ಕನ್ನಡಪರ ಸರ್ಕಾರದಿಂದ ಮಾತ್ರ ಭಾಷೆ ಉಳಿವು: ಸಿಂ.ಲಿಂ.
ಚನ್ನಪಟ್ಟಣ: ರಾಜ್ಯದಲ್ಲಿ ಸೈದ್ಧಾಂತಿಕವಾಗಿ ಇಚ್ಛಾಸಕ್ತಿ ಹೊಂದಿರುವ ಭಾಷೆ, ನೆಲ, ಜಲಕ್ಕಾಗಿ ಹೋರಾಡುವ ಮನೋಭಾವವುಳ್ಳ ಕನ್ನಡ ಸರ್ಕಾರ ಬಂದಾಗ ಮಾತ್ರ ರಾಜ್ಯದ ಸಮಸ್ಯೆಗಳು ಪರಿಹಾರವಾಗಿ ಸಮೃದ್ಧಗೊಳ್ಳುತ್ತದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಅಭಿಪ್ರಾಯಪಟ್ಟರು.
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹದೇಶ್ವರನಗರ ಬಡಾವಣೆಯ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಶಾಸಕ ಸಿ.ಪಿ.ಯೋಗೇಶ್ವರ್ ಅವರ ತಂದೆತಾಯಿ ನಾಗರತ್ನಮ್ಮ ಹಾಗೂ ಪುಟ್ಟಮಾದೇಗೌಡರ ಹೆಸರಿನಲ್ಲಿ ನೀಡಿರುವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ನಾಡಿನ ಸಮಸ್ಯೆಗಳಿಗೆ ಆಳುವ ಸರ್ಕಾರಗಳು ಸ್ಪಂದಿಸದಿರುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ ಎಂದು ವಿಷಾದಿಸಿದರು.
ಕನ್ನಡಿಗರಲ್ಲಿ ಕನ್ನಡದಬಗ್ಗೆ ಅಭಿಮಾನ, ಕಿಚ್ಚು, ನಿರಂತರವಾಗಿ ಪ್ರವಹಿಸುತ್ತಿರಬೇಕು. ಕನ್ನಡ ನೆಲದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು. ಆದರೆ ವಾಸ್ತವವಾಗಿ ಇಂತಹ ಪರಿಸ್ಥಿತಿ ಇಲ್ಲವಾಗಿದ್ದು ನಮ್ಮ ನೆಲದಲ್ಲೇ ನಾವು ಪರಕೀಯರಾಗುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬ ಕನ್ನಡಿಗನೂ ತಾಯಿನೆಲ ತಾಯಿಭಾಷೆಯ ಬಗ್ಗೆ ಅಭಿಮಾನ ಬೆಳೆಸಿ ಕೊಂಡಾಗ ಮಾತ್ರ ಕನ್ನಡಮ್ಮನ ಕೂಗಿಗೆ ಪರಿಹಾರ ದೊರಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತ್ ವಿಕಾಸ್ ಪರಿಷದ್ ಅಧ್ಯಕ್ಷ ವಸಂತ್ಕುಮಾರ್ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಉಳಿಸುವುದಕ್ಕೆ ಕನ್ನಡಪರ ಹೋರಾಟಗಾರರು ಸನ್ನದ್ಧರಾಗದಿದ್ದರೆ ನಾವೆಲ್ಲರೂ ಕಠಿಣ ಪರಿಸ್ಥಿತಿ ಅನುಭವಿಸಬೇಕಾಗುತ್ತಿತ್ತು. ಆಂಗ್ಲ ಮಾಧ್ಯಮ ಶಾಲೆಗಳು ಭಾರತೀಯ ಕರ್ನಾಟಕ ಸಂಸ್ಕೃತಿ ಮೇಲೆ ದುಷ್ಪರಿಣಾಮ ಬೀರುತ್ತಿವೆ ಅಲ್ಲದೆ ಜನ ಮನಸ್ಸಿನ ಹಾಗೂ ಸಮಾಜದ ಶಾಂತಿಯನ್ನು ಕಲುಕುತ್ತಿವೆ. ಅವು ಭ್ರಷ್ಟಾಚಾರದ ಕೂಪಗಳು ಆಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು, ನಗರಸಭೆ ಮಾಜಿ ಅಧ್ಯಕ್ಷ ಎಚ್.ನಾಗರಾಜು, ನಿವೃತ್ತ ಶಿಕ್ಷಕ ಪುಟ್ಟಮಾದೇಗೌಡ ಮಾತನಾಡಿದರು. ಚುಟುಕು ಕವಿ ನಾಗರಾಜು ಹನಿಗವನ ವಾಚಿಸಿದರು. ವಿದ್ಯಾರ್ಥಿ ನಿಲಯದ ಅಧೀಕ್ಷಕರಾದ ಮೋಹನ್, ಸುನಿಲ್ಕುಮಾರ್, ಕನ್ನಡ ಜನಪರ ವೇದಿಕೆ ಕಾರ್ಯದರ್ಶಿ ಚಿನ್ನಗಿರಿಗೌಡ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

