ಬೆಂಗಳೂರು ಗ್ರಾಮಾಂತರ

ಕನ್ನಡ, ಸರ್ಕಾರಿ ಶಾಲೆ ಬಗೆಗಿನ ತಪ್ಪು ತಿಳಿವಳಿಕೆ ತೊಡೆದುಹಾಕುವುದು ಅಗತ್ಯ

Published On :

ಬೆಂಗಳೂರು: ಕನ್ನಡ ಅಥವಾ ಸರ್ಕಾರಿ ಶಾಲೆಗಳು ಎಂದರೆ ಕಳಪೆ ಎಂಬ ಭಾವನೆಯನ್ನು ಜನ ಮಾನಸದಿಂದ  
ತೊಡೆದುಹಾಕಬೇಕು ಎಂದು ಸಾಹಿತಿ ಡಾ. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ. ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ನಾಲ್ಕು ಪುಸ್ತಕಗಳನ್ನು ನಗರದ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.
ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಕೊಡಿಸುವುದು ಪೋಷಕರಿಗೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಸಲು ನಿರ್ಧರಿಸಬೇಕು. ಆಗ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ. ಇಲ್ಲವಾದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಹೋದರೆ ಕನ್ನಡಕ್ಕೆ ಗಂಡಾಂತರ ಖಚಿತ ಎಂದು ಆತಂಕ ವ್ಯಕ್ತಪಡಿಸಿದರು. ಕನ್ನಡ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಸರ್ಕಾರ ಮೊದಲು ತೆಗೆದುಹಾಕಬೇಕು. ಈ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕು. ಕನ್ನಡ ಶಾಲೆಗಳಲ್ಲೂ ಇಂಗ್ಲೀಷ್ ಕಲಿಯಲು ಅವಕಾಶ ಇರುತ್ತದೆ ಎಂಬುದನ್ನು ಪೋಷಕರು ಅರಿಯಬೇಕು ಎಂದರು.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಕನ್ನಡದ ಪಾಲಿಗೆ ಗಂಡಾಂತರಕಾರಿ. ಭಾಷಾವಾರು ಪ್ರಾಂತ್ಯ ರಚನೆ ಮತ್ತು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಪರಿಗಣಿಸಿಲ್ಲ. ಮಹಾತ್ಮ ಗಾಂಧೀಜಿ ಅವರಿಂದ ಹಿಡಿದು ಇಲ್ಲಿಯವರೆಗಿನ ಶಿಕ್ಷಣ ತಜ್ಞರು ವ್ಯಕ್ತಪಡಿಸಿರುವ ಮಾತೃಭಾಷಾ ಮಾಧ್ಯಮದ ನಿಲುವನ್ನು ಈ ತೀರ್ಪಿನಲ್ಲಿ ಪರಿಗಣಿಸಿಲ್ಲ. ಹಾಗಾಗಿ ತೀರ್ಪಿನ ಮರುಪರಿಶೀಲನೆಗೆ ಸರ್ಕಾರ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ ಎಂದರು.
ಇಂದು ಕನ್ನಡ ಸಾಹಿತ್ಯವನ್ನು ಓದುವ ತಲೆಮಾರು ಮರೆಯಾಗುತ್ತಿದ್ದು, ಸಾಹಿತ್ಯವನ್ನು ಧಿಕ್ಕರಿಸುತ್ತಿದೆ. ಮತ್ತೊಂದೆಡೆ ಹೊಸ ಸಾಹಿತ್ಯಾಸಕ್ತರು, ಓದುಗರ ಗುಂಪು ಹುಟ್ಟಿಕೊಳ್ಳುತ್ತಿದೆ. ಸರ್ಕಾರಿ ನೌಕರರು, ಗೃಹಿಣಿಯರು, ಐಟಿ-ಬಿಟಿ ಉದ್ಯೋಗಿಗಳು ಸಾಹಿತ್ಯದತ್ತ ಹೆಚ್ಚು ಒಲವು ತೋರುತ್ತಿರುವುದು ಸಂತಸದ ಸಂಗತಿ. ಇದು ಆಶಾದಾಯಕ ಬೆಳವಣಿಗೆ ಎಂದರು. ಅಂಕಿತ ಪುಸ್ತಕ ಪ್ರಕಾಶನವು ಕನ್ನಡ ಸಾಹಿತ್ಯಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಪುಸ್ತಕಗಳ ಕುರಿತು ಮಾತನಾಡಿದ ವೈದ್ಯ ಸಾಹಿತಿ ಡಾ.ನಾ.ಸೋಮೇಶ್ವರ ಅವರು ಇಂದು ಪ್ರತಿಯೊಬ್ಬರೂ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದೇ ಇದಕ್ಕೆ ಕಾರಣ. ಇಂದು ನೂರಕ್ಕೆ 90ರಷ್ಟು ಮಂದಿ ಪ್ರೀತಿಯಿಲ್ಲದೇ ನರಳುತ್ತಿದ್ದಾರೆ ಹಾಗಾಗಿ ಎಲ್ಲರೂ ನೋವು ಹಾಗೂ ನಲಿವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದರು. ವಿಮರ್ಶಕ ಡಾ.ಜಿ.ಬಿ.ಹರೀಶ್, 'ಇಂದಿನ ಬದುಕಿನ ಮಾನಸಿಕ ಸವಾಲುಗಳು' ಪುಸ್ತಕದ ಲೇಖಕ ಡಾ.ಸಿ.ಆರ್.ಚಂದ್ರಶೇಖರ್, 'ಮಾತಿನ ತೊಡರು ವಿಶ್ಲೇಷಣೆ ಮತ್ತು ಪರಿಹಾರ' ಪುಸ್ತಕದ ಕರ್ತೃ ಡಾ.ಜಿ.ಪುರುಷೋತ್ತಮ, 'ಮೌನಗರ್ಭ ಮನೋವಿಕಾಸದ ಒಳನೋಟಗಳು'ಪುಸ್ತಕದ ಲೇಖಕ ಗಂಗಾಧರ ಬೆಳ್ಳಾರೆ, 'ರಾಮಾಯಣದ ಉಪಕಥೆಗಳು ಸಾಹಿತಿಗಳು...ರಸಪ್ರಸಂಗಗಳು' ಪುಸ್ತಕ ಸಂಪಾದಿಸಿರುವ ವೈ.ಎನ್.ಗುಂಡೂರಾವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.