'ಕೈ' ಪ್ರಚಾರಕ್ಕೆ ಚಾಲನೆ, ಮೊಯ್ಲಿ ಮತಯಾಚನೆ
ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿ ಗ್ರಾಮದಿಂದ ಎಂ. ವೀರಪ್ಪ ಮೊಯ್ಲಿ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಗ್ರಾಮಕ್ಕೆ ಮೊಯ್ಲಿಯವರು ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಮತ ಯಾಚನೆ ಮಾಡಿದರಲ್ಲದೆ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಭಾಗದ ಜನರ ಕೋರಿಕೆಯಂತೆ ಎತ್ತಿನ ಹೊಳೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಇನ್ನು ಒಂದೂವರೆ ವರ್ಷಗಳಲ್ಲಿ ಈ ಭಾಗದ ಎಲ್ಲ ಕೆರೆಗಳು ತುಂಬಲಿರುವುದರಿಂದ ಎಲ್ಲ ಕೊಳವೆ ಬಾವಿಗಳಲ್ಲಿ ನೂರು ಇನ್ನೂರು ಅಡಿಗಳಲ್ಲಿ ನೀರು ಲಭ್ಯವಾಗಲಿದೆ ಎಂದರು. ಈ ಯೋಜನೆ ರೂಪುಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಿದರಲ್ಲದೆ 13 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಿ ಈ ಸರ್ಕಾರದ ಸಚಿವರುಗಳು ಗಣಿ ಲೂಟಿ ಮಾಡಿ ಗಣಿ ಧೂಳನ್ನು ಬಿಟ್ಟುಹೋಗಿದ್ದಾರೆ ಎಂದು ಮೊಯ್ಲಿ ಛೇಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡೇ ಪಕ್ಷ 25 ಸ್ಥಾನಗಳನ್ನಾದರೂ ಮತದಾರರು ಗಳಿಸಿಕೊಟ್ಟರೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಕೈ ಬಲಗೊಳ್ಳುತ್ತದೆ ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಚಂದ್ರಯ್ಯ, ಸಿ.ಜಗನ್ನಾಥ್, ಲಕ್ಷ್ಮೀನಾರಾಯಣ್, ಎಸ್. ಆರ್. ರವಿಕುಮಾರ್, ಎ. ಚಂದ್ರಶೇಖರ್, ಎಸ್.ಜಿ. ನಾರಾಯಣಸ್ವಾಮಿ, ಎ. ಸೋಮಣ್ಣ, ಜಾಲಿಗೆ ಶ್ರೀರಾಮಯ್ಯ, ಪ್ರಸನ್ನಕುಮಾರ್, ವಿಜಯಕುಮಾರ್, ನಾಗೇಶ್ ಭಾಗವಹಿಸಿದ್ದರು.
ಮೊಯ್ಲಿರವರು ದೇವನಹಳ್ಳಿ ತಾಲೂಕಿನ ಕುಂದಾಣ, ಕೊಯಿರ, ವಿಶ್ವನಾಥಪುರ, ಬಿದಲೂರು, ಕಾರಹಳ್ಳಿ, ಆವತಿ, ಅಣ್ಣೇಶ್ವರ ಹಾಗೂ ಕನ್ನಮಂಗಲ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

