ಕ.ಪ್ರ.ವಾರ್ತೆ, ಬೆಂಗಳೂರು, ಅ. 23-
ಹೈಕೋರ್ಟ್ಗೆ ಬುಧವಾರ ವಿಶೇಷ ಅತಿಥಿಯ ಆಗಮನವಾಗಿತ್ತು. ಆದರೆ, ಗಾಯಗೊಂಡ ಪರಿಸ್ಥಿತಿಯಲ್ಲಿ.
ಹೌದು...ಹೈಕೋರ್ಟ್ ಆವರಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಗೂಬೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಅಲ್ಲಿನ ಸಿಬ್ಬಂದಿಯ ಕೈಸೇರಿತ್ತು. ಗಾಯಗೊಂಡು ಹಾರಲಾಗದೆ ಕುಳಿತಿದ್ದ ಗೂಬೆಯನ್ನು ಎರಡು ಕಾಗೆಗಳು ಕುಕ್ಕಿ ಹಿಂಸಿಸುತ್ತಿದ್ದನ್ನು ಕಂಡ ಸಿಬ್ಬಂದಿ ಅದನ್ನು ರಕ್ಷಿಸಿ ಪ್ರವೇಶದ್ವಾರವೊಂದರ ಭದ್ರತಾ ಕೊಠಡಿಯಲ್ಲಿ ಬಿಟ್ಟಿದ್ದರು. ಇದರಿಂದ ಕುತೂಹಲಗೊಂಡ ವಕೀಲರು, ಸಿಬ್ಬಂದಿ ದಿನವಿಡೀ ಆಗಮಿಸಿ ಅನಿರೀಕ್ಷಿತ ಅತಿಥಿಯನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ನಂತರ ಸಂಜೆ 4ರ ಸುಮಾರಿಗೆ ಆಗಮಿಸಿದ ಪೀಪಲ್ ಆಫ್ ಅನಿಮಲ್ ಸಂಘಟನೆಯ ಕಾರ್ಯಕರ್ತರು ಗೂಬೆಯನ್ನು ಸಂರಕ್ಷಿಸಿ ಕರೆದೊಯ್ದರು. ಅವರ ಪ್ರಕಾರ, ಗೂಬೆಯ ರೆಕ್ಕೆಗೆ ಗಾಳಿಪಟದ ದಾರ ಸಿಕ್ಕಿ ಹಾಕಿಕೊಂಡ ಹಿನ್ನೆಲೆಯಲ್ಲಿ ಅದು ಗಾಯಗೊಂಡು ಹಾರದ ಪರಿಸ್ಥಿತಿ ತಲುಪಿತ್ತು.