ಈಜಲು ತೆರಳಿದ್ದ ಯುವಕ ಸಾವು
ರಾಮನಗರ: ಮಾಗಡಿಯ ಮಂಚನಬೆಲೆ ಜಲಾಶಯಕ್ಕೆ ಈಜಲು ತೆರಳಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಜಾವಗಲ್ನವರಾದ ಕಿರಣ್ (25) ಮೃತ ಯುವಕ. ನಾಲ್ವರು ಸ್ನೇಹಿತರ ಜತೆ ಪಿಕ್ ನಿಕ್ಗೆಂದು ಮಂಚನಬೆಲೆ ಜಲಾಶಯಕ್ಕೆ ಬಂದಿದ್ದ ಅವರು ಈಜಲು ತೆರಳಿದ್ದಾರೆ. ಆಳ ನೀರಿನಲ್ಲಿ ಬಹುದೂರ ಸಾಗಿ ವಾಪಸ್ ಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದು ಮರಣೋತ್ತರ ಪರಿಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಕಳುಹಿಸಿದರು. ಈ ಸಂಬಂಧ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿನ್ನ ಅಪಹರಿಸಿ ಸಿಕ್ಕಿಬಿದ್ದರು
ಚಿಕ್ಕಬಳ್ಳಾಪುರ: ಕೆರೆಗೆ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯೊಬ್ಬರನ್ನು ಹೆದರಿಸಿ ಆಕೆಯ ಮೈ ಮೇಲಿದ್ದ ಚಿನ್ನಾಭರಣ ಅಪಹರಿಸಿದ ದುಷ್ಕರ್ಮಿಗಳು, ನಂತರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ತಾಲೂಕಿನ ಮಾರಗಾನಹಳ್ಳಿ ಸಮೀಪ ಭಾನುವಾರ ಸಂಭವಿಸಿದೆ.
ಮಾರಗಾನಹಳ್ಳಿಯ ಸುಜಾತಮ್ಮ ಎಂಬವರು ತಮ್ಮ ಮಗಳ ಜತೆ ಸಮೀಪದ ಕೆರೆಗೆ ಬಟ್ಟೆ ಒಗೆಯಲು ಹೋಗಿದ್ದರು. ಆ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಬೆದರಿಸಿದ್ದಾರೆ. ಅವರ ಮೈಮೇಲೆ ಇದ್ದ ಒಡವೆಗಳನ್ನು ನೀಡುವಂತೆ ಪೀಡಿಸಿದರು. ಇದರಿಂದ ಭಯಭೀತರಾದ ಸುಜಾತಮ್ಮ ಮಾಂಗಲ್ಯ , ಕಿವಿ ಓಲೆ, ಉಂಗುರ ಸೇರಿದಂತೆ ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಕೊಟ್ಟು ಬಿಟ್ಟಿದ್ದಾರೆ. ಕೈಗೆ ಒಡವೆ ಸಿಕ್ಕಿತ್ತು ಎಂದುಕೊಂಡು ದುಷ್ಕರ್ಮಿಗಳು ಬೈಕಿನಲ್ಲಿ ಪರಾರಿಯಾದರು. ತಕ್ಷಣ ಸುಜಾತಮ್ಮ ಸಂಬಂಧಿಕರ ಮೂಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಅಶೋಕನ ಜತೆಗೆ ಕಳ್ಳತನ ಮಾಡಿದ ಶಂಕರ್ ಎಂಬಾತನನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಿನ್ನಾಭರಣಗಳನ್ನು ಕಳ್ಳರಿಂದ ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸರಗಳ್ಳನ ಬಂಧನ: ಇಬ್ಬರು ಪರಾರಿ
ಗೌರಿಬಿದನೂರು: ಚಿಕ್ಕಬಳ್ಳಾಪುರದಲ್ಲಿ ಚಿನ್ನದ ಸರ ಕದ್ದು ಗೌರಿಬಿದನೂರು ಕಡೆಗೆ ಪರಾರಿಯಾಗುತ್ತಿದ್ದ ಮೂವರನ್ನು ಬೆನ್ನಟ್ಟಿದ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಅಶೋಕ್ (25) ಬಂಧಿತ ಆರೋಪಿ. ದಾಳಿ ವೇಳೆ ವಿದ್ಯುತ್ ಕಂಬ ಹತ್ತಿ ಕುಳಿತಿದ್ದ ಆರೋಪಿಯನ್ನು ಗೌರಿಬಿದನೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು. ಚಿಕ್ಕಬಳ್ಳಾಪುರದಲ್ಲಿ ಚಿನ್ನದ ಸರಕದ್ದು ಹಿರೋಹೊಂಡಾ ಬೈಕಿನಲ್ಲಿ ಮೂವರು ವ್ಯಕ್ತಿಗಳು 1 ಬ್ಯಾಗ್ ಹಾಕಿಕೊಂಡು ಗೌರಿಬಿದನೂರು ಕಡೆಗೆ ಬರುತ್ತಿದ್ದ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸರು ಮಾಹಿತಿ ನೀಡಿದ್ದರು. ಇಬ್ಬರು ನಾಪತ್ತೆಯಾಗಿದ್ದಾರೆ.
ಗುರುರಾಜ್ ನೂತನ ಅಧ್ಯಕ್ಷ
ಕನಕಪುರ: ಕರ್ನಾಟಕ ಪ್ರದೇಶ ಬೋವಿ ಕ್ಷೇಮಾಭ್ಯುದಯ ಸೇವಾ ಸಮಿತಿಯ ಕನಕಪುರ ತಾಲೂಕು ಘಟಕದ ರಚನೆ ರಾಜ್ಯಾಧ್ಯಕ್ಷ ಎಸ್.ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿ ಶ್ರೀನಿವಾಸ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಂತರಾಜು, ರಾಜ್ಯ ಕೋಶಾಧ್ಯಕ್ಷ ಉಮೇಶ್ ಪಾಲ್ಗೊಂಡಿದ್ದರು. ಕನಕಪುರ ತಾಲೂಕು ಬೋವಿಸಂಘದ ನೂತನ ಅಧ್ಯಕ್ಷರಾಗಿ ನಿಡಗಲ್ಲು ಗುರುರಾಜ್, ಗೌರವಾಧ್ಯಕ್ಷರಾಗಿ ಬನ್ನಿಕುಪ್ಪೆ ದಾಸಪ್ಪ, ತಾಲೂಕು ಉಸ್ತುವಾರಿಯಾಗಿ ಗೋವಿಂದರಾಜು, ಕಾರ್ಯಾಧ್ಯಕ್ಷರಾಗಿ ಭೋಜರಾಜ್, ಉಪಾಧ್ಯಕ್ಷರಾಗಿ ವರದರಾಜು, ಕರಿಯಪ್ಪ, ರಾಜಣ್ಣ, ಮರಿಯಮ್ಮ, ಮಂಜು, ಪ್ರಧಾನಕಾರ್ಯದರ್ಶಿಯಾಗಿ ವೆಂಕಟಾಚಲ, ಖಜಾಂಚಿಯಾಗಿ ಕನಕರಾಜು, ಸಂಘಟನಾ ಕಾರ್ಯದರ್ಶಿಯಾಗಿ ಆರ್.ಶ್ರೀನಿವಾಸ್,ಶ್ರೀನಿವಾಸ, ರಾಘವೇಂದ್ರ, ನವೀನ್, ಶಿವರಾಜು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

