತ ಸಂಘದ ರಾಜ್ಯ ಮುಖಂಡ ಸಿ.ಪುಟ್ಟಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೂಲತಃ ತಮಿಳುನಾಡಿನ ರಮೇಶ್ ಮೊದಲಿಯಾರ್ ಪಿಳ್ಳೈ ಜಾತಿಗೆ ಸೇರಿದ್ದು, ಬೆಂಗಳೂರು ಉತ್ತರ ಮತ್ತು ಚನ್ನಪಟ್ಟಣ ತಹಸೀಲ್ದಾರ್ ಅವರಿಂದ 1992ರಲ್ಲೇ ಪರಿಶಿಷ್ಟ ಜಾತಿಗೆ ಸೇರಿದ ಆದಿ ದ್ರಾವಿಡ ಪ್ರಮಾಣ ಪತ್ರ ಪಡೆದುಕೊಂಡು, ಕೆಲಸಕ್ಕೆ ಸೇರಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೀಗೆ ಸರ್ಕಾರಕ್ಕೆ ವಂಚನೆ ಮಾಡಿರುವ ನೌಕರನನ್ನು ನ್ಯಾಯಾಲಯ ಕರ್ತವ್ಯ ಮತ್ತು ಬೆಸ್ಕಾಂ ವಿಚಕ್ಷಣ ದಳದಂತಹ ಸೇವೆ, ಗಣ್ಯರು ಮತ್ತು ಅತಿಗಣ್ಯರ ಭದ್ರತೆ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಇಂತಹ ಕಪಟಿಗೆ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳು ಮನ್ನಣೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ನಾಯಿಗಳನ್ನು ಸಾಕುತ್ತಿರುವ ರಮೇಶ್ ಅದರ ಮರಿಗಳನ್ನು ಮೇಲಧಿಕಾರಿಗಳಿಗೆ ಪುಕ್ಕಟೆಯಾಗಿ ನೀಡುತ್ತಾನೆ. ಈತನ ನಾಯಿ ನಿಷ್ಠೆಗೆ ಮೆಚ್ಚಿದ ಅಧಿಕಾರಿಗಳು ವಂಚನೆಯನ್ನು ಮನ್ನಿಸಿ, ಕೆಲಸವನ್ನು ಉಳಿಸುವ ಜತೆಗೆ ಆತನ ರಕ್ಷಣೆ ಮಾಡುತ್ತಿದ್ದಾರೆ ಎಂದು ಪುಟ್ಟಸ್ವಾಮಿ ಕಿಡಿ ಕಾರಿದರು.
ನೆರೆಗೆಲ್ಲಾ ಹೊರೆ: ಪೇದೆ ರಮೇಶ ಸರ್ಕಾರಕ್ಕೆ ವಂಚಿಸಿ ಕೆಲಸ ಗಿಟ್ಟಿಸಿದ್ದು ಮಾತ್ರವಲ್ಲದೆ, ತನ್ನ ವಾಸದ ಮನೆಯ ನೆರೆ ಹೊರೆಯವರಿಗೆಲ್ಲಾ ಜಾತಿ ಹೆಸರಿನಲ್ಲಿ ಕಿರುಕುಳ ನೀಡುವ ಚಾಳಿ ಮೈಗೂಡಿಸಿಕೊಂಡಿದ್ದಾನೆ. ದಲಿತ ಅಲ್ಲದಿದ್ದರೂ ದಲಿತ ದೌರ್ಜನ್ಯ ತಡೆ ಕಾಯ್ದೆ ಬಳಸಿಕೊಂಡು, ಹಲವರನ್ನು ಕಟಕಟೆ ಹತ್ತಿಸಿದ್ದಾನೆ ಎಂದು ಅವರು ಆರೋಪಿಸಿದರು.
ತಾನು ವಾಸವಿದ್ದ ಮನೆಯ ಮಾಲೀಕರನ್ನೇ ಬದಲಿಸಿ, ಅವರಿಂದ ತನ್ನ ತಂದೆ ಅಂಕಯ್ಯ ಹೆಸರಿಗೆ ಸದರಿ ಮನೆಯನ್ನು ಕ್ರಯ ಪತ್ರ ಮಾಡಿಸಿಕೊಂಡ ನಿದರ್ಶನವಿದೆ. ಹೀಗೆ ಪರರ ಆಸ್ತಿಗೆ ಮಾಲೀಕತ್ವ ಪಡೆದಿರುವುದು ಚನ್ನಪಟ್ಟಣ ನ್ಯಾಯಾಲಯದಲ್ಲಿ ರುಜುವಾತಾಗಿದೆ ಎಂದು ರಮೇಶ ಪುರಾಣಗಳನ್ನು ಪುಟ್ಟಸ್ವಾಮಿ ಬಿಚ್ಚಿಟ್ಟರು.
21 ವರ್ಷ ಪೇದೆಯಾಗಿ ಲಕ್ಷಾಂತರ ರು. ವೇತನ, ಭತ್ಯೆ ಸಹಿತ ಸಾಕಷ್ಟು ಸವಲತ್ತುಗಳನ್ನು ರಮೇಶ ಪಡೆದುಕೊಂಡಿದ್ದು, ಸರ್ಕಾರ ಅದನ್ನೆಲ್ಲ ಬಡ್ಡಿ ಸಮೇತ ವಸೂಲು ಮಾಡಬೇಕು. ಆರೋಪಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಮೇಶ ನೀಡಿದ್ದ ದೂರಿನಿಂದ ಆರೋಪಕ್ಕೆ ಗುರಿಯಾಗಿರುವ ಸಿ.ಎಸ್.ಚಂದ್ರಶೇಖರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

