ಫಲಿತಾಂಶಕ್ಕೆ ಕ್ಷಣಗಣನೆ ಆರಂಭ
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 15
ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟಣೆಗೆ ಕ್ಷಣ ಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳಲ್ಲಿ ತಳಮಳ ಮೂಡಿಸಿದೆ. ಶುಕ್ರವಾರ (ಮೇ 16) ನಡೆಯುವ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ತಲಾ ಒಂದು ಕೊಠಡಿಯಲ್ಲಿ ತಲಾ 14 ಟೇಬಲ್ಗಳಲ್ಲಿ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ ಎಣಿಕೆಯಾದ ಮತ ಯಂತ್ರಗಳ ಪೈಕಿ ಆಯ್ದ ಮತ ಯಂತ್ರಗಳ ಮಾಹಿತಿಯ ಪುನರ್ ಪರಿಶೀಲನೆಗೆ 2 ಟೇಬಲ್ ಮೀಸಲಾಗಿರುತ್ತದೆ.
ವಿಶೇಷ ವ್ಯವಸ್ಥೆ: ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದು, ಇದಕ್ಕಾಗಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿಯ 700 ಸಿಬ್ಬಂದಿ ನಿಯೋಜಿಸಲಾಗಿದೆ. ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಪರ ಏಜೆಂಟರು, ಎಣಿಕೆ ಸಿಬ್ಬಂದಿ ಸಾಗುವುದಕ್ಕೆ ಪ್ರತ್ಯೇಕ ಮಾರ್ಗ ವ್ಯವಸ್ಥೆಯಾಗಿದೆ.
ಪ್ರತಿಯೊಂದು ಎಣಿಕೆ ಕೊಠಡಿಗೂ ಕ್ಯಾಮೆರಾ ಅಳವಡಿಸಲಾಗಿದೆ. ಕೊಠಡಿಯಲ್ಲಿನ ಪ್ರಕ್ರಿಯೆಯನ್ನು ಚುನಾವಣಾ ವೀಕ್ಷಕರು ಮತ್ತು ಚುನಾವಣಾಧಿಕಾರಿಯು ತಮ್ಮ ಕೊಠಡಿಯಲ್ಲಿದ್ದುಕೊಂಡೇ ವೀಕ್ಷಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಮೊದಲೇ ನಿಗದಿ: ಪ್ರತಿಯೊಂದು ಟೇಬಲ್ಗೂ ಸಂಖ್ಯೆ ನೀಡಲಾಗಿದೆ. ಆಯಾ ಸಂಖ್ಯೆಯ ಟೇಬಲ್ನಲ್ಲಿ ಯಾವ್ಯಾವ ಮತಗಟ್ಟೆಯ ಮತಗಳ ಎಣಿಕೆ ನಡೆಯಬೇಕು ಎನ್ನುವುದನ್ನು ಮೊದಲೇ ನಿಗದಿಪಡಿಸಿ, ಫಲಕವನ್ನು ಟೇಬಲ್ ಪಕ್ಕದಲ್ಲೇ ಅಳವಡಿಸಲಾಗಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ರೌಡಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಅದರಲ್ಲಿರುವವರು ಏಜೆಂಟರಾಗಿ ಬಂದರೆ ಹೊರ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಏಜೆಂಟರು, ಎಣಿಕೆ ಸಿಬ್ಬಂದಿ ಮೊಬೈಲ್ ಒಯ್ಯುವುದಕ್ಕೆ ನಿಷೇಧ ಹೇರಲಾಗಿದೆ.
ಒಮ್ಮೆಯಷ್ಟೇ ಪ್ರವೇಶ: ಅಭ್ಯರ್ಥಿಗಳ ಪರ ಎಣಿಕೆ ಏಜೆಂಟರಿಗೆ ಒಂದು ಪಾಸಿನಲ್ಲಿ ಒಮ್ಮೆಯಷ್ಟೇ ಎಣಿಕೆ ಕೇಂದ್ರಕ್ಕೆ ಪ್ರವೇಶವಿರುತ್ತದೆ. ಅಪ್ಪಿತಪ್ಪಿಯೂ ಅವರು ಹೊರ ಬರುವಂತಿಲ್ಲ. ಹಾಗೊಮ್ಮೆ ಹೊರ ಬಂದರೆ ಮತ್ತೆ ಒಳಗೆ ಪ್ರವೇಶ ನಿಷಿದ್ಧವಾಗಿದೆ.
ಮೊಬೈಲ್, ಕ್ಯಾಮೆರಾ ಕೊಂಡೊಯ್ಯಲು ಪತ್ರಕರ್ತರಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಅವರೂ ಕೂಡ ಮಾಧ್ಯಮ ಕೇಂದ್ರದಲ್ಲಷ್ಟೇ ಮೊಬೈಲ್ ಬಳಸಬೇಕು. ಅದರಾಚೆಗೆ ಮೊಬೈಲ್ ಬಳಸುವುದಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ.
ಸುತ್ತುವಾರು ಫಲಿತಾಂಶ ಪ್ರಕಟ
ಪ್ರತಿಯೊಂದು ಸುತ್ತಿನ ಫಲಿತಾಂಶವನ್ನು ಕ್ರೋಢೀಕರಿಸಿ ಪ್ರಕಟಿಸಲಾಗುತ್ತದೆ. ಎಣಿಕೆ ಮುಗಿದು, ಕಂಪ್ಯೂಟರ್ನಲ್ಲಿ ದಾಖಲಾಗುತ್ತಿದ್ದಂತೆಯೇ ಅದರ ಮಾಹಿತಿಯು ಮಾಧ್ಯಮ ಕೇಂದ್ರದಲ್ಲಿ ಲಭ್ಯವಿರುತ್ತದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದರು. ಎಣಿಕೆ ಕೇಂದ್ರದ ಸಿದ್ಧತೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಎಣಿಕೆ ಮತ್ತು ಬಂದೋಬಸ್ತ್ಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೇಳಿದರು. ಈ ಬಾರಿ ಮತ ಎಣಿಕೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಎಣಿಕೆ ಕೇಂದ್ರಕ್ಕೆ ಆಗಮಿಸುವ ಸಿಬ್ಬಂದಿ, ಏಜೆಂಟರು ಸಹಿತ ಇತರರ ವಾಹನ ನಿಲುಗಡೆಗೆ, ಫಲಿತಾಂಶದ ಬಗ್ಗೆ ಕುತೂಹಲದಿಂದ ಬರುವ ಜನರು ನಿಲ್ಲಲು ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು.
ಕದನದ ಕಲಿಗಳಿವರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿ ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಸುರೇಶ್ ಸ್ಪರ್ಧಿಸಿದ್ದರೆ, ಜೆಡಿಎಸ್ನಿಂದ ಆರ್.ಪ್ರಭಾಕರರೆಡ್ಡಿ, ಬಿಜೆಪಿಯಿಂದ ಪಿ.ಮುನಿರಾಜುಗೌಡ, ಆಪ್ನಿಂದ ರವಿ ಕೃಷ್ಣಾರೆಡ್ಡಿ, ಬಿಎಸ್ಪಿಯಿಂದ ಸಿ.ತೋಪಯ್ಯ ಕಣದಲ್ಲಿರುವ ಪ್ರಮುಖರು. ಇವರಲ್ಲದೆ ಬಸವೇಗೌಡ (ಆರ್ಪಿಐ), ಕೆ.ಎ.ಮೋಹನ್(ಕೆಡಿಸಿ), ಶಂಕರಪ್ಪ (ಜೆವಿಬಿಪಿ), ಕೆಂಚಯ್ಯ, ಜೆ.ನಟರಾಜು, ಜೆ.ಟಿ.ಪ್ರಕಾಶ್, ಮಲ್ಲೇಶ, ಎಂ.ಪಿ. ಮುನಾವರ್ ಷರೀಫ್, ಎಸ್. ಸಿದ್ದರಾಮ ಹೆಗ್ಗಡೆ, ಸುರೇಶ್(ಪಕ್ಷೇತರರು) ಕಣದಲ್ಲಿದ್ದಾರೆ.
ಬೆಂಗಳೂರು ದಕ್ಷಿಣದ್ದೇ ವಿಳಂಬ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶ ಮಧ್ಯಾಹ್ನ 1.30ರ ವೇಳೆಗೆ ಪ್ರಕಟವಾಗುವ ನಿರೀಕ್ಷೆಯಿದೆ. ಹೀಗೆ ವಿಳಂಬಕ್ಕೆ ಅತಿ ಹೆಚ್ಚು ಮತಗಟ್ಟೆ, ಮತದಾರರನ್ನು ಹೊಂದಿದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯೇ ಕಾರಣವಾಗುತ್ತಿದೆ. ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ 2497 ಮತಗಟ್ಟೆಗಳಿವೆ. ಈ ಪೈಕಿ ಅತಿ ಹೆಚ್ಚು ಅಂದರೆ 455 ಮತಗಟ್ಟೆಗಳನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಪ್ರತಿ ಸುತ್ತಿಗೆ 14 ಮತ ಯಂತ್ರ ಎಂದಾದರೂ ಸದರಿ ಕ್ಷೇತ್ರದ ಎಣಿಕೆ ಪೂರ್ಣಕ್ಕೆ 33 ಸುತ್ತು ಬೇಕಾಗುತ್ತದೆ. ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರ ಎರಡನೇ ಅತಿ ಹೆಚ್ಚು ಮತಗಟ್ಟೆ ಹೊಂದಿದ ಕ್ಷೇತ್ರ. ಅಲ್ಲಿನ 348 ಮತಗಟ್ಟೆಗಳ ಎಣಿಕೆ ಮುಗಿಸಲು 25 ಸುತ್ತು ಅಗತ್ಯ. ಆನೇಕಲ್ ಕ್ಷೇತ್ರದಲ್ಲಿ 320 ಮತಗಟ್ಟೆಗಳಿದ್ದು, ಅಲ್ಲಿನ ಎಣಿಕೆ 23 ಸುತ್ತಿಗೆ ಪೂರ್ಣಗೊಳ್ಳಲಿದೆ. 294 ಮತಗಟ್ಟೆಗಳನ್ನು ಒಳಗೊಂಡ ಮಾಗಡಿ ಕ್ಷೇತ್ರ, 292 ಮತಗಟ್ಟೆಗಳಿರುವ ಕನಕಪುರದ ಎಣಿಕೆ 21ನೇ ಸುತ್ತಿಗೆ ಅಂತ್ಯವಾಗುತ್ತದೆ. 263 ಮತಗಟ್ಟೆಗಳಿರುವ ಕುಣಿಗಲ್ ಮತ್ತು ರಾಮನಗರ, 262 ಮತಗಟ್ಟೆಗಳನ್ನು ಹೊಂದಿದ ಚನ್ನಪಟ್ಟಣದ ಎಣಿಕೆ 19ನೇ ಸುತ್ತಿಗೆ ಮುಗಿಯಲಿದೆ.
ಬೆಂಗಳೂರು ದಕ್ಷಿಣ ಹೊರತಾದ ಕ್ಷೇತ್ರಗಳ ಮತ ಎಣಿಕೆ ಬೇಗನೆ ಮುಗಿಯುತ್ತದೆ. ಅಂತಿಮ ಫಲಿತಾಂಶ, ಸೋಲು-ಗೆಲವಿನ ನಿಖರ ಅಂತರ ಲಭ್ಯವಾಗುವುದಕ್ಕೆ ಬೆಂಗಳೂರು ದಕ್ಷಿಣದ ಫಲಿತಾಂಶವನ್ನು ಕಾಯಲೇಬೇಕಾದ ಅನಿವಾರ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

