ಶುಲ್ಕರಹಿತ ಕರೆ ಸೇವೆ 'ಉದ್ಯೋಗಸಿರಿ'ಗೆ ಚಾಲನೆ
ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗಗಳ ಹಾಗೂ ಉದ್ಯೋಗದಾತರಿಗೆ ಉದ್ಯೋಗಾರ್ಥಿಗಳ ಮಾಹಿತಿಯನ್ನು ಶುಲ್ಕರಹಿತ ಕರೆಯ ಮೂಲಕ ನೀಡುವ ವಿಶಿಷ್ಠ ಸೇವೆ 'ಉದ್ಯೋಗಸಿರಿ'ಗೆ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು ಶುಕ್ರವಾರ ನಗರದಲ್ಲಿ ಚಾಲನೆ ನೀಡಿದರು.
'ಉದ್ಯೋಗಸಿರಿ' ಮೂಲಕ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಬಹುದು.
ಜತೆಗೆ, ಕಾರ್ಮಿಕರ ಕಲ್ಯಾಣ ಮಂಡಳಿಯ ಧ್ವನಿ ಆಧರಿತ 'ನಿರ್ಮಾಣ ಕಾರ್ಮಿಕರ ಕಲ್ಯಾಣ ಮಾಹಿತಿ ಕೇಂದ್ರ'ಕ್ಕೂ ಅವರು ಇದೇ ವೇಳೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಬಚ್ಚೇಗೌಡ ಅವರು ರಾಜ್ಯದ ಎಲ್ಲ ಜಿಲ್ಲಾ ಉದ್ಯೋಗ ತರಬೇತಿ ಕೇಂದ್ರಗಳನ್ನು 2013- 14ನೇ ಸಾಲಿನ ಅಂತ್ಯದೊಳಗೆ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು, ಬಿಜಾಪುರ, ಕೋಲಾರ, ಚಾಮರಾಜನಗರ, ಹುಬ್ಬಳ್ಳಿ, ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳ ಉದ್ಯೋಗ ತರಬೇತಿ ಕೇಂದ್ರಗಳನ್ನು ಈಗಾಗಲೇ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಗುಲ್ಬರ್ಗ ಕೇಂದ್ರ ಸದ್ಯದಲ್ಲೇ ಕಾರ್ಯಾರಂಭಿಸಲಿದೆ.
ಚಿತ್ರದುರ್ಗ, ಶಿವಮೊಗ್ಗ, ರಾಮನಗರ, ಹಾವೇರಿ, ಬಾಗಲಕೋಟೆ, ಕೊಪ್ಪಳ ಕೇಂದ್ರಗಳು ತಿಂಗಳೊಳಗೆ ಪರಿವರ್ತನೆ ಆಗಲಿದ್ದು, ಉಳಿದ ಎಲ್ಲ ಜಿಲ್ಲೆಗಳ ಉದ್ಯೋಗ ತರಬೇತಿ ಕೇಂದ್ರಗಳನ್ನು 2013-14ನೇ ಸಾಲಿನ ಅಂತ್ಯದೊಳಗೆ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ, ಕೆವಿಟಿಎಸ್ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಂಕಜ್ಕುಮಾರ್ ಪಾಂಡೆ, ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಸಾಲಿಯಾನ್, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಟಿ.ಶ್ರೀನಿವಾಸ್ ಹಾಜರಿದ್ದರು.
ಉದ್ಯೋಗಸಿರಿಯಲ್ಲಿ ವಿವರ ದಾಖಲಿಸಿ
ಉದ್ಯೋಗಾರ್ಥಿ ಹಾಗೂ ಉದ್ಯೋಗದಾತರು ದೂರವಾಣಿ ಮೂಲಕ ಶುಲ್ಕರಹಿತ ಸಂಖ್ಯೆ 1800-425-8040ಕರೆ ಮಾಡಿ ತಮ್ಮ ವಿವರಗಳನ್ನು ಹೇಳಿದಲ್ಲಿ ಅದು ಉದ್ಯೋಗಸಿರಿಯಲ್ಲಿ ದಾಖಲಾಗುತ್ತದೆ. ಆ ಮೂಲಕ ಮಾನವಶಕ್ತಿಯ ಬೇಡಿಕೆ ಮತ್ತು ಪೂರೈಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ಯೋಗಸಿರಿ ನೆರವಾಗಲಿದೆ. ಅದೇ ರೀತಿ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಾಹಿತಿ ಕೇಂದ್ರದ ಶುಲ್ಕರಹಿತ ಸಂಖ್ಯೆ 1800-425-2838ಗೆ ಕರೆ ಮಾಡುವ ಮೂಲಕ ನಿರ್ಮಾಣ ಹಾಗೂ ಇತರೆ ಕಾರ್ಮಿಕರು ಮದುವೆ, ವಿದ್ಯಾಭ್ಯಾಸ, ಚಿಕಿತ್ಸೆ ಕುರಿತ ಹಣಕಾಸು ಸೌಲಭ್ಯ ಜತೆಗೆ ಪಿಂಚಣಿ, ಗೃಹನಿರ್ಮಾಣ ಹಾಗೂ ಇತರ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

