ಬೆಂಗಳೂರು ಗ್ರಾಮಾಂತರ

ಖಾಸಗಿ ಶಾಲೆಗಳಿಗೆ ಸಮಾನಾಂತರವಾಗಿ ಸರ್ಕಾರಿ ಶಾಲೆಗಳ ಚಟುವಟಿಕೆ

Published On :

ನೆಲಮಂಗಲ: ಖಾಸಗಿ ಶಾಲೆಗಳಿಗೆ ಸಮಾನಾಂತರವಾಗಿ ಸರ್ಕಾರಿ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳನ್ನು  ನಡೆಸುತ್ತಿವೆ ಎಂದು ಗ್ರಾ.ಪಂ. ಮಾಜಿ ಸದಸ್ಯ ವೆಂಕಟೇಶ್ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ಟಿ.ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಶಾರದ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ನಡೆದ ಕ್ರೀಡಾ ಹಾಗೂ  ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಗೌಹರ್‌ಜಾನ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಾಂಜಿನಪ್ಪ, ಉಪಾಧ್ಯಕ್ಷೆ ಕಮಲ, ಶಿಕ್ಷಕರ ಸಂಘದ ನಿರ್ದೇಶಕ ನಾಗೇಶ್, ಕ.ಸಾ.ಪ.ತಾಲೂಕು ಅಧ್ಯಕ್ಷ ಎನ್. ರಾಜಶೇಖರ್, ವಿಲಿಯಂ, ಶಾಲಾ ಶಿಕ್ಷಕರು ಪೋಷಕರು ಇದ್ದರು.
ಜಗದ್ಗುರು ರೇಣುಕಾಚಾರ್ಯ ಜಯಂತಿ
ನೆಲಮಂಗಲ: ಪಟ್ಟಣದ ಅರಳೇಪೇಟೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀ ಬಸವೇಶ್ವರಸ್ವಾಮಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಶ್ರೀ ಗಣಪತಿಗೆ ರುದ್ರಾಭಿಷೇಕ  ನೆರವೇರಿಸಿದರು. ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೆ ಹೆಸರುಬೇಳೆ, ಪಾನಕ, ಪ್ರಸಾದ ವಿತರಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯಮೂರ್ತಿಗೆ ವಿಶೇಷವಾಗಿ ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ  ಬಸವೇಶ್ವರ ಯುವಕ ಮಿತ್ರ ಮಂಡಳಿಯ ಗಣೇಶ್, ಪ್ರಸನ್ನ ಕುಮಾರ್, ಚಂದ್ರು, ಕಿರಣ್, ಸಂಜೀವ್ ಕುಮಾರ್, ಚನ್ನಬಸವರಾಜು, ದೀಪಕ್ ಸೇರಿದಂತೆ ನೂರಾರು ಜನ ಇದ್ದರು.     
ಎಸ್‌ಬಿಐ ಇಪೇ ಯೋಜನೆ ಪ್ರಾರಂಭ
ಬೆಂಗಳೂರು: ಇ-ವಾಣಿಜ್ಯ ವ್ಯವಸ್ಥೆಯನ್ನು ಉತ್ತೇಜಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ ಇಪೇ ಯೋಜನೆ ಪ್ರಾರಂಭಿಸಿದೆ. ಸುಮಾರು 40 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳೊಂದಿಗೆ ಆನ್‌ಲೈನ್ ಹಣಕಾಸು ವ್ಯವಹಾರಕ್ಕೆ ಇಪೇ ಯೋಜನೆ ಬಳಸಿಕೊಳ್ಳಬಹುದು. ಆನ್‌ಲೈನ್ ಸಮಗ್ರ ವ್ಯವಹಾರ ಯೋಜನೆ ಪ್ರಾರಂಭಿಸಿರುವ ಮೊದಲ ಬ್ಯಾಂಕ್ ಎಂಬ ಶ್ರೇಯಕ್ಕೆ ಎಸ್‌ಬಿಐ ಪಾತ್ರವಾಗಿದೆ. ಕಳೆದ 2008ಕ್ಕೆ ಹೋಲಿಸಿದರೆ 2012ರಲ್ಲಿ ಆನ್‌ಲೈನ್ ಹಣಕಾಸು ವ್ಯವಹಾರ ಶೇ.32ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ಈ ಯೋಜನೆ ಪ್ರಾರಂಭಿಸಿದೆ. ವರ್ತಕರು, ಗುತ್ತಿಗೆದಾರರು ಹಾಗೂ ಸರ್ಕಾರಿ ಹಣಕಾಸು ವ್ಯವಹಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಪ್ರಾರಂಭಿಸಲಾಗಿದೆ.
ಜ್ಯೋತಿಷ್ಯ ಉಚಿತ ತರಬೇತಿ
ಬೆಂಗಳೂರು: ಶಿವಶಕ್ತಿ ಜ್ಯೋತಿಷ್ಯ ವಿದ್ಯಾ ಕೇಂದ್ರ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಜ್ಯೋತಿಷ್ಯ, ಆಯುರ್ವೇದದ  ಉಚಿತ ತರಬೇತಿಯನ್ನು ನೀಡುತ್ತಿದೆ. ಜ್ಯೋತಿಷ್ಯ, ವಾಸ್ತು, ಸಂಖ್ಯಾ ಶಾಸ್ತ್ರ, ಹಸ್ತ ಸಾಮುದ್ರಿಕಾ, ಆಯುರ್ವೇದ, ಅಧ್ಯಾತ್ಮಿಕ ಮತ್ತು ಸಂಸ್ಕಾರಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಬಸವೇಶ್ವರನಗರ ವೀರಭದ್ರೇಶ್ವರ ಸ್ಕೂಲ್, ಹೌಸಿಂಗ್ ಬೋರ್ಡ್‌ನ ನಾಡಪ್ರಭು ಮತ್ತು ದರ್ಶನ್ ಸ್ಕೂಲ್, ವಿದ್ಯಾರಣ್ಯಪುರ ಭದ್ರಮ್ಮ ಆಶ್ರಮದಲ್ಲಿ ಮಾ. 16ರಿಂದ ಪ್ರಾರಂಭ. ಮಾಹಿತಿಗಾಗಿ- 9845046684.
ಜೆಡಿಎಸ್ ಶಕ್ತಿ ಕುಸಿದಿಲ್ಲ: ರಾಜಣ್ಣ
ಚನ್ನಪಟ್ಟಣ: ಬೊಂಬೆನಗರಿ ಜೆಡಿಎಸ್‌ನ ಶಕ್ತಿ ಕೇಂದ್ರ, ಹಿಂದಿನ ಎರಡು ಚುನಾವಣೆಯಲ್ಲಿ ಸಣ್ಣಪುಟ್ಟ ಗೊಂದಲದಿಂದ ನಮಗೆ ಹಿನ್ನೆಡೆಯಾಯಿತೇ ವಿನಾ, ಮಾಜಿ ಪ್ರಧಾನಿ ದೇವೇಗೌಡರ ಕರ್ಮಭೂಮಿಯಾಗಿರುವ ಈ ನೆಲದಲ್ಲಿ ಜೆಡಿಎಸ್ ಶಕ್ತಿ ಕುಸಿದಿಲ್ಲ, ಕುಸಿಯಲು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪಕ್ಷದ ತಾಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ತಿಳಿಸಿದರು. ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಅಭ್ಯರ್ಥಿ ಪ್ರಭಾಕರ ರೆಡ್ಡಿ ಅವರಿಗೆ ತಾಲೂಕಿನಲ್ಲಿ ಅತಿಹೆಚ್ಚು ಮತ ನೀಡಲಿದ್ದು, ಇದಕ್ಕಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಅಹರ್ನಿಶಿ ದುಡಿಯುತ್ತಾನೆ ಎಂದರು.
ಕಾರ್ಯಕರ್ತರ ಸಭೆ: ಮಾ.15 ರಂದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದ್ದು, ಅಭ್ಯರ್ಥಿ ಪ್ರಭಾಕರ ರೆಡ್ಡಿ, ಶಾಸಕರಾದ ಬಾಲಕೃಷ್ಣ, ಪುಟ್ಟಣ್ಣ, ಕೆ.ರಾಜು ಸೇರಿದಂತೆ ಸಾಕಷ್ಟು ಮುಖಂಡರು ಪಾಲ್ಗೊಳ್ಳಲಿದ್ದು ಪಕ್ಷದ ಎಲ್ಲಾ ಕಾರ್ಯಕರ್ತರು ಸಭೆಗೆ ಆಗಮಿಸುವಂತೆ ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ನಗರ ಜೆಡಿಎಸ್ ಅಧ್ಯಕ್ಷ ಎಂ.ಎನ್.ಸತ್ಯನಾರಾಯಣ. ವಕೀಲರ ಸಂಘದ ಅಧ್ಯಕ್ಷ ಹನುಮಂತು, ನಗರಸಭಾ ಸದಸ್ಯ ಉಮಾಶಂಕರ್, ತಾ.ಪಂ ಸದಸ್ಯ ಕಾಂತರಾಜು, ಯುವ ಜೆಡಿಎಸ್ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಎಂಜಿಕೆ ಪ್ರಕಾಶ್, ಸುಣ್ಣಘಟ್ಟ ಅಶ್ವತ್ಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೊಸಕೋಟೆ ಪುರಸಭೆ ಅಧ್ಯಕ್ಷೆ ಗುಲಾಬ್ ಜಾನ್
ಹೊಸಕೋಟೆ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಗುಲಾಬ್ ಜಾನ್, ಉಪಾಧ್ಯಕ್ಷರಾಗಿ ಗಿರಿಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ. 23 ಸದಸ್ಯರಲ್ಲಿ 12 ಕಾಂಗ್ರೆಸ್, 11 ಬಿಜೆಪಿ ಸದಸ್ಯರಿದ್ದಾರೆ. ಚನಾವಣಾಧಿಕಾರಿಯಾಗಿ ತಹಸೀಲ್ದಾರ್ ಕುಮಾರಸ್ವಾಮಿ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ಅಂಬಿಕಾ, ಸದಸ್ಯರು ಭಾಗವಹಿಸಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಎನ್.ನಾಗರಾಜ್ ಅಭಿನಂದಿಸಿದ್ದಾರೆ. ಪಟ್ಟಣಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ವಾಂಗಿಣ ಅಭಿವೃದ್ಧಿಗೆ ಆದ್ಯತೆ ನೀಡಿ ಪಕ್ಷಾತೀತವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರು ತಿಳಿಸಿದರು.
ಡಾ. ಸರಸ್ವತಿಗೆ ಚಾವುಂಡರಾಯ ಪ್ರಶಸ್ತಿ
ಬೆಂಗಳೂರು: ಶ್ರವಣ ಬೆಳಗೊಳದ ಬಾಹುಬಲಿಗೆ ನಡೆದ ಮಹಾ ಮಸ್ತಕಾಭಿಷೇಕದ ನೆನಪಿಗಾಗಿ ನೀಡುತ್ತಿರುವ ಚಾವುಂಡರಾಯ ಪ್ರಶಸ್ತಿಗೆ ಡಾ. ಸರಸ್ವತಿ ಭಾಜನರಾಗಿದ್ದಾರೆ. 1993ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೆನಪಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಕಸಾಪದಲ್ಲಿ ದತ್ತಿ ಸ್ಥಾಪಿಸಿದ್ದಾರೆ. ಜೈನ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಈ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಯು 25 ಸಾವಿರ ನಗದು, ಕಂಚಿನ ಫಲಕ, ಪ್ರಶಸ್ತಿ ಪತ್ರ, ಶಾಲು, ಫಲತಾಂಬೂಲಗಳನ್ನು ಒಳಗೊಂಡಿದೆ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ಹಿಂದೂಸ್ತಾನಿ ಸಂಗೀತ ಗಾಯನ ಬೈಠಕ್ ನಾಳೆ
ಬೆಂಗಳೂರು: ಪಂಡಿತ್ ಮಾಧವ್ ಗುಡಿ ಫೌಂಡೇಷನ್‌ನಿಂದ ಹಿಂದೂಸ್ತಾನಿ ಸಂಗೀತ ಗಾಯನದ ಮೂಲಕ ಬೈಠಕ್ ಕಾರ್ಯಕ್ರಮ ಮಾ.16ರಂದು ಏರ್ಪಡಿಸಿದೆ. ಬಸವನಗುಡಿ ಕೆ.ಆರ್.ರಸ್ತೆಯ ಪದ್ಮಾಲಯದಲ್ಲಿ ಈ ಕಾರ್ಯಕ್ರಮ ವಾರಕ್ಕೊಮ್ಮೆ ನಡೆಯಲಿದೆ. ಹಂತಹಂತವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಈ ಕಾರ್ಯಕ್ರಮವನ್ನು ಹಲವು ದಿನ ಹಮ್ಮಿಕೊಳ್ಳಲಾಗುತ್ತದೆ.  ಗಾಯಕರಾದ ಗಾಯತ್ರಿ ಪ್ರಮೋದ್ (ಗಾಯತ್ರಿ ಗುಡಿ) ಹಾಗೂ ನೀಲಂ ಶರ್ಮ ಅವರು ಗಾಯನವನ್ನು ಪ್ರಸ್ತುತ  ಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.ಜಿಛ್ಛಜಛ್ಟ್ಟ್ಞಿ.್ಛ್ಟಟ/ ಟಛಝಛಢ.್ಜ್ಡಜ್ಝ.ಜ್ಟ್ಡಿಟಿಜಛಡ್ಝ್ಟಿಟಿ ಸಂಪರ್ಕಿಸಬಹುದು.
ದೊಡ್ಡಸಣ್ಣೆ ಗ್ರಾಮದಲ್ಲಿ  ಜೆಡಿಎಸ್ ಕಾರ್ಯಕರ್ತರ ಸಭೆ ಇಂದು
ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಅಣ್ಣೇಶ್ವರ ಗ್ರಾಮದ ಬಳಿ ಇರುವ ಯರಪನಹಳ್ಳಿ ಮಂಜುನಾಥ್ ಅವರ ಮನೆಯಲ್ಲಿ ಶನಿವಾರ ಆಯೋಜಿಸಲಾಗಿದೆ ಎಂದು ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ ತಿಳಿಸಿದ್ದಾರೆ.
ಇಂದು ಸುಭದ್ರಾ ಕಲ್ಯಾಣ ಯಕ್ಷಗಾನ
ಬೆಂಗಳೂರು: ಕೆ.ಪಿ. ಹೆಗಡೆ ಗೋಳ್ಗೋಡು ಸಾರಥ್ಯದಲ್ಲಿ ನಗರದಲ್ಲಿ ಶನಿವಾರ ಸುಭದ್ರಾ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಕಲಾಮಂಡಳಂನ ಕಲಾವಿದರು ನಡೆಯುವ ಯಕ್ಷಗಾನ ಪ್ರದರ್ಶನವು ನಗರದ ಗವಿಪುರಂನ ಉದಯಭಾನು ಕಲಾಸಂಘದಲ್ಲಿ ಸಂಜೆ 5.30ರಿಂದ ಪ್ರಾರಂಭವಾಗಲಿದೆ. ಮಾಹಿತಿಗೆ-9741402062.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.