ಬೆಂಗಳೂರು ಗ್ರಾಮಾಂತರ

ಅವ್ಯವಸ್ಥೆಗಳ ಆಗರ

Published On :

ರಾಮನಗರ: ಹೈ ವೋಲ್ಟೇಜ್ ಕ್ಷೇತ್ರವಲ್ಲದಿದ್ದರೂ ಜಿಲ್ಲಾಡಳಿತ ಮಾತ್ರ ಮತ ಎಣಿಕೆಗೆ ಹೈ ಟೆನ್ಷನ್ ತೆಗೆದುಕೊಂಡಿತ್ತು.
ಎಣಿಕೆ ಕೇಂದ್ರದತ್ತ ಜನರೇ ಸುಳಿಯದಿದ್ದರೂ ಭದ್ರತೆಯನ್ನು ಬಿಗಿ ಗೊಳಿಸಲಾಗಿತ್ತು. ಇದರ ಹೊರತಾಗಿ ಅಲ್ಲಿ ಕಂಡಿದ್ದೆಲ್ಲವೂ ಅದ್ವಾನ, ಅವ್ಯವಸ್ಥೆಗಳ ಆಗರವೇ.
ಸ್ಥಳೀಯ ಪೊಲೀಸ್, ಶಸಸ್ತ್ರ ಮೀಸಲು ಪಡೆ, ಪ್ಯಾರಾ ಮಿಲಿಟರಿ ಹೀಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಅಲ್ಲಿತ್ತು. ಅದನ್ನು ದಾಟಿ ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರಷ್ಟೇ ಅಲ್ಲದೆ ಎಣಿಕೆ ಸಿಬ್ಬಂದಿ ಮತ್ತು ಪತ್ರಕರ್ತರೂ ಹರಸಾಹಸವನ್ನೇ ನಡೆಸಬೇಕಾಯಿತು.
ಏಜೆಂಟರು ಮತ್ತು ಸಿಬ್ಬಂದಿ ಮೊಬೈಲ್ ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿತ್ತು. ಪ್ರಾರಂಭದಲ್ಲಿ ಪತ್ರಕರ್ತರಿಗೂ ಅದೇ ನಿರ್ಬಂಧವಿತ್ತು. ಕಡೆಗೆ, ಒಂದು ಮೊಬೈಲ್ ಒಯ್ಯುವುದಕ್ಕಷ್ಟೇ ಸಡಿಲಿಕೆ ನೀಡಿದರೂ ಹೆಜ್ಜೆ ಹೆಜ್ಜೆಗೂ ತಪಾಸಣೆಯ ಕಿರಿ ಕಿರಿ ತಪ್ಪಲಿಲ್ಲ. ಪತ್ರಕರ್ತರ ಪಾಸುಗಳಲ್ಲೇ ಎಂಟ್ರಿ ಮತ್ತು ರೀ ಎಂಟ್ರಿಗೆ ಅವಕಾಶವೆನ್ನುವುದು ನಮೂದಾಗಿತ್ತು. ಆದರೆ, ಅಲ್ಲಿನ ಭದ್ರತಾ ಅಧಿಕಾರಿಗಳು ಹೊರ ಹೋದರೆ, ಮತ್ತೆ ಒಳ ಪ್ರವೇಶವಿಲ್ಲ ಎಂದು ಪಟ್ಟು ಹಿಡಿದಾಗ ಈ ವ್ಯಾಜ್ಯವು ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಅಂಗಳಕ್ಕೆ ಹೋಗಿ ಇತ್ಯರ್ಥವಾಯಿತು.
ಕೊಠಡಿಯಲ್ಲಿ ಬಂಧಿಗಳು: ಎಣಿಕೆ ಕೇಂದ್ರದ ಒಳಕ್ಕೆ ಪ್ರವೇಶಿಸಿದ ನಂತರ ಪತ್ರಕರ್ತರು ಮಾಧ್ಯಮ ಕೇಂದ್ರ ಎನ್ನುವ ಕೊಠಡಿಯಲ್ಲಿ ಬಂಧಿಗಳಾಗಿ ಉಳಿದರು. ಅಂಚೆ ಮತಪತ್ರ, 4 ಸುತ್ತಿನ ಎಣಿಕೆ ಪೂಣಗೊಂಡರೂ ಕ್ಷೇತ್ರದ ಮುನ್ನಡೆ ಮತ್ತು ಹಿನ್ನಡೆ ಕುರಿತಾದ ಮಾಹಿತಿಗಳು ಅಲ್ಲಿದ್ದ ಪತ್ರಕರ್ತರ ಅರಿವಿಗೆ ಇರದಂತಾಯಿತು.  ಮಧ್ಯಾಹ್ನ 12ರ ವೇಳೆಗೆ ರಾಜ್ಯದ 4 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡು, 20ಕ್ಕೂ ಹೆಚ್ಚು ಕ್ಷೇತ್ರಗಳ ಹತ್ತಾರು ಸುತ್ತಗಳ ಸುದ್ದಿ ಹೊರ ಬಿದ್ದಿತ್ತಾದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಆಗಷ್ಟೇ ಮೊದಲ ಸುತ್ತಿನ ಮತಗಳ ವಿವರ ಲಭ್ಯವಾಯಿತೆಂದರೆ ಎಣಿಕೆ ಅವ್ಯವಸ್ಥೆ ವೇದ್ಯವಾಗುತ್ತದೆ. ಮಾಧ್ಯಮ ಕೇಂದ್ರದಲ್ಲಿ ಸುತ್ತುವಾರು ಫಲಿತಾಂಶದ ತಾಜಾ ಮಾಹಿತಿಯನ್ನು ಪರದೆ ಮೇಲೆ ನೀಡುತ್ತೇವೆಂದು ಜಿಲ್ಲಾಡಳಿತ ಹೇಳಿಕೊಂಡಿತ್ತು. ಪ್ರೊಜೆಕ್ಟರ್ ಎದುರು ಬಿಳಿ ಬಟ್ಟೆ ನೇತು ಹಾಕಿ, ಅದರಲ್ಲಿ ಅಸ್ಪಷ್ಟ ಮಾಹಿತಿಯನ್ನು ನೀಡಲಾಗುತ್ತಿತ್ತು. ಫ್ಯಾನ್ ಗಾಳಿಗೆ ಬಟ್ಟೆ ಆಕಡೆ ಈಕಡೆ ನೇತಾಡುತ್ತಿತ್ತು.ಮುಖಂಡರಿಗೆ ಮುಕ್ತ: ಸಾಕಷ್ಟು ರಾಜಕೀಯ ಮುಖಂಡರು, ಪ್ರಭಾವಿಗಳಿಗೆ ತಪಾಸಣೆಯ ಕಿರಿ ಕಿರಿ ಅಷ್ಟಾಗಿರಲಿಲ್ಲ.
ಎಣಿಕೆ ಕೇಂದ್ರದ ಒಳಗೆ ರಾಜಕೀಯ ಮುಖಂಡರು ಮತ್ತು ಸಾಕಷ್ಟು ಎಣಿಕೆ ಸಿಬ್ಬಂದಿ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದರೆಂದರೆ, ಅವರ ಮೊಬೈಲ್‌ಗಳು ಕೇಂದ್ರ ಪ್ರವೇಶಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ಎಣಿಕೆ ಕೇಂದ್ರವಾಗಿದ್ದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಒಳಾಂಗಣದಲ್ಲಿ ಲೆಕ್ಕವಿಲ್ಲದಷ್ಟು ಸೇದಿ ಬಿಸಾಡಿದ ಬೀಡಿ, ಸಿಗರೇಟು ತುಂಡುಗಳೇ ಬಿದ್ದಿದ್ದವು. ಬಿಗಿ ಬಂದೋಬಸ್ತ್ ಮತ್ತು ತಪಾಸಣೆಯ ನಡುವೆಯೂ ಅವೆಲ್ಲವನ್ನು ಕೇಂದ್ರದೊಳಗೆ ಕೊಂಡೊಯ್ಯಲು ಅವಕಾಶ ಸಿಕ್ಕಿದ್ದೂ ಅನುಮಾನಕ್ಕೆಡೆ ಮಾಡಿದೆ.
ಅನ್ನಭಾಗ್ಯದ ಅಕ್ಕಿ: ಎಣಿಕೆ ಕೇಂದ್ರದಲ್ಲಿ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಉಸ್ತುವಾರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರ ಸುಪರ್ದಿಗೆ ಬಿಡಲಾಗಿತ್ತು. ಉಪಹಾರಕ್ಕೆ ಬಳಸಿದ್ದೆಲ್ಲವೂ ಅನ್ನಭಾಗ್ಯದ ಅಕ್ಕಿಯೇ ಎನ್ನಲಾಗಿದೆ. ಇದರ ಊಟ ಸವಿದವರು ಕೆಳ ಹಂತದ ಸಿಬ್ಬಂದಿಯಷ್ಟೇ.
ಆದರೆ, ಚುನಾವಣಾಧಿಕಾರಿಯೂ ಸಹಿತ ಉನ್ನತ ಅಧಿಕಾರಿಗಳಿಗೆ ನಗರದ ಪ್ರತಿಷ್ಠಿತ ಹೋಟೆಲೊಂದರಿಂದ ಕಾಫಿ-ಟೀ, ಊಟೋಪಚಾರ ತರಲೆಂದೇ ವಾಹನಗಳು ಅಡ್ಡಾದಿಡ್ಡಿ ಸುತ್ತುತ್ತಿದ್ದವು. ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿಗೆ ಸಾಕಷ್ಟು ಕಡಿವಾಣ ಹಾಕಲಾಗಿತ್ತು. ಅವರಲ್ಲಿ ನೊಟೀಸ್, ಕ್ರಮ ಜಾರಿಯ ಭೀತಿ ಎದ್ದು ಕಾಣುತ್ತಿತ್ತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.