ಬೌರಿಂಗ್ ಇನ್ಸ್ಟಿಟ್ಯೂಟ್ನಿಂದ ಸರ್ಕಾರಕ್ಕೆಕೋಟ್ಯಂತರ ವಂಚನೆ
ಬೆಂಗಳೂರು: ಸರ್ಕಾರದ ಜಾಗದಲ್ಲಿದ್ದರೂ ಅವ್ಯವಹಾರದ ತಾಣವಾಗಿರುವ ಬೌರಿಂಗ್ ಇನ್ಸ್ಟಿಟ್ಯೂಟ್, ಸರ್ಕಾರಕ್ಕೇ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಪೆಟ್ರೋಲ್ ಬಂಕ್ನ ಬಾಡಿಗೆಯಲ್ಲಿ ಶೇ.50ರಷ್ಟನ್ನು ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ಸರ್ಕಾರಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆಯನ್ನೇ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಇನ್ಸ್ಟಿಟ್ಯೂಟ್ ಉಲ್ಲಂಘಿಸಿದೆ. ಈ ಮೂಲಕ ಸರ್ಕಾರಕ್ಕೆ ಸಂದಾಯವಾಗಬೇಕಿರುವ ಕೋಟ್ಯಂತರ ರುಪಾಯಿಯನ್ನು ವಂಚಿಸಿದೆ.
ವಿಧಾನಸಭೆಯ ಸ್ಪೀಕರ್ ಬೋಪಯ್ಯ ಅವರು ರಚಿಸಿರುವ ರಾಜ್ಯದಲ್ಲಿರುವ ಕ್ಲಬ್ಗಳ ಕಾರ್ಯವೈಖರಿ ಕುರಿತ ಸಮಗ್ರ ಪರಿಶೀಲನೆ ಸದನ ಸಮಿತಿಯ ತಪಾಸಣೆ ಸಮಯದಲ್ಲಿ ಈ ವಂಚನೆ ಬಹಿರಂಗವಾಗಿದೆ. ಸರ್ಕಾರದಿಂದ 10.5 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದಿರುವ ಬೌರಿಂಗ್ ಇನ್ಸ್ಟಿಟ್ಯೂಟ್ ವರ್ಷಕ್ಕೆ ಕೇವಲ 200 ಶುಲ್ಕ ಪಾವತಿಸುತ್ತಿದೆ.
ತೀವ್ರ ತರಾಟೆ: ಆದರೆ, ಆಡಳಿತ ಮಂಡಳಿ ಅಕ್ರಮ ಕಟ್ಟಡ ನಿರ್ಮಾಣ, ಎಲ್ಲ ರೀತಿಯ ನಿಯಮ ಉಲ್ಲಂಘನೆ, ಅಕ್ರಮವಾಗಿ ಯಾರ್ಯಾರಿಗೋ ಸದಸ್ಯತ್ವ ನೀಡಲು ಲಕ್ಷಾಂತರ ವಸೂಲಿ ಸೇರಿದಂತೆ ಕೋಟ್ಯಂತರ ರುಪಾಯಿ ಅವ್ಯವಹಾರದಲ್ಲಿ ತೊಡಗಿದೆ. ಇದೆಲ್ಲವೂ ಸದನ ಸಮಿತಿ ಗಮನಕ್ಕೆ ಬಂದಿದ್ದು, ಆಡಳಿತ ಮಂಡಳಿ ಸದಸ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಶಾಸಕ ಹೇಮಚಂದ್ರ ಸಾಗರ್ ನೇತೃತ್ವದಲ್ಲಿ ಶಾಸಕರಾದ ಎ. ಮಂಜು, ರವಿಸುಬ್ರಹ್ಮಣ್ಯ, ಎನ್.ಎ. ಹ್ಯಾರೀಸ್ ಸೇರಿದಂತೆ ವಿಧಾನಸಭೆ ಕಾರ್ಯಾಲಯದ ಅಧಿಕಾರಿಗಳ ಸದನ ಸಮಿತಿ ಸದಸ್ಯರು ಈ ತಪಾಸಣೆಯಲ್ಲಿ ಭಾಗಿಯಾಗಿದ್ದರು.
ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಸರ್ಕಾರದಿಂದ ಗುತ್ತಿಗೆ ಪಡೆದಿರುವ ಜಾಗದಲ್ಲಿ ಸ್ವಲ್ಪ ಜಾಗವನ್ನು ಪೆಟ್ರೋಲ್ ಬಂಕ್ಗೆ ನೀಡಲು ಸರ್ಕಾರದಿಂದ ಅನುಮತಿ ಪಡೆದಿದ್ದಾರೆ.
ಇದರ ಕರಾರಿನಂತೆ ಪೆಟ್ರೋಲ್ ಬಂಕ್ನಿಂದ ಮಾಸಿಕವಾಗಿ ಬರುವ 2.5 ಲಕ್ಷ ಬಾಡಿಗೆಯಲ್ಲಿ ಶೇ.50ರಷ್ಟನ್ನು ಸರ್ಕಾರಕ್ಕೆ ಪಾವತಿಸಬೇಕು. ಆದರೆ, ಐದಾರು ವರ್ಷದಿಂದ ಒಂದು ಪೈಸೆಯನ್ನೂ ಸರ್ಕಾರಕ್ಕೆ ಪಾವತಿಸಿಲ್ಲ. ಅಲ್ಲದೆ, ಕೇವಲ 200 ರುಪಾಯಿ ವಾರ್ಷಿಕ ಶುಲ್ಕ ನೀಡಿ ಕೋಟ್ಯಂತರ ರುಪಾಯಿ ಆದಾಯವನ್ನು ಬೌರಿಂಗ್ ಇನ್ಸ್ಟಿಟ್ಯೂಟ್ನ ಆಡಳಿತ ಮಂಡಳಿ ಅನುಭವಿಸುತ್ತಿದೆ ಎಂದು ಸದನ ಸಮಿತಿ ಸದಸ್ಯ, ಶಾಸಕ ರವಿಸುಬ್ರಹ್ಮಣ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಈ ಬೌರಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಹತ್ತಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಯಾವುದೇ ರೀತಿಯ ನಕ್ಷೆ ಮಂಜೂರಾಗಿಲ್ಲ. ಇದರಿಂದ ಸಾಕಷ್ಟು ತೆರಿಗೆ ಹಣವನ್ನೂ ವಂಚಿಸಲಾಗಿದೆ. ಅಲ್ಲದೆ, ಗುತ್ತಿಗೆ ಪಡೆದಿರುವ ಭೂಮಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ನವೀಕರಣ ಮಾಡಬೇಕು. ಅದನ್ನೂ ಮಾಡದೆ, ಗುತ್ತಿಗೆ ಕರಾರನ್ನು ಉಲ್ಲಂಘಿಸಲಾಗಿದೆ. ಬೌರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ನಡೆಯುತ್ತಿರುವ ಹಲವಾರು ಚಟುವಟಿಕೆಗಳಿಗೆ ಸರ್ಕಾರದಿಂದ ಅನುಮತಿಯನ್ನೇ ಪಡೆದಿಲ್ಲ.
ಬೌರಿಂಗ್ ಇನ್ಸ್ಟಿಟ್ಯೂಟ್ಗೆ ಎಲ್ಲಿಂದಲೋ ಜನರನ್ನು ಕರೆತಂದು ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರುಪಾಯಿ ವಸೂಲಿ ಮಾಡಲಾಗುತ್ತಿದೆ. 3700 ಸದಸ್ಯರು, 1750 ಸಹ ಸದಸ್ಯರಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರೆಲ್ಲ ಇಲ್ಲಿಯವರಲ್ಲ. ಅಲ್ಲದೆ, ಡ್ರೆಸ್ಕೋಡ್ ಎಂದು ಸದಸ್ಯರೆಲ್ಲರನ್ನೂ ಪೀಡಿಸಲಾಗುತ್ತಿದೆ. ನಾವು ಕೇಳಿದ ಯಾವುದಕ್ಕೂ ದಾಖಲೆ ತೋರಿಲ್ಲ. ಹೀಗಾಗಿ, ಎಚ್ಚರಿಕೆ ನೀಡಿದ್ದೇವೆ. ಕೆಲವೇ ದಿನದಲ್ಲಿ ಮತ್ತೊಮ್ಮೆ ಪರಿಶೀಲನೆಗೆ ಬರುತ್ತೇವೆ. ಆಗ ಎಲ್ಲ ದಾಖಲೆಗಳನ್ನು ನೀಡಬೇಕು ಎಂದು ತಾಕೀತುಪಡಿಸಿದ್ದೇವೆ ಎಂದು ಶಾಸಕ ರವಿಸುಬ್ರಹ್ಮಣ್ಯ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

