ತ್ರಿಕೋನ ಸ್ಪರ್ಧೆಗೆ ಪಕ್ಷಗಳ ಸಜ್ಜು
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಈ ಬಾರಿ ರಾಜ್ಯದ ಗಮನ ಸೆಳೆದಿರುವ ಲೋಕಸಭಾಕ್ಷೇತ್ರಗಳ ಪೈಕಿ ಚಿಕ್ಕಬಳ್ಳಾಪುರ ಕೂಡ ಒಂದು. ಒಂದು ಹಂತದಲ್ಲಿ ರಾಷ್ಟ್ರದ ಗಮನ ಸಳೆದಿರುವ ಕ್ಷೇತ್ರ ಎಂದರೂ ತಪ್ಪಾಗಲಾರದು. ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದ್ದು, ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಇಲ್ಲಿನ ಹಾಲಿ ಸಂಸದ ವೀರಪ್ಪಮೊಯ್ಲಿ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಮೊಯ್ಲಿ ವಿರುದ್ಧ ತೊಡೆತಟ್ಟಲು ಬಿಜೆಪಿ ಹುರಿಯಾಳು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರನ್ನು ಕಣಕ್ಕಿಳಿಸಿದೆ.
ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಲೆಕ್ಕಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡುವ ಪ್ರಯತ್ನದಲ್ಲಿದೆ. ಉಳಿದಂತೆ ಆಮ್ ಆದ್ಮಿ ಪಾರ್ಟಿ ನಿವೃತ ಪೊಲೀಸ್ ಅಧಿಕಾರಿ ಅರ್ಕೇಶ್ ಅವರನ್ನು ಕಣಕ್ಕಿಳಿಸಿದ್ದರೆ, ಸಿಪಿಎಂನಿಂದ ಮಾಜಿ ಶಾಸಕ ಶ್ರೀರಾಮರೆಡ್ಡಿ ಕಣದಲ್ಲಿದ್ದಾರೆ.
ಪ್ರಚಾರ ಭರಾಟೆ: ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತಲ್ಲೀನವಾಗಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ಸಿಂಗ್
ರನ್ನು ಕರೆಸಿ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಪ್ರಚಾರಕ್ಕೆ ಅಬ್ಬರದ ಚಾಲನೆ ನೀಡಿದೆ. ನಂತರದಲ್ಲಿ ಪ್ರತಿ ಮತಗಟ್ಟೆ ಹಂತದಲ್ಲಿ ಪ್ರಚಾರ ಸಭೆಗಳು ನಡೆಯುತ್ತಿವೆ. ಗ್ರಾಪಂ ಮಟ್ಟದಲ್ಲಿ ಕ್ಷೇತ್ರದ ಅಭ್ಯರ್ಥಿ ಬಚ್ಚೇಗೌಡರ ನೇತೃತ್ವದಲ್ಲಿ ಒಂದು ಸುತ್ತಿನ ಪ್ರಚಾರ ಸಭೆ ಈಗಾಗಲೇ ಮುಕ್ತಾಯ ಹಂತದಲ್ಲಿದೆ.
ಉಳಿದಂತೆ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ 1 ಕ್ಷೇತ್ರ ಮಾತ್ರ ಬಿಜೆಪಿ ವಶದಲ್ಲಿದ್ದು, ಉಳಿದಂತೆ 4ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅದು 3 ಮತ್ತು 4ನೇ ಸ್ಥಾನದಲ್ಲಿದೆ. ಬಚ್ಚೇಗೌಡರ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಪಕ್ಷ ಮತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಮುಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅದೇ ರೀತಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಟಿಕೆಟ್ ಪಡೆಯುವುದು ಸ್ವಲ್ಪ ವಿಳಂಬವಾದರೂ ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರಸಭೆಗಳನ್ನು ನಡೆಸಿ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಲ್ಲಿತೊಡಗಿದ್ದಾರೆ.
ಎಎಪಿ ಮಾಡಿದ ಆರೋಪಗಳು, ಇದರ ಹಿನ್ನಲೆಯಲ್ಲಿ ಕೇಳಿ ಬಂದ ರಾಜಕೀಯ ವಿರೋಧಾಭಾಸದ ಧ್ವನಿ, ಸ್ಥಳೀಯವಾಗಿ ಕಳೆದ ಚುನಾವಣೆಯಲ್ಲಿ ಕೊಟ್ಟ ಭರವಸೆಗಳು ಅಷ್ಟರಮಟ್ಟಿಗೆ ಈಡೇರದೇ ಹೋಗಿರುವುದು ಮೊಯ್ಲಿ ಅವರ ನಡೆಯನ್ನು ಸುಲಭವಾಗಿಸಿಲ್ಲ. ಶಾಶ್ವತ ನೀರಾವರಿ ಹೋರಾಟ ಹಾಗೂ ಎತ್ತಿನಹೊಳೆ ವಿಚಾರದಲ್ಲಿ ಎದ್ದಿರುವ ವಿವಾದಗಳು ಇಲ್ಲಿ ಕಾಂಗ್ರೆಸ್ಗೆ ವರವಂತೂ ಅಲ್ಲ. ಆದಾಗ್ಯೂ ಕ್ಷೇತ್ರ ಇಲ್ಲಿಯವರೆಗೆ ಕಾಂಗ್ರೆಸ್ನ ಭದ್ರಕೋಟೆಯಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.
ಕ್ಷೇತ್ರದಲ್ಲಿ ಪಕ್ಷದ 4 ಶಾಸಕರಿದ್ದು, ಒಬ್ಬ ಹೆಚ್ಚುವರಿ ಶಾಸಕರ ಬೆಂಬಲ ಕೂಡ ದೊರೆತಿದೆ. ಕಾಂಗ್ರೆಸ್ ಇಲ್ಲಿ ಈ ಬಾರಿಯೂ ನೆಲೆ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸದಲ್ಲೇ ಪ್ರಚಾರ ಸಭೆ ನಡೆಯುತ್ತಿವೆ.
ಜೆಡಿಎಸ್ ಕೊನೆಯವರೆಗೆ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸದೆ ಅತಿಜಾಣತನ ಮೆರೆಯುತ್ತಿದೆ. ಒಂದು ವೇಳೆ ಕುಮಾರಸ್ವಾಮಿ ಅಭ್ಯರ್ಥಿಯಾದರೆ ಕ್ಷೇತ್ರದಲ್ಲಿ ಮಾಜಿ ಸಿಎಂಗಳ ಮುಖಾಮುಖಿ ಕಂಡುಬರಲಿದೆ. ಆಗ ಜಿದ್ದಾಜಿದ್ದಿನ ಸ್ಪರ್ಧೆ ಕೂಡ ನಿರೀಕ್ಷಿಸಬಹುದಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಜೆಡಿಎಸ್ ಪ್ರಚಾರ ಕೂಡ ಇನ್ನೂ ಅಧಿಕೃತವಾಗಿ ಆರಂಭವಾಗಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಇಬ್ಬರು ಶಾಸಕರಿದ್ದು, ಉಳಿದ ಕ್ಷೇತ್ರಗಳಲ್ಲೂ 2 ಅಥವಾ 3ನೇ ಸ್ಥಾನದಲ್ಲಿರುವುದು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿರುವುದು ಹಾಗೂ ಕಾರ್ಯಕರ್ತರ ಪಡೆ ಒಗ್ಗಟ್ಟು ಹಾಗೂ ಉತ್ಸಾಹದಲ್ಲಿರುವುದು ಪಕ್ಷದ ಗೆಲವಿನ ಲೆಕ್ಕಾಚಾರಕ್ಕೆ ಪುಷ್ಠಿ ನೀಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

