ಕಚಡಾ ಕೆಚಪ್
ಈಗಿನ ಜನರೇಷನ್ಗೆ ಚಟ್ನಿ ಇಷ್ಟ ಆಗಲ್ಲ. ಸಾಸ್ ಕೊಟ್ರೆ ಬಾಟಲಿಯನ್ನೂ ನೆಕ್ಕುತ್ತಾರೆ. ಟೊಮೆಟೊ ಸಾಸ್ ಅಂತೆ, ಚಿಲ್ಲಿ ಸೊಯಾ ಸಾಸ್ ಅಂತೆ. ನಮ್ಮ ಅಡುಗೆ ಮನೆಗಳಲ್ಲೂ ಸಾಸ್ ಮೇನಿಯಾ ಶುರು ಆಗಿಬಿಟ್ಟಿದೆ. ಇಡ್ಲಿಗೂ ಸಾಸ್, ಉಪ್ಪಿಟ್ಟಿಗೂ ಸಾಸ್. ಮನೆಯ ಫ್ರಿಡ್ಜ್ಗಳಲ್ಲಿ ಟೊಮೆಟೊ, ಮೆಣಸು ತಪ್ಪಿದ್ರೂ ಅದರ ಸಾಸ್ ಮಾತ್ರ ಇದ್ದೇ ಇರುತ್ತೆ. ಹೊಟೇಲ್ಗಳಲ್ಲಿ, ಗೋಬಿ ಮಂಚೂರಿ, ಫ್ರೈಡ್ ರೈಸ್, ಕಬಾಬ್ ಮಾಡೋ ಪೆಟ್ಟಿಗೆ ಅಂಗಡಿಗಳಲ್ಲಂತೂ ಸಾಸ್ ಇಲ್ಲದೆ ವ್ಯಾಪಾರವೇ ಇಲ್ಲ. ಆದ್ರೆ ದುರಂತ ನೋಡಿ, ಈ ಸಾಸನ್ನ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಆದ್ರೆ ಯಾರಿಗೂ ಪುರುಸೊತ್ತಿಲ್ಲ. ಅದಕ್ಕಾಗಿ ರೆಡಿಮೇಡ್ ಸಾಸ್ಗಳಿಗೇ ಮೊರೆ ಹೋಗುತ್ತಾರೆ.
ಸಾಸ್ನ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ನಕಲಿ ಸಾಸ್ ಹಾವಳಿ ಹೆಚ್ಚಾಗಿದೆ. ಆಶ್ಚರ್ಯಕರ ಸಂಗತಿ ಅಂದ್ರೆ ಈಗ ಮಾರುಕಟ್ಟೆಯಲ್ಲಿ ರು. 20ಕ್ಕೂ 1 ಲೀ. ಸಾಸ್ ಸಿಗುತ್ತೆ. ಯಾವ ಸಾಸ್ ತೆಗೆದುಕೊಂಡರೂ ಇಪ್ಪತ್ತೇ ರುಪಾಯಿ. ಇದು ಹೇಗೆ ಸಾಧ್ಯ ಎಂದು ನೀವು ಪ್ರಶ್ನಿಸಬಹುದು. ಹೌದು.. ನಕಲಿ ದುನಿಯಾದಲ್ಲಿ ಎಲ್ಲವೂ ಸಾಧ್ಯ. ನಕಲಿ ಸಾಸ್ನಲ್ಲಿ ಟೊಮೆಟೋ, ಮೆಣಸು, ಸೋಯಾ ಕಾಳು ಬಳಸುವುದಿಲ್ಲ. ಬರೀ ರಾಸಾಯನಿಕ ಹಾಗೂ ಬಣ್ಣ ಬೆರೆಸಿ ಸಾಸ್ ತಯಾರಿಸಲಾಗುತ್ತದೆ. ನಕಲಿ ಸಾಸ್ಗೆ ಬಳಸು ವಸ್ತುಗಳು: ಜೋಳದ ಪುಡಿ, ಗೋಧಿ ಹಿಟ್ಟು, ಕಾಸ್ಟಿಕ್ ಸೋಡಾ, ಸೋಡಿಯಂ ಪುಡಿ ಮತ್ತು ಹಾನಿಕಾರಕ ಬಣ್ಣ.
ಅಶುದ್ಧ ತಯಾರಿ: ನಕಲಿ ಸಾಸ್ ಹೇಗೆ ತಯಾರಿಸುತ್ತಾರೆ ಎಂಬುದನ್ನು ಜನರ ಮುಂದಿಡಲು ರಹಸ್ಯ ಕಾರ್ಯಾಚರಣೆ ನಡೆಸಿದ ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿವಾಹಿನಿಯ ಕವರ್ಸ್ಟೋರಿ ತಂಡ ಮಾಗಡಿ ರಸ್ತೆಯಲ್ಲಿ ಅಣಬೆ ರೀತಿ ತಲೆಎತ್ತಿರುವ ನಕಲಿ ಸಾಸ್ ತಯಾರಿಕಾ ಘಟಕಗಳಿಗೆ ಲಗ್ಗೆ ಇಟ್ಟಿತು.
ನಮ್ಮ ತಂಡ ಅಲ್ಲಿ ಮೊದಲು ಭೇಟಿಯಿತ್ತಿದ್ದು ಸಾಂಘವಿ ಫುಡ್ಸ್ಗೆ. ದೂರದಿಂದ ನೋಡಲು ಅದು ಶೆಡ್ ತರಹ ಇದೆ. ಅದಕ್ಕೆ ಭಾರಿ ಭದ್ರತೆ ಬೇರೆ. ಪ್ರವೇಶಿಸುತ್ತಿದ್ದ ಹಾಗೆ ಸಿಸಿ ಕ್ಯಾಮರಾ ಸ್ವಾಗತಿಸುತ್ತೆ. ಗಡಿ ಕಾಯುವ ಯೋಧನಂತಿರುವ ಭದ್ರತಾ ಸಿಬ್ಬಂದಿ. ದೊಡ್ಡ ಗೇಟ್. ಒಂದೆರೆಡು ನಾಯಿ. ಇವೆಲ್ಲ ದಾಟಿ ಫ್ಯಾಕ್ಟರಿ ಪ್ರವೇಶಿಸಿದ ತಂಡಕ್ಕೆ ಭದ್ರತೆ ನೋಡಿ ಬಾಂಬ್, ಮಿಸೈಲ್ ಏನಾದರೂ ತಯಾರಿಸುತ್ತಿದ್ದಾರಾ ಎಂಬ ಅನುಮಾನ ಕಾಡಿದ್ದು ನಿಜ.
ಕಂಪನಿ ಮಾಲಿಕ ರಾಜು ಅವರನ್ನ ಭೇಟಿಯಾಗಿ ತಿಂಗಳಿಗೆ 500ಕೇಸ್ ಸಾಸ್ ಬೇಕು ಎಂದಾಗ ರು. 17ಕ್ಕೆ 1 ಲೀ. ಕೊಡುವುದಾಗಿ ಹೇಳಿದರು.
ಕೊಳೆತ ಟೊಮೆಟೋ, ಹುಳ ಬಿದ್ದ ಮೆಣಸು
ನಿಮ್ಮ ಸೂಪರ್ ಕ್ವಾಲಿಟಿ ಸಾಸ್ ಹೇಗೆ ತಯಾರಾಗುತ್ತೆ ಸ್ವಲ್ಪ ತೋರಿಸಿ ಎಂದಾಗ ಆರಂಭದಲ್ಲಿ ಬೇಡ ಎಂದ ಅವರು ಕೊನೆಗೆ ನಮ್ಮ ಒತ್ತಾಯಕ್ಕೆ ಮಣಿದು ಸಿಸಿ ಕ್ಯಾಮರಾಗಳಿಂದ ಸುತ್ತುವರಿದ ಫ್ಯಾಕ್ಟರಿ ಒಳಕ್ಕೆ ಕರೆದೊಯ್ದರು. ಅಲ್ಲಿದ್ದ ದೊಡ್ಡ ದೊಡ್ಡ ಪಾತ್ರೆ, ಬ್ಯಾರೆಲ್, ರಾಶಿ ರಾಶಿ ಬಾಟಲಿಗಳನ್ನ ನೋಡಿದ ತಂಡ ತಲೆ ಸುತ್ತಿ ಬೀಳುವುದೊಂದೇ ಬಾಕಿ. ಏಕೆಂದರೆ ಅಲ್ಲಿದ್ದದ್ದು ಕೊಳೆತ ಟೊಮೆಟೋ ರಾಶಿ, ಹುಳ ಬಿದ್ದ ಮೆಣಸು ಇತ್ಯಾದಿ.
ಇಲ್ಲಿ ಸಚ್ಛ ಅನ್ನೋ ಪದ ಸುಳಿಯದೇ ತಿಂಗಳುಗಳೇ ಕಳೆದಿವೆ. ಕೆಲಸ ಮಾಡುವವರು ಗ್ಲೌಸ್ ಹಾಕದೆ, ಕೊಳಕು ಕೈಯಲ್ಲಿ, ಬರೀ ಮೈಯಲ್ಲಿ ನಿರಂತರವಾಗಿ ದುಡೀತಿದ್ರು. ಈ ರೀತಿ ಕೊಳಕಾಗಿ ಮಾಡಿದ ಸಾಸ್ ಪ್ರತಿದಿನ 500ರಿಂದ 600 ಕೇಸ್ ತಯಾರಿಸಲಾಗುತ್ತಂತೆ. ಸಾಂಘವಿ ಫುಡ್ಸ್ ಬರೀ ಕರ್ನಾಟಕ ಮಂದಿಗೆ ಈ ವಿಷಯುಕ್ತ ಸಾಸ್ ತಿನ್ನಿಸ್ತಿಲ್ಲ. ಆಂಧ್ರ, ತಮಿಳುನಾಡಿನ ಮಂದಿಗೂ ಮಾರ್ತಾರಂತೆ. ಆತಂಕದ ವಿಚಾರ ಅಂದ್ರೆ ಅತ್ಯಂತ ಅಸಹ್ಯಕರ ರೀತಿಯಲ್ಲಿ ತಯಾರಾಗೋ ಸಾಂಘವಿ ಸಾಸ್ ಬೆಂಗಳೂರಿನಲ್ಲಿರೋ ಶೇಕಡಾ 70 ರಷ್ಟು ಹೊಟೇಲ್, ಪೆಟ್ಟಿಗೆ ಆಹಾರದಂಗಡಿಗೆ ಸರಬರಾಜಾಗುತ್ತಿದೆ. ನಾವು ಚಪ್ಪರಿಸಿ ಚಪ್ಪರಿಸಿ ತಿಂತೀವಿ.
ಇದಕ್ಕಿಂತಲೂ ಭಯಾನಕವಾಗಿ ಸಾಸ್ ತಯಾರಿಸೋ ಕಂಪೆನಿಗಳು ನಮ್ಮ ಬೆಂಗಳೂರಿನ ಮಾಗಡಿ ರಸ್ತೆಯಲ್ಲೇ ಇವೆ ಅನ್ನೋ ಮಾಹಿತಿ ಸಿಕ್ತು. ನಮ್ಮ ತಂಡ ಮೊದಲು ಸೀಗೇಹಳ್ಳಿಗೆ ತೆರಳಿತು. ಆ ಹಳ್ಳಿಯ ಮಧ್ಯದಲ್ಲಿ ರೋಜಾ ಫುಡ್ಸ್ ಅನ್ನೋ ಕಂಪೆನಿ ಈ ಹಲ್ಕಾ ದಂಧೆಯನ್ನ ರಾಜಾರೋಷವಾಗಿ ಮಾಡುತ್ತಿದೆ. ಅಲ್ಲಿಯೂ ದೊಡ್ಡ ದೊಡ್ಡ ಬ್ಯಾರಲ್ಗಳಲ್ಲಿ ಅಕ್ಕಚ್ಚು ತುಂಬಿಸಿಡುವ ಹಾಗೆ ಸಾಸ್ ರೆಡಿ ಮಾಡಿ ತುಂಬಿಸಿಟ್ಟಿದ್ರು.
ತಮಾಷೆ ಅಂದ್ರೆ ಈ ಕಂಪೆನಿಯಲ್ಲಿ ಎಷ್ಟೇ ಹುಡುಕಾಡಿದ್ರು ಒಂದೇ ಒಂದು ಟೊಮೆಟೊ ಆಗಲಿ, ಮೆಣಸು, ಸೋಯಾ ಕಾಳಾಗಲೀ ಸಿಗಲಿಲ್ಲ. ಬರೀ ರಾಸಾಯನಿಕ ಬಳಸಿ ಸಾಸ್ ತಯಾರಿಸಿ ಜನರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ. ಇಲ್ಲಿಂದ ಮಾಗಡಿ ಮುಖ್ಯ ರಸ್ತೆಯ ಹಿಂಭಾಗದಲ್ಲೇ ಇರೋ ಬೋರ್ಡ್ ಇಲ್ಲದ ಸಾಸ್ ತಯಾರಿಸೋ ಘಟಕಕ್ಕೆ ನುಗ್ಗಿದೆವು. ಅಲ್ಲಿ ನಾವು ಕಂಡ ದೃಶ್ಯ ನಮ್ಮ ಕಣ್ಣಿನಿಂದಲೇ ನಂಬಲು ಸಾಧ್ಯವಾಗಲಿಲ್ಲ.
ಅಷ್ಟು ಕೆಟ್ಟದಾಗಿ, ಕೊಳಕಾಗಿ ಅಲ್ಲಿ ಸಾಸ್ ತಯಾರಿಸುತ್ತಿದ್ದರು. ಈ ಕಂಪೆನಿಗಳಲ್ಲಿ ಸಂಗ್ರಹಿಸಿದ ಸಾಸನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕೊಟ್ಟಾಗ, ಇದು ತಿನ್ನಲು ಯೋಗ್ಯವೇ ಇಲ್ಲ ಅನ್ನೋ ವರದಿ ಕೊಟ್ರು. ಇಷ್ಟೊಂದು ರಾಜಾರೋಷವಾಗಿ ಇವರು ಈ ಕೆಟ್ಟ ದಂಧೆ ಮಾಡೋದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಾಣಿಸುತ್ತಿಲ್ವಾ? ಫುಡ್ ಇನ್ಸ್ಪೆಕ್ಟರ್ಗಳು ಏನು ಮಾಡುತ್ತಿದ್ದಾರೆ?
-ವಿಜಯಲಕ್ಷ್ಮಿ ಶಿಬರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

