ಬೆಂಗಳೂರು ಗ್ರಾಮಾಂತರ

ಕಣ್ವ ಜಲಾಶಯದಲ್ಲಿ ಹನಿ ನೀರಿಲ್ಲ

Published On :

ಕ.ಪ್ರ.ವಾರ್ತೆ  ರಾಮನಗರ  ಮೇ 25
ನೆರೆಯ ಮಂಡ್ಯದ ಕನ್ನಂಬಾಡಿಯಂತೆಯೇ ರಾಮನಗರದ ಕಣ್ವ ಜಲಾಶಯವೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸು. ಮೈಸೂರು ಅರಸರ ಆಳ್ವಿಕೆಯಲ್ಲಿ 1946ರಲ್ಲಿ ನಿರ್ಮಾಣಗೊಂಡ ಕಣ್ವ ಜಲಾಶಯ ಇದೇ ಮೊದಲ ಬಾರಿ ಹನಿ ನೀರಿಲ್ಲದಂತೆ ಬರಿದಾಗಿದೆ.
ಅರವತ್ತೆಂಟು ವರ್ಷಗಳಲ್ಲಿ ನಾಲ್ಕಾರು ಬಾರಿ ತಲೆದೋರಿದ ಭೀಕರ ಬರದಲ್ಲೂ ಕಣ್ವ ಬತ್ತಿರಲಿಲ್ಲ. ಕಳೆದ ಒಂದೂವರೆ ದಶಕದಿಂದ ಎದುರಾಗಿರುವ ಮಳೆ ಅಭಾವದ ಜತೆಗೆ ಮೇಲ್ಭಾಗದಲ್ಲಿ ನಿರ್ಮಾಣವಾದ ವೈ.ಜಿ.ಗುಡ್ಡ ಅಣೆಕಟ್ಟೆಯಿಂದ ಕಣ್ವದ ಜಲಮೂಲಕ್ಕೆ ಹೊಡೆತ ಬಿದ್ದಿದೆ.  
1963-64ನೇ ಸಾಲಿನಲ್ಲಿ ಭೀಕರ ಬರ ಎದುರಾಗಿದ್ದಾಗ ಈ ಜಿಲ್ಲೆಯ ಇತರೆ ಅಣೆಕಟ್ಟೆ, ನದಿ, ತೊರೆ, ಕರೆ, ಕಟ್ಟೆಗಳೆಲ್ಲ ಬರಿದಾಗಿದ್ದವು. ಆದರೆ, ಕಣ್ವದಲ್ಲಿ ಒಂದೂವರೆ ಅಡಿಯಷ್ಟು ನೀರಿತ್ತು. ಇದೀಗ ಕಣ್ವದಲ್ಲಿ ಹನಿ ನೀರಿಲ್ಲ. ಬಿರುಕು ಬಿಟ್ಟ ಭೂಮಿಯೊಂದಿಗೆ ಜಲಾಶಯ ಭಣಗುಡುತ್ತಿದೆ.
ಹುಟ್ಟು, ಅಂತ್ಯ ಇಲ್ಲೇ: ಈ ಜಿಲ್ಲೆಯ ಮಾಗಡಿಯಲ್ಲಿ ಹುಟ್ಟಿ, ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಹರಿದು ಕನಕಪುರ ತಾಲೂಕಿನ ಸಂಗಮದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ಕಣ್ವ ನದಿಗೆ ರಾಮನಗರ ಮತ್ತು  ಚನ್ನಪಟ್ಟಣ ತಾಲೂಕುಗಳ ಗಡಿಯಲ್ಲಿ ಜಲಾಶಯ ನಿರ್ಮಿಸಲಾಗಿದೆ. ಹದಿನೈದು ವರ್ಷದಿಂದ ಇಲ್ಲಿಂದ ನೀರು ಹರಿದ ನಿದರ್ಶನವಿಲ್ಲ.
2100 ಎಕರೆ ವಿಸ್ತಾರ ಮತ್ತು 34 ಅಡಿ ಎತ್ತರವಿರುವ ಈ ಜಲಾಶಯ ರಾಮನಗರ ತಾಲೂಕಿನಲ್ಲಿದೆ. 1 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಜಲಾಶಯದಿಂದ ಚನ್ನಪಟ್ಟಣ ತಾಲೂಕಿನ 5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿತ್ತು.
ತುಂಬಿರುವ ಹೂಳು: ಚನ್ನಪಟ್ಟಣ ತಾಲೂಕಿನ 17 ಹಾಗೂ ಮದ್ದೂರು ತಾಲೂಕಿನ 5 ಕೆರೆಗಳಿಗೆ ನೀರು ತುಂಬಿಸಲಾಗುತ್ತಿತ್ತು. ಇದೀಗ ಜಲಾಶಯವನ್ನು ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿಸಿದ್ದು, ಜಲಾಶಯದಲ್ಲಿ ತುಂಬಿರುವ ಹೂಳೆತ್ತಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಾಳಜಿ ಇಲ್ಲ.
1999ರಲ್ಲಿ ಜಲಾಶಯದ ಸ್ವಯಂ ಚಾಲಿತ ಕ್ರಸ್ಟ್ ಗೇಟ್‌ಗಳು ತೆರೆದುಕೊಂಡು, ನದಿಯಲ್ಲಿ ನೀರು ಹರಿದಿದ್ದೇ ಕೊನೆಯದಾಗಿದೆ. ಈ ಜಲಾಶಯಕ್ಕೆ 5 ವರ್ಷದ ಹಿಂದೆ ಯಂತ್ರ ಚಾಲಿತ ಕ್ರಸ್ಟ್‌ಗೇಟ್ ಅಳವಡಿಸಿದ್ದು, ಅಲ್ಲಿಂದೀಚೆಗೆ ಜಲಾಶಯದಲ್ಲಿ ನೀರಿನ ಮಟ್ಟ 17 ಅಡಿಗೆ ಏರಿತ್ತಷ್ಟೇ.
ಏತ ನೀರಾವರಿ ಅನುಷ್ಠಾನ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಪ್ರಯತ್ನದ ಫಲವಾಗಿ ಜಿಲ್ಲೆ ಗಡಿಯಂಚಿನಲ್ಲಿ ಹರಿಯುವ ಶಿಂಷಾದಿಂದ ಕಣ್ವ ಸಹಿತ 17 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.  ಏತ ನೀರಾವರಿ ಯೋಜನೆ ಪೂರ್ಣಗೊಂಡು, ನೀರು ಹರಿಸಿದ ನಂತರ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಅಡ್‌ಡಿಯಾಗುತ್ತದೆ. ಹೀಗಾಗಿ ಕಣ್ವದಲ್ಲಿ ತುಂಬಿರುವ ಹೂಳೆತ್ತಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಕಾರ್ಯೋನ್ಮುಖರಾಗುವುದು ಅಗತ್ಯವಾಗಿದೆ.  
ವಿಶಿಷ್ಟ ತಂತ್ರಜ್ಞಾನ
ಸ್ವಯಂ ಚಾಲಿತ ಕ್ರಸ್ಟ್‌ಗೇಟ್ ಹೊಂದಿದ ಜಲಾಶಯಗಳು ಇಡೀ ದೇಶದಲ್ಲಿ ಎರಡು ಮಾತ್ರವೇ ಇವೆ. ಈ ಪೈಕಿ ರಾಜ್ಯದಲ್ಲಿರುವ ಏಕೈಕ ಜಲಾಶಯ ಕಣ್ವ. ಈಗ ಯಂತ್ರ ಚಾಲಿಕ ಕ್ರಸ್ಟ್‌ಗೇಟ್ ಅಳವಡಿಸಿದ್ದರೂ ಸ್ವಯಂ ಚಾಲಿತ ಕ್ರಸ್ಟ್‌ಗೇಟ್ ಅನ್ನು ನಿಷ್ಕ್ರಿಯಗೊಳಿಸಲಾಗಿಲ್ಲ.  ಒಂದೊಮ್ಮೆ ಯಂತ್ರ ಚಾಲಿತ ಕ್ರಸ್ಟ್‌ಗೇಟ್‌ಗಳನ್ನು ತೆರೆದು, ಹೆಚ್ಚುವರಿ ನೀರನ್ನು ಹೊರ ಬಿಡುವಲ್ಲಿ ವಿಫಲವಾದರೆ ಸ್ವಯಂ ಚಾಲಿತ ಕ್ರಸ್ಟ್‌ಗೇಟ್ ತೆರೆದುಕೊಳ್ಳಲಿದೆ. ಒಮ್ಮೆ ತೆರೆದುಕೊಂಡರೆ ಸತತ 4 ತಾಸು ಹಾಗೇ ಇದ್ದು, 14 ಸಾವಿರ ಕ್ಯೂಸೆಕ್ ನೀರನ್ನು ಹೊರ ಹಾಕುತ್ತದೆ.
ಒಮ್ಮೆ ಸ್ವಯಂ ಚಾಲಿತ ಕ್ರಸ್ಟ್‌ಗೇಟ್ ತೆರೆದುಕೊಂಡರೆ 2 ಅಡಿಯಷ್ಟು ನೀರು ಅನಗತ್ಯವಾಗಿ ಪೋಲಾಗುತ್ತಿತ್ತು. ನದಿಯಲ್ಲಿ ಉಕ್ಕಿ ಹರಿಯುತ್ತಿದ್ದ ನೀರಿನಿಂದ ಬೆಳೆ, ಪ್ರಾಣ ಹಾನಿಯೂ ಆಗುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಯಂತ್ರ ಚಾಲಿತ ಕ್ರಸ್ಟ್‌ಗೇಟ್ ಅಳವಡಿಸಲಾಗಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.