ಬೆಂಗಳೂರು ಗ್ರಾಮಾಂತರ

ವಿಶ್ವ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್‌ಗೆ

Published On :

ಕ.ಪ್ರ.ವಾರ್ತೆ   ರಾಮನಗರ  ಮೇ 7
ಭಾರತದ ಸಂವಿಧಾನವು ಪ್ರಪಂಚದಲ್ಲೇ ಶ್ರೇಷ್ಠವಾದುದಾಗಿದೆ. ಇಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯೂ ಕೂಡ ಸಾರ್ವಕಾಲಿಕವಾದುದು ಎಂದು ಮೈಸೂರಿನ ಉರಿಲಿಂಗಪ್ಪ ಪೆದ್ದ ಗುರುಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.  
ತಾಲೂಕಿನ ಜಯಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾ ಸೇವಾ ಸಮಿತಿ ಹಾಗೂ ಜಕ್ಕನಹಳ್ಳಿ ಚೈತ್ರ ಭೂಮಿ ಯುವ ಸಾಮಾಜಿಕ ಮತ್ತು ಸಾಂಸ್ಕೃತಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಜಾನಪದ ಕಲಾ ಮೇಳ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 123ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  
ಅಂಬೇಡ್ಕರ್ ಅವರು ಭವಿಷ್ಯದ ಭವ್ಯ ಭಾರತದ ನಿರ್ಮಾಣಕ್ಕಾಗಿ ವಿಶ್ವ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಅಂಬೇಡ್ಕರರ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.  
ಅಂಬೇಡ್ಕರ್ ಜನ್ಮದಿನೋತ್ಸವವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ದಿನದಂದು ದೇಶದ ರಾಷ್ಟ್ರಪತಿ ಭವನದಿಂದ ಗ್ರಾ.ಪಂ. ಮಟ್ಟದವರೆಗೆ ಅವರ ಭಾವಚಿತ್ರವನ್ನಿಟ್ಟು ಪೂಜಿಸಲಾಗುತ್ತಿದೆ. ಇದು ಕೇವಲ ಕಚೇರಿಗಳಿಗೆ ಸೀಮಿತವಾಗದೇ ಎಲ್ಲಾ ವರ್ಗಗಳ ಮನೆ-ಮನಗಳಲ್ಲೂ ಆಚರಿಸುವಂತಾಗಬೇಕು ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.
ಪ್ರಗತಿಗೆ ಅಡ್ಡಿ: ನೂರೆಂಟು ಜಾತಿ, ಮತ, ಭಾಷೆಗಳು ನಮ್ಮ ದೇಶದ ಪ್ರಗತಿಗೆ ಅಡ್ಡಿಯಾಗಿವೆ. ದೇಶದಲ್ಲಿರುವ ಜಾತಿ ಪದ್ಧತಿ ಎಂಬ ಅಡ್ಡಗೋಡೆ ಅಭಿವೃದ್ಧಿಯ ವೇಗಕ್ಕೆ ಕಡಿವಾಣ ಹಾಕಿದೆ. ಈ ಬಗ್ಗೆ ನಾವೆಲ್ಲರೂ ಚಿಂತನಾಶೀಲರಾಗಬೇಕಾದ ಜರೂರಿದೆ. ಅಸ್ಪೃಶ್ಯತೆ ನಿರ್ಮೂಲನೆ ಕೇವಲ ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿಲ್ಲ. ಅದು ಎಲ್ಲರ ಮನದಾಳದಲ್ಲಿ ಬರಬೇಕಾಗಿದೆ ಎಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಿ.ಬೀರಯ್ಯ ಹೇಳಿದರು.
ಪ್ರಸ್ತುತ ದೇಶದಲ್ಲಿ ಮನು ಸಂವಿಧಾನ ಮತ್ತು ಮಾನವತಾ ಸಂವಿಧಾನ ಎಂಬ ಎರಡು ಸಂವಿಧಾನಗಳು ಜಾರಿಯಲ್ಲಿವೆ. ಶೂದ್ರ ಅಸ್ಪೃಶ್ಯರಿಗೆ ವಿದ್ಯೆ, ನೌಕರಿ, ಆಸ್ತಿಗಳಂತಹ ಮೂಲಭೂತ ಹಕ್ಕುಗಳನ್ನು ಮನು
ಸಂವಿಧಾನದಲ್ಲಿ ನಿಷೇಧಿಸಲಾಗಿದೆ. ಆದರೆ, ಮಾನವತಾ ಸಂವಿಧಾನದಲ್ಲಿ ಅಸಮಾನತೆಯನ್ನು ದೂರಮಾಡಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಪಡೆಯಲು ಅವಕಾಶವಿದೆ ಎಂದರು.
ಯಾವುದೇ ಒಂದು ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಶಕ್ತಿಯಾಗಿರುವ ದಲಿತ ಸಮುದಾಯವು ಚುನಾವಣೆ ವೇಳೆ ಹಣಕ್ಕಾಗಿ ಮತ ಮಾರಿಕೊಳ್ಳುವುದನ್ನು ಬಿಡಬೇಕು. ಕಳ್ಳಕಾಕರನ್ನು ಅಧಿಕಾರದಿಂದ ಹೊರಗಿಡಬೇಕು. ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನರು ಪರಿವರ್ತನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.