ಇಲ್ಬಿಟ್ಟು ಅಲ್ಹೋಗಿ.. ಅಲ್ಬಿಟ್ಟು ಇಲ್ಹೋಗಿ...
ಬೆಂಗಳೂರು: ಮಾಹಿತಿ ಕೋರಿ ನಗರದ ವಿವಿಧ ಇಲಾಖೆಗಳಿಗೆ ಇತ್ತೀಚೆಗೆ ಸಲ್ಲಿಕೆಯಾಗುತ್ತಿರುವ ಬಹುತೇಕ ಅರ್ಜಿಗಳ ಪರಿಸ್ಥಿತಿ 'ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ' ಎಂಬಂತಾಗುತ್ತಿದೆ..!
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿತ ಮಾಹಿತಿಯನ್ನು ನೇರವಾಗಿ ಒದಗಿಸುವ ಬದಲು ಅಧಿಕಾರಿಗಳು ಕಂಡುಕೊಳ್ಳುತ್ತಿರುವ ವಾಮಮಾರ್ಗ ಇಂತಹದ್ದೊಂದು ಪರಿಸ್ಥಿತಿ ನಿರ್ಮಾಣ ಮಾಡಿದೆ.
ಪರಿಣಾಮ, ಸಾರ್ವಜನಿಕರು ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ನಿಗದಿತ ಅವಧಿಯೊಳಗೆ ಅಪೇಕ್ಷಿತ ಮಾಹಿತಿ ಸಿಗುವ ಬದಲು 'ತಾವು ಕೋರಿದ ಮಾಹಿತಿ ಈ ವಿಭಾಗದಲ್ಲಿಲ್ಲ. ಮತ್ತೊಂದು ವಿಭಾಗದಲ್ಲಿ ಇದ್ದರೆ ಪರಿಶೀಲಿಸಿ ಒದಗಿಸುವಂತೆ ಕೋರಲಾಗಿದೆ' ಎಂಬರ್ಥದ ಉತ್ತರಗಳೇ ಹೆಚ್ಚಾಗುತ್ತಿವೆ.
ಆ ಮೂಲಕ ಅಧಿಕಾರಿಗಳು ಸಮರ್ಪಕ ಉತ್ತರ ಹೇಳುವುದರಿಂದ ನುಣುಚಿಕೊಳ್ಳುತ್ತಿದ್ದರೆ, ಅರ್ಜಿದಾರರ ಶ್ರಮ ಹಾಗೂ ಸಮಯ ಅನಗತ್ಯವಾಗಿ ವ್ಯಯವಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರನೇಕರು ಅಲವತ್ತುಕೊಳ್ಳುತ್ತಿದ್ದಾರೆ.
ಏನಾಗುತ್ತಿದೆ?: ಯಾವುದೇ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಿತ ಅಧಿಕಾರಿ ಅರ್ಜಿದಾರರು ಕೋರಿದ ಸಮರ್ಪಕ ಮಾಹಿತಿಯನ್ನು 30 ದಿನಗಳ ಒಳಗೆ ಒದಗಿಸಬೇಕು. ಇಲ್ಲವಾದಲ್ಲಿ ಅಂಥವರ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯನ್ವಯ ದಂಡ ತೆರುವಂತೆ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಇತ್ತೀಚೆಗೆ ವಾಮಮಾರ್ಗ ಕಂಡುಕೊಂಡಿರುವ ಕೆಲ ಅಧಿಕಾರಿಗಳು ಸಾರ್ವಜನಿಕರು ನೀಡಿದ ಅರ್ಜಿಯನ್ನು ತಮ್ಮ ಇಲಾಖೆಯ ನಿಗದಿತ ವಿಭಾಗಕ್ಕೆ ಕಳುಹಿಸುವ ಬದಲು ಸಂಬಂಧವಿರದ ಮತ್ತೊಂದು ವಿಭಾಗಕ್ಕೆ ಕಳುಹಿಸುತ್ತಾರೆ. ಬಳಿಕ ಅವಧಿ ಮುಗಿಯುತ್ತಿದ್ದಂತೆ ತಾವು ಕೋರಿದ ಮಾಹಿತಿ ಈ ವಿಭಾಗದಲ್ಲಿ ಇಲ್ಲ. ಮತ್ತೊಂದು ವಿಭಾಗದಲ್ಲಿ ಇದ್ದರೆ ಪರಿಶೀಲಿಸಿ ನೀಡುವಂತೆ ಕೋರಲಾಗಿದೆ ಎಂಬರ್ಥದ ಉತ್ತರವಿರುವ ಪತ್ರ ಅರ್ಜಿದಾರರಿಗೆ ತಲುಪಿಸುತ್ತಾರೆ. ಆ ಮೂಲಕ ಅರ್ಜಿಗೆ ಉತ್ತರಿಸಿದ ರೀತಿಯಲ್ಲಿ ವರ್ತಿಸುವ ಅಧಿಕಾರಿಗಳು ಅಪೇಕ್ಷಿತ ಮಾಹಿತಿ ನೀಡದೆ ಜಾಣತನ ಮೆರೆಯುತ್ತಾರೆ. ಹೀಗೆ ಮಾಹಿತಿ ವಂಚಿತನಾಗುವ ಮೂಲಕ ಅರ್ಜಿದಾರನ ಶ್ರಮ ಹಾಗೂ ಸಮಯ ವ್ಯರ್ಥವಾಗುತ್ತದೆ. ತಾವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ಮೂರ್ನಾಲ್ಕು ಅರ್ಜಿಗಳಿಗೆ ಇದೇ ತರಹದ ಜಾಣತನದ ಉತ್ತರಗಳು ಬಂದಿವೆ ಎಂಬುದಾಗಿ ಕರ್ನಾಟಕ ಜನಹಿತ ವೇದಿಕೆ ಅಧ್ಯಕ್ಷ ಸಾಯಿದತ್ತ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

