ಬೆಂಗಳೂರು: ಅಂಗವಿಕಲ ಸೀಟುಗಳಲ್ಲಿ ಸಕಲಾಂಗಗಳೂ ಸರಿ ಇರುವ ಪ್ರಯಾಣಿಕರು..
ಇದು ಸಿಟಿ ರೇಲ್ವೆ ಕಂಪಾರ್ಟ್‌ಮೆಂಟ್‌ಗಳಲ್ಲಿ ಕಂಡುಬರುತ್ತಿರುವ ದೃಶ್ಯ. ಕಡಿಮೆ ದರದಲ್ಲಿ ಉತ್ತಮ ಪ್ರಯಾಣಕ್ಕೆ ಹೆಸರಾಗಿರುವ ರೈಲು ಪ್ರಯಾಣಕ್ಕೀಗ ಜನಜಂಗುಳಿ ಮುಗಿಬೀಳುತ್ತಿದ್ದಾರೆ. ಮಿತಿಮೀರಿದ ಜನಸಾಗರ ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದೆ. ಆದರೆ, ಸುರಕ್ಷತೆ ಮಾತ್ರ ಎಷ್ಟರ ಮಟ್ಟಿಗೆ ಎಂಬುದು ಅವರವರಿಗೆ ಬಿಟ್ಟ ವಿಷಯ.
ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರೇ ಹೆಚ್ಚಾಗಿ ಪ್ರಯಾಣಿಸುವ ಸಾಮಾನ್ಯ ಬೋಗಿಗಳುಳ್ಳ ರೈಲಿನಲ್ಲಿ ಅಂಗವಿಕಲ ಮತ್ತು ವಯೋವೃದ್ಧರಿಗೆ ಸೀಮಿತ ಸೀಟುಗಳನ್ನು ಮೀಸಲಿಡಲಾಗಿದೆ. ಅದಕ್ಕೆ ತಕ್ಕಂತೆ ಟಿಕೆಟ್‌ಗಳನ್ನೂ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ಸಾಮಾನ್ಯ ದರ್ಜೆ ರೈಲು ಪ್ರಯಾಣದರ ಕಡಿಮೆ ಇರುವುದರಿಂದ ಈ ಬೋಗಿಗಳಲ್ಲಿ ಜನ ಮಿತಿಮೀರಿ ತುಂಬಿರುತ್ತಾರೆ. ವೃದ್ಧರು, ಅಂಗವಿಕಲರು ಈ ಜನಜಂಗುಳಿ ಮಧ್ಯೆ ನುಗ್ಗಿ ಬರುವುದರೊಳಗೆ ಅವರಿಗಾಗಿ ಮೀಸಲಿಟ್ಟ ಆಸನಗಳನ್ನು ಇತರರು ಆಕ್ರಮಿಸಿಕೊಂಡಿರುತ್ತಾರೆ.
ಇತರೆ ಸಾರಿಗೆ ವ್ಯವಸ್ಥೆಗೆ ಹೋಲಿಕೆ ಮಾಡಿದಲ್ಲಿ ಕಡಿಮೆ ದರದ ಪ್ರಯಾಣಕ್ಕೆ ರೈಲು ಪ್ರಯಾಣ ಹೆಸರುವಾಸಿ. ಹೀಗಾಗಿ ಜನರೂ ಅದನ್ನೇ ಆರಿಸಿಕೊಳ್ಳುತ್ತಾರೆ. ಆದರೆ, ಇಂತಹ ಜನಸಂದಣಿ ಇರುವ ಬೋಗಿಗಳಲ್ಲಿ ಸೀಮಿತ ಸೀಟುಗಳು ಅದರ ಅಗತ್ಯವಿರುವವರಿಗೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬುದಷ್ಟೆ.
ಈ ಸೀಟುಗಳ ಮೇಲೆ ಅಂಗವಿಕಲರು, ವೃದ್ಧರಿಗೆ ಎಂದು ಬರೆದಿದ್ದರೂ ಅದರಲ್ಲಿ ಕುಳಿತವರಿಗೂ ಆ ಫಲಕಗಳಿಗೂ ಹೋಲಿಕೆಯಾಗುವುದೇ ಇಲ್ಲ. ಹೋಲಿಕೆಯಾಗುವವರು ಪಕ್ಕದಲ್ಲಿ ನಿಂತು ಪ್ರಯಾಣಿಸುತ್ತಿರುತ್ತಾರೆ.
ಸಾಮಾನ್ಯವಾಗಿ ಇಂತಹ ಸಾಮಾನ್ಯ ಬೋಗಿಗಳಲ್ಲಿ ರೇಲ್ವೆ ಸಿಬ್ಬಂದಿಯಾಗಲೀ, ಪೊಲೀಸರಾಗಲೀ ಇರುವುದೇ ಇಲ್ಲ. ಹೀಗಾಗಿ ಇದು ಒಂದು ದಿನದ ಸಮಸ್ಯೆಯಾಗದೆ ದಿನನಿತ್ಯದ ಗೋಳಾಗಿದೆ.
ಎಲ್ಲೆಲ್ಲಿ?: ನಗರ ವ್ಯಾಪ್ತಿಯಲ್ಲಿ ಹಾದುಹೋಗುವ ಜಂಕ್ಷನ್‌ಗಳಲ್ಲಿ ಹೆಚ್ಚುವರಿಯಾಗಿ ಹತ್ತಿಕೊಳ್ಳುವ ಪ್ರಯಾಣಿಕರು ಬೈಯ್ಯಪ್ಪನಹಳ್ಳಿ, ಬಾಣಸವಾಡಿ, ಸಿಟಿ ಜಂಕ್ಷನ್, ಕೆಂಗೇರಿ, ಕೋಡಿಹಳ್ಳಿ, ಕೃಷ್ಣರಾಜಪುರ, ಮಲ್ಲೇಶ್ವರಂ, ನಾಯಂಡಹಳ್ಳಿ, ವೈಟ್‌ಫೀಲ್ಡ್, ಯಲಹಂಕ, ಯಶವಂತಪುರ ಸುತ್ತ- ಮುತ್ತಲ ಜಂಕ್ಷನ್‌ಗಳಲ್ಲಿ ಹಾದು ಹೋಗುವ ರೈಲುಗಳಲ್ಲಿ ಭೋಗಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ಎಲ್ಲಾ ಬೋಗಿಗಳು ಭರ್ತಿಯಾಗಿರುತ್ತವೆ. ಆದರೂ ಬಂದವರಿಗೆ ತೊಂದರೆಯಾಗಬಾರದು ಎಂದು ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆ. ಹೀಗಾಗಿ ಭರ್ತಿಯಾಗಿರುವ ರೈಲುಗಳಲ್ಲಿ ಜನರ ತಳ್ಳಾಟದ ಮಧ್ಯೆ ವೃದ್ಧರು, ಅಂಗವಿಕಲರು ನಿಂತೇ ಪ್ರಯಾಣಿಸಬೇಕಾಗುತ್ತದೆ.
ಅಗತ್ಯವಿದ್ದವರಿಗೆ ಸೋಲ್ಡ್ ಔಟ್: ಇದೊಂದೇ ಅಲ್ಲ, ವಯೋವೃದ್ಧರು, ಅಂಗವಿಕಲರ ಹೆಸರಿನಲ್ಲಿ ಸಾಮಾನ್ಯ ದರ್ಜೆ ರೈಲು ಟಿಕೆಟ್‌ಗಳು ಬ್ಲಾಕ್‌ನಲ್ಲೂ ಮಾರಾಟವಾಗುತ್ತಿವೆ. ಬಿಸಿಲ ತಾಪಕ್ಕೆ ಹೆದರುತ್ತಿರುವ ಜನ ರೈಲು ಪ್ರಯಾಣದ ಮೊರೆ ಹೋಗುತ್ತಿದ್ದಾರೆ. ಆದರೆ, ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಕೆಲ ಮಧ್ಯವರ್ತಿಗಳು, ಇವುಗಳನ್ನೇ ತಮ್ಮ ವ್ಯಾಪಾರದ ಬಂಡವಾಳವಾಗಿರಿಸಿಕೊಂಡಿದ್ದಾರೆ. ಮೊದಲೇ ಇವರ ಹೆಸರಿನಲ್ಲಿ ಕಡಿಮೆ ದರಕ್ಕೆ ಟಿಕೆಟ್ ಖರೀದಿಸಿ ಇಟ್ಟುಕೊಳ್ಳುವ ಇವರು ಕೌಂಟರ್‌ಗಳಲ್ಲಿ ಟಿಕೆಟ್ ಸಿಗದೇ ಓಡಾಡುವವರನ್ನು ಗಮನಿಸುತ್ತಾರೆ. ಅಂತಹವರಿಗೆ ಕಡಿಮೆ ದರದ ಟಿಕೆಟ್‌ಗಳನ್ನು ಮೂಲ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಕೌಂಟರ್‌ಗಳ ಸಿಬ್ಬಂದಿಗೆ ಇದು ಗೊತ್ತಿದ್ದರೂ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ.
ಅಂದರೆ, ಅಂಗವಿಕಲರು, ವಯೋವೃದ್ಧರ ಹೆಸರಿನಲ್ಲಿ ಪಡೆದ ರಿಯಾಯಿತಿ ದರದ ಟಿಕೆಟ್‌ಗಳನ್ನು ಸಾಮಾನ್ಯ ಜನರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಇದನ್ನು ತಪಾಸಣೆ ಮಾಡುವಲ್ಲಿ ರೇಲ್ವೆ ಸಿಬ್ಬಂದಿ ವಿಫಲವಾಗಿರುವುದರಿಂದ ಇಂತಹ ಪ್ರಕರಣಗಳು ದೊಡ್ಡ ದಂಧೆಯಾಗಿ ಬದಲಾವಣೆಯಾಗಿದೆ.
- ಭಾಗ್ಯಗೌಡ