ನರೇಂದ್ರ ಮೋದಿ ಅಲೆ ಇದ್ದರೂ ಬೇರೂರಲು ಬಿಜೆಪಿ ವಿಫಲ
ಮತ್ತೀಕೆರೆ ಜಯರಾಮ್
ರಾಮನಗರ: ದೇಶವ್ಯಾಪಿ ನರೇಂದ್ರ ಮೋದಿ ಅಲೆ ಇದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೇರೂರಲು ಬಿಜೆಪಿ ವಿಫಲವಾಗಿದೆ. ಆಳವಾಗಿದ್ದ ಜೆಡಿಎಸ್ ಬೇರುಗಳು ಅಲುಗಾಡಿವೆ. ಉಭಯ ಪಕ್ಷಗಳು ಗೆಲವನ್ನು ಚಿನ್ನದ ತಟ್ಟೆಯಲ್ಲಿಟ್ಟು ಕಾಂಗ್ರೆಸ್ ಕೈಗಿತ್ತಿವೆ.
ಸಿಲಿಕಾನ್ ಸಿಟಿ ಬೆಂಗಳೂರು, ಕಲ್ಪವೃಕ್ಷಗಳ ನಾಡು ತುಮಕೂರಿನ ಕುಣಿಗಲ್ ಜತೆ ರೇಷ್ಮೆನಾಡು ರಾಮನಗರವು ಕೂಡಿಕೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ತೀರಾ ಭಿನ್ನವಾಗಿದೆ. ನಗರಿಗರಷ್ಟೇ ಗ್ರಾಮೀಣ ಮತದಾರರು ಈ ಕ್ಷೇತ್ರದಲ್ಲಿರುವುದು ವಿಶೇಷ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಬ್ಬರಿಸಿದ ಬಿಜೆಪಿಯನ್ನು ಗ್ರಾಮೀಣ ಮತದಾರರು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದಾರೆ. ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಜೆಡಿಎಸ್ ಪಾಲಿಗೆ ಎದುರಾಗಿದ್ದು, ಸ್ವಲ್ಪ ಹೆಚ್ಚುಕಮ್ಮಿಯಾದರೂ ಉಭಯ ಕಡೆ ಸರಿದೂಗಿಸಿಕೊಂಡು ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಯುದ್ಧಕಾಲದ ಶಸ್ತ್ರಾಭ್ಯಾಸ: ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಎನ್ನುವ ಜತೆಗೆ ಸಿಕ್ಕ ಅಲ್ಪಾವಧಿ ಅವಕಾಶದಲ್ಲೇ ಕ್ರಿಯಾಶೀಲ ಸಂಸದ ಎನಿಸಿಕೊಂಡ ಡಿ.ಕೆ.ಸುರೇಶ್ ಉಪ ಚುನಾವಣೆ ಗೆಲವಿನ ವಿಜಯೋತ್ಸವದಿಂದಲೇ ಪ್ರಸಕ್ತ ಸಾರ್ವತ್ರಿಕ ಚುನಾವಣೆಗೆ ತಾಲೀಮು ಪ್ರಾರಂಭಿಸಿದ್ದರು.
ದಿನದಿಂದ ದಿನಕ್ಕೆ ತಮ್ಮ ಗೆಲವಿನ ಹಾದಿಯನ್ನು ಸುಗಮಗೊಳಿಸಿಕೊಂಡೇ ಸಾಗಿದರು. ಆದರೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳದ್ದು ಈ ಕ್ಷೇತ್ರದ ಮಟ್ಟಿಗೆ ಯುದ್ಧ ಸಂದರ್ಭದಲ್ಲಿನ ಶಸ್ತ್ರಾಭ್ಯಾಸ ಎನ್ನುವಂತಾಗಿದ್ದೇ ಕಾಂಗ್ರೆಸ್ ಅಭ್ಯರ್ಥಿಯ ದೊಡ್ಡ ಅಂತರದ ಗೆಲುವಿಗೆ ನೆರವಾಗಿದೆ.
ಬಿರುಸು ಕಾಣದಾಯ್ತು: ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದ ಮಟ್ಟಿಗೆ ಹೊಸ ಮುಖಗಳು. ಪ್ರಭಾವಿಗಳಲ್ಲದ ಕಾರಣ ಮತದಾರರ ಪಾಲಿಗೆ ನಿರುತ್ಸಾಹ ಮೂಡಿತು. ಇವೆರಡೂ ಪಕ್ಷಗಳ ರಾಜ್ಯ ಮುಖಂಡರು ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯಲಿಲ್ಲ.
ಒಮ್ಮೆ ವಿಧಾನಸಭೆಗೆ, ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸುವ ಚಾಳಿಯ ಜತೆಗೆ ಚಿಕ್ಕಬಳ್ಳಾಪುರಕ್ಕೆ ಕ್ಷೇತ್ರಾಂತರ ಮಾಡಿದ ಕುಮಾರಸ್ವಾಮಿ ನಿಲವು ಜೆಡಿಎಸ್ಗೆ ದೊಡ್ಡ ಹೊಡೆತ ನೀಡಿತು. ಬಿಜೆಪಿ ಪ್ರಮುಖ ನಾಯಕರು ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿಯದೆ ಅಭ್ಯರ್ಥಿಗೆ ಮುಳುವಾಗಿದ್ದಾರೆ.
ರಾಜ್ಯದಲ್ಲೇ 2ನೇ ದೊಡ್ಡ ಲೀಡ್
ಘಟಾನುಘಟಿಗಳ ಸೋಲು-ಗೆಲವು ಸಹಿತ ನಾನಾ ಕಾರಣಕ್ಕೆ ಆಗಿನ ಕನಕಪುರ, ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗಮನ ಸೆಳೆದುಕೊಂಡೇ ಬಂದಿದೆ. ಪ್ರಸಕ್ತ ಚುನಾವಣೆಯಲ್ಲಿ ಅತಿದೊಡ್ಡ ಅಂತರದ ಗೆಲವಿನಲ್ಲಿ ರಾಜ್ಯಕ್ಕೆ ಈ ಕ್ಷೇತ್ರವೇ ಎರಡನೆಯದ್ದಾಗಿದೆ. ಡಿ.ಕೆ.ಸುರೇಶ್ ಅವರು ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಮುನಿರಾಜುಗೌಡ ಎದುರು 2.31 ಲಕ್ಷ ಮತಗಳಿಂದ ಗೆಲವು ಸಾಧಿಸಿದ್ದಾರೆ. ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಗೆಲವಿನ ಅಂತರದ ನಂತರ ರಾಜ್ಯದಲ್ಲಿ ಸುರೇಶ್ ಲೀಡ್ ಎರಡನೆಯದ್ದಾಗಿದೆ.
ಹೆಚ್ಚು ಖರ್ಚು ಮಾಡಿ 3ನೇ ಸ್ಥಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಖರ್ಚು ಮಾಡಿದವರೇ ಜೆಡಿಎಸ್ ಅಭ್ಯರ್ಥಿ ಆರ್.ಪ್ರಭಾಕರರೆಡ್ಡಿ. ಇಷ್ಟಾಗಿಯೂ ಅವರಿಲ್ಲಿ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ನಗರ ಪ್ರದೇಶವನ್ನಷ್ಟೇ ಕೇಂದ್ರೀಕರಿಸಿದ್ದ ಬಿಜೆಪಿ ಗ್ರಾಮೀಣರಿಂದ ಸೋಲಿನ ಪಾಠ ಕಲಿತಿದೆ. ಅತ್ತ ನಗರ, ಇತ್ತ ಗ್ರಾಮೀಣ ಉಭಯ ಭಾಗದಲ್ಲೂ ಸಮನಾಂತರವಾಗಿ ಸಂಪನ್ಮೂಲ ಹರಿಬಿಡುವ ಮೂಲಕ ಮತಬೇಟೆಯಲ್ಲಿ ಕಾಂಗ್ರೆಸ್ ಸಾಫಲ್ಯ ಕಂಡಿದೆ. ಸಿಹಿ ಇರುವೆಡೆ ಇರುವೆಗಳ ಸಾಲು ಕಾಣುವಂತೆ ಪ್ರಭಾಕರರೆಡ್ಡಿ ಅವರಿಂದ ಕೆಲ ಮುಖಂಡರು ಸಾಕಷ್ಟು ಸುಲಿದುಕೊಂಡಿದ್ದಾರೆ.
ಎಲ್ಲೆಲ್ಲಿ ಯಾರಿಗೆ ಎಷ್ಟು ಮತ?
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಶೇಕಡ 44.84, ಬಿಜೆಪಿ 28.23, ಜೆಡಿಎಸ್ 21.83ರಷ್ಟು ಮತಗಳನ್ನು ಪಡೆದುಕೊಂಡಿದೆ. 2009ರ ಚುನಾವಣೆಯಲ್ಲಿ ಜೆಡಿಎಸ್ 44.71, ಬಿಜೆಪಿ 32.90 ಮತ್ತು ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇಕಡ 17.48 ಆಗಿತ್ತು.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಈ ಕ್ಷೇತ್ರಗಳ ಒಟ್ಟು ಪುರಸ್ಕೃತ ಮತಗಳು 675878. ಬಿಜೆಪಿ 326501 (ಶೇಕಡ 48.30), ಕಾಂಗ್ರೆಸ್ 252078 (ಶೇಕಡ 37.29), ಜೆಡಿಎಸ್ ಕೇವಲ 67243 (ಶೇಕಡ 9.94) ಮತ ಗಳಿಸಿವೆ.
ರಾಮನಗರ ಜಿಲ್ಲೆಯ 4 ಮತ್ತು ತುಮಕೂರಿನ ಕುಣಿಗಲ್ ಸಹಿತ ಗ್ರಾಮೀಣ ಭಾಗದ 5 ವಿಧಾನಸಭಾ
ಕ್ಷೇತ್ರಗಳಲ್ಲಿ ಪುರಸ್ಕೃತ ಮತಗಳು 779125. ಈ ಕಡೆ ಕಾಂಗ್ರೆಸ್ 400548 (ಶೇಕಡ 51), ಜೆಡಿಎಸ್ 250585 (ಶೇಕಡ 27.93) ಮತ್ತು ಬಿಜೆಪಿ 94649 (ಶೇಕಡ 12) ಮತ ಪಡೆದಿವೆ.
ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡ 54.92 ಮತ್ತು ಜೆಡಿಎಸ್ ಶೇಕಡ 41.92 ರಷ್ಟು ಮತ ಗಳಿಸಿತ್ತು. 2009ರ ಸಾರ್ವತ್ರಿಕ ಚುನಾವಣೆ ಮತ್ತು 2013ರ ಉಪ ಚುನಾವಣೆ ಫಲಿತಾಂಶಕ್ಕಿಂತ ಭಿನ್ನವಾದ ಮತ ಹಂಚಿಕೆ ಈ ಬಾರಿ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

