ರಾಂಪುರ ಗ್ರಾಪಂಗೆ ಇಬ್ಬರು ಶಾಸಕರು...!
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಏ. 4
ಗ್ರಾಮ ಪಂಚಾಯ್ತಿ ಒಂದೇ ಆದರೂ ವಿಧಾನಸಭೆ ಕ್ಷೇತ್ರ ಮಾತ್ರ ಎರಡು. ಈ ಪಂಚಾಯ್ತಿಗೆ ಇಬ್ಬರು ಶಾಸಕರನ್ನು ಕಾಣುವ ಭಾಗ್ಯ ಒದಗಿದೆ. ಆದರೆ ಅಭಿವೃದ್ಧಿ ಕೆಲಸಗಳು ಮಾತ್ರ ಗಗನ ಕುಸುಮ. ಇಬ್ಬರು ಶಾಸಕರು, ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿದ್ದರೂ, ಹೇಳಿಕೊಳ್ಳುವ ಅಭಿವೃದ್ಧಿಯಾಗಿಲ್ಲ. ಚುನಾವಣೆ ಸಂದರ್ಭದಲ್ಲೂ ಅಧಿಕಾರಿಗಳಿಗೆ ಇದು ಗೊಂದಲದ ಗೂಡು.
ಇಂತಹ ಅಚ್ಚರಿಗೆ ಕಾರಣವಾಗಿರುವುದು ಕೂಡ್ಲಿಗಿ ತಾಲೂಕಿನ ರಾಂಪುರ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿ ವ್ಯಾಪ್ತಿಗೆ ರಾಂಪುರ, ಚಿರಿಬಿ, ಗಂಗಮ್ಮನಹಳ್ಳಿ, ಜಾಗಟಗೆರೆ ಹಾಗೂ ಸುಂಕದಕಲ್ಲು ಎಂಬ 5 ಗ್ರಾಮಗಳು ಒಳಪಡುತ್ತವೆ. ಈ ಐದು ಹಳ್ಳಿಗಳಲ್ಲಿ ಸುಂಕದಕಲ್ಲು ಮಾತ್ರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ರಾಂಪುರ ಕೇಂದ್ರ ಸ್ಥಾನ ಸೇರಿದಂತೆ 4 ಹಳ್ಳಿಗಳು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತವೆ. ಹೀಗಾಗಿಯೆ ಈ ಗ್ರಾಮ ಪಂಚಾಯ್ತಿಯಲ್ಲಿ ಯಾವುದೆ ಕಾರ್ಯಕ್ರಮಗಳು ನಡೆದರೂ ಇಬ್ಬರು ಶಾಸಕರ ಹೆಸರನ್ನು ಅಧಿಕಾರಿಗಳು ಮರೆಯುವಂತಿಲ್ಲ. ನಾಲ್ಕು ಹಳ್ಳಿಗಳಲ್ಲಿ ಕಾಮಗಾರಿ ಉದ್ಘಾಟನೆಗೆ ಹಗರಿಬೊಮ್ಮನಹಳ್ಳಿ ಶಾಸಕರೆ ಆಗಬೇಕು. ಸುಂಕದಕಲ್ಲು ಗ್ರಾಮದ ಕಾಮಗಾರಿಗೆ ಮಾತ್ರ ಕೂಡ್ಲಿಗಿ ಶಾಸಕರು ಆಗಮಿಸಬೇಕು.
ಪುನರ್ ವಿಂಗಡಣೆಯಿಂದ ಅವಾಂತರ
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಮೀಸಲು ಕ್ಷೇತ್ರ ರಚನೆಯಾದಾಗ ಈ ಅವಾಂತರವಾಗಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಎಸ್ಟಿಗೆ ಮೀಸಲಾಯಿತು. ತಾಲೂಕಿನಲ್ಲಿದ್ದ ಕೊಟ್ಟೂರು ವಿಧಾನಸಭಾ ಕ್ಷೇತ್ರ ನೂತನ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಸುತ್ತಮುತ್ತಲ 5 ಗ್ರಾಮ ಪಂಚಾಯ್ತಿಗಳು ವಿಲೀನವಾದವು. ಈ ಐದು ಗ್ರಾಮ ಪಂಚಾಯ್ತಿಗಳಲ್ಲಿ ರಾಂಪುರ ಗ್ರಾಪಂ ಒಂದು. ಈ ಪಂಚಾಯ್ತಿ ಪೂರ್ಣ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರಿದ್ದರೆ ಯಾವುದೆ ಗೊಂದಲವಿರುತ್ತಿರಲಿಲ್ಲ. ಆದರೆ ಈ ಪಂಚಾಯ್ತಿ ವ್ಯಾಪ್ತಿಯ ಸುಂಕದಕಲ್ಲು ಗ್ರಾಮ ಮಾತ್ರ ಕೂಡ್ಲಿಗಿ ಕ್ಷೇತ್ರಕ್ಕೆ ಸೇರ್ಪಡೆ ಮಾಡಿರುವುದು ಅಚ್ಚರಿ ಮೂಡಿಸಿದೆ. ರಾಂಪುರ, ಚಿರಿಬಿ, ಗಂಗಮ್ಮನಹಳ್ಳಿ, ಜಾಗಟಗೆರೆ ಜನತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದರೆ, ಇದೇ ಗ್ರಾಪಂಗೆ ಸೇರಿದೆ ಸುಂಕದಕಲ್ಲು ಗ್ರಾಮದ ಜನತೆ ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಬೇಕಿದೆ.
ಸುಂಕದಕಲ್ಲು ಗ್ರಾಮಸ್ಥರ ಸಂಕಟ
ರಾಂಪುರ ಗ್ರಾಪಂನ ಬಹುತೇಕ ಹಳ್ಳಿಗಳು ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರಿಂದ ಅಲ್ಲಿನ ಶಾಸಕರು ಈ ಭಾಗದಲ್ಲಿ ಬಸವ ವಸತಿ ಯೋಜನೆಯಡಿ 300ಕ್ಕೂ ಹೆಚ್ಚು ಮನೆಗಳನ್ನು ಮುಂಜೂರು ಮಾಡಿಸಿದ್ದಾರೆ. ಆದರೆ ಇದೇ ಗ್ರಾಪಂನ ಸುಂಕದಕಲ್ಲಿಗೆ ಈ ಭಾಗ್ಯ ಇಲ್ಲ. ಇದರಿಂದಾಗಿ ನಾಲ್ಕು ಹಳ್ಳಿಗಳಲ್ಲಿ ಮನೆಗಳನ್ನು ನೋಡಿದ ಸುಂಕದಕಲ್ಲು ಗ್ರಾಮಸ್ಥರು ಸಂಕಟಪಡುತ್ತಾರೆ.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

