ಬೆಂಗಳೂರು ಗ್ರಾಮಾಂತರ

ಭೂಮಿತಾಯಿ ಮೇಲೆ ಅತ್ಯಾಚಾರ: ಕಂಬಾರ

Published On :

ಬೆಂಗಳೂರು: ಮನುಷ್ಯ ಮೊದಲು ಭೂಮಿಯನ್ನು ತಾಯಿಯಂತೆ ನಡೆಸಿಕೊಳ್ಳುತ್ತಿದ್ದ. ಬಳಿಕ ಹೆಂಡತಿಯಾಗಿಸಿಕೊಂಡ. ಈಗಂತೂ ಬೆಲೆವೆಣ್ಣುಗಳಾಗಿಸಿಕೊಂಡು ಭೂಮಿ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಜ್ಞಾನಪೀಠ ಸಾಹಿತಿ ಡಾ. ಚಂದ್ರಶೇಖರ ಕಂಬಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿರುವ ಚಂದ್ರಶೇಖರ ಆಲೂರರ ಲಖನೌ ಡೈರಿ, ಅಕ್ಷರ ಆಟಾಟೋಪ, ಹೀಗೊಂದು ದಾಂಪತ್ಯಗೀತೆ, ಔಟರ್ ಸಿಗ್ನಲ್ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರ ಸಮಸ್ಯೆ ಕುರಿತು ಆಲೂರರು ನಮಗೆ ಆತಂಕ, ತಲ್ಲಣಗಳ ಚಿತ್ರಣವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತಾರೆ. ಅವರು ಎತ್ತಿಕೊಳ್ಳುವ ರೈತರ ಸಮಸ್ಯೆಯೊಂದು ಸುತ್ತಮುತ್ತಲು ಕಿಡಿ
ಸಿಡಿದು ಒಂದು ಗಂಭೀರ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಇಂದು ರೈತ ವಿಚಲಿತನಾಗಿದ್ದಾನೆ. ಕುವೆಂಪು ಹೇಳಿದಂತೆ ನೇಗಿಲ ಯೋಗಿಗೆ, ಅನ್ನದಾತನಿಗೆ ಶೂಲ ಬೀಳುತ್ತಿದೆ. ಈ ಬಗ್ಗೆ ಒಮ್ಮೆ ಯೋಚಿಸಿದಾಗ ನಾವು ಎಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬ ವಾಸ್ತವದ ಅರಿವನ್ನು ಆಲೂರರ ಬರಹಗಳು ಮೂಡಿಸುತ್ತವೆ ಎಂದರು.
ಆಲೂರರು ಇದುವರೆಗೆ 30 ಪುಸ್ತಕಗಳನ್ನು ಬರೆದು ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಲಂಕೇಶ್ ಪತ್ರಿಕೆಗೆ ನಾನು ಚಂದ್ರುವನ್ನು ಕಳುಹಿಸಿ ಕೊಟ್ಟೆ. ಆಗ ಕನ್ನಡ ವಿದ್ಯಾರ್ಥಿಗಳ ಬಗ್ಗೆ ಲಂಕೇಶ್‌ಗೆ
ಅನುಮಾನವಿತ್ತು. ಆದರೆ ಇವ ಹಾಡುಗಳ ಬಗ್ಗೆ ಬರೆಯಲು ಶುರುಮಾಡಿ ಎಲ್ಲರನ್ನೂ ಒಲಿಸಿಕೊಂಡ ಅಪರೂಪದ ಬರಹಗಾರ ಎಂದು ಪ್ರಶಂಸಿಸಿದರು.
ಆಲೂರರ ಪ್ರಬಂಧಗಳಿಗೆ ನಮ್ಮ ಕಡೆ ಹರಟೆ ಅಂತಾರೆ. ಇವುಗಳಿಗೆ ಯಾವುದೇ ತರಹದ ಉದ್ದೇಶಗಳು ಇರುವುದಿಲ್ಲ. ಆದರೆ ನಮ್ಮ ಮನಸ್ಸನ್ನು ಹಿಡಿದಿಡುತ್ತವೆ. 'ಬಹಳ ಒಳ್ಳೆ ಕೆಲಸ ಮಾಡಿರುವೆ ತಮ್ಮ. ನಿನ್ನ ಪ್ರಬಂಧಗಳು ಕನ್ನಡ ಸಾಹಿತ್ಯದಲ್ಲಿ ಉಳಿಯುತ್ತವೆ. ಇವುಗಳಿಗೆ ಸಾಮಾಜಿಕ, ಸಾಂಸ್ಕೃತಿಕ, ಆಡಳಿತಾತ್ಮಕ ಸಮಸ್ಯೆಗಳನ್ನು ತಿದ್ದುವ ಶಕ್ತಿಯಿದೆ' ಎಂದು ಬೆನ್ನುತಟ್ಟಿದರು.
ಪ್ರಬಂಧ ಸಾಹಿತ್ಯವನ್ನೂ ಪುರಸ್ಕರಿಸಿ: ಹೊಸ ಲಾಲಿತ್ಯ, ಅನುಭವ, ಸೊಗಸುಗಾರಿಕೆಯಿಂದ ಕೂಡಿರುವ ಆಲೂರರ ಪ್ರಬಂಧಗಳು ನವೋದಯ ಕಾಲಘಟ್ಟವನ್ನು ಮರುಕಳಿಸುವಂತೆ ಮಾಡಿವೆ. ಇಂಥ ಪ್ರಬಂಧ ಸಾಹಿತ್ಯಕ್ಕೂ ಪ್ರತಿವರ್ಷ ಪುರಸ್ಕಾರ ನೀಡಬೇಕು ಎಂದು ಪುಸ್ತಕಗಳನ್ನು ಬಿಡುಗಡೆ ಮಾಡಿದ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಚಂದ್ರು ಪ್ರಬಂಧದಲ್ಲಿ ಬಹುತೇಕ ಕಡೆ ಅವನ ಮಗಳು ಮಾಧುರ್ಯ ಒಂದು ಪಾತ್ರವಾಗಿ ಬರುತ್ತಾಳೆ. ಇಂಥ ಪಾತ್ರದಿಂದಲೇ ಕನ್ನಡಕ್ಕೆ ನವಿರಾದ ಹೊಸ ಪ್ರಬಂಧದ ಮಾದರಿಯನ್ನು ಕೊಡಲು ಸಾಧ್ಯವಾಗಿದೆ
ಎಂದು ಪುಸ್ತಕ ಪರಿಚಯಿಸಿದ ಡಾ. ಭಕ್ತರಹಳ್ಳಿ ಕಾಮರಾಜ್ ಹೇಳಿದರು. ಲೇಖಕ ಚಂದ್ರಶೇಖರ ಆಲೂರು, ಪ್ರಕಾಶಕ ಸಿರಿಗೇರಿ ಯರಿಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.