ಕಾಂಗ್ರೆಸ್ಗೆ ಯೋಗೇಶ್ವರ್ ಅಧಿಕೃತ ಸೇರ್ಪಡೆ
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಸಿ.ಪಿ. ಯೋಗೇಶ್ವರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮಾತನಾಡಿದ ಅವರು ಮಂಗಳವಾರ ಈ ವಿಷಯ ತಿಳಿಸಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೂ ಆಶ್ಚರ್ಯಪಡಬೇಡಿ ಎಂದು ಹೇಳಿದರು.
ಮಂಡ್ಯ, ಚಾಮರಾಜನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಈ ಬಾರಿ ಅಚ್ಚರಿಯ ಗೆಲುವು ಪಡೆಯಲಿದೆ. ಕಾಂಗ್ರೆಸ್ಗೆ ಮಾತ್ರ ಎಲ್ಲ ವರ್ಗ, ಸಮಾಜದವರನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಇದೆ. ಕೋಮುವಾದಿ ಪಕ್ಷ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ದೇಶದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಜೆಡಿಎಸ್ ಕೋಮುವಾದಿಯಲ್ಲದಿದ್ದರೂ ಕುಟುಂಬ ರಾಜಕಾರಣ ನಡೆಸುತ್ತಿದೆ. ಆ ಪಕ್ಷಕ್ಕೆ ಸಿದ್ಧಾಂತವೇ ಇಲ್ಲ ಎಂದು ಕಿಡಿಕಾರಿದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಯೋಗೇಶ್ವರ ಅವರಿಗೆ ಪಕ್ಷ ತೊರೆಯದಂತೆ ಸೂಚಿಸಿದ್ದೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಯಿತು. ಆದರೂ ಅವರು ಕಾಂಗ್ರೆಸಿಗರಾಗಿಯೇ ಉಳಿದಿದ್ದರು ಎಂದು ಹೇಳಿದರು.
ಹೊರ ನಿಂತು ಬೆಂಬಲ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲೇ ನಾನು ಅವರಿಗೆ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದೆ. ಆದರೆ ಪಕ್ಷದ ಹೊರ ನಿಂತು ಬಿಜೆಪಿ ಹಾಗೂ ಜೆಡಿಎಸ್ ಸೋಲಿಸುವುದಕ್ಕೆ ಬೆಂಬಲ ನೀಡಿದರು. ಅವರು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಸೀಮಿತರಾದ ನಾಯಕರಲ್ಲ. ಯೋಗೇಶ್ವರ ಪ್ರಭಾವ ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಜಿಲ್ಲೆಗೆ ವಿಸ್ತರಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮಾತನಾಡಿ, ಚಾಣಾಕ್ಷ ರಾಜಕಾರಣಿಯಾಗಿರುವ ಯೋಗೇಶ್ವರ ಬೇರೆ ಪಕ್ಷದಲ್ಲಿ ಒಬ್ಬಂಟಿಯಾಗಿರುವುದು ಬೇಡ ಎಂದು ನಾವು ಪಕ್ಷ ಸೇರುವಂತೆ ಆಹ್ವಾನ ನೀಡಿದ್ದೆವು. ಯೋಗೇಶ್ವರ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.
ಶಾಸಕ ಯೋಗೇಶ್ವರ ಮಾತನಾಡಿ, ಪಕ್ಷಕ್ಕೆ ವಾಪಸ್ ಬಂದಿರುವ ಬಗ್ಗೆ ಸಮಾಧಾನವಿದೆ. ನನಗೆ ವೈಯಕ್ತಿಕ ಹಿತಾಸಕ್ತಿಗಿಂತ ಕ್ಷೇತ್ರದ ಹಿತ ಮುಖ್ಯ. ಬಿಜೆಪಿಯಲ್ಲಿ ಪುರೋಹಿತಶಾಹಿ ಆಡಳಿತಕ್ಕೂ ನನಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಅಲ್ಲಿನ ಉಸಿರುಗಟ್ಟಿಸುವ ವಾತಾವರಣ ಸಹಿಸಲಾಗದೆ ಹೊರ ಬಂದಿದ್ದೆ ಎಂದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್, ಚಲ್ಲಕುಮಾರ, ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತೀಕಟ್ಟಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

