ಮೂಲ ಸೌಲಭ್ಯ ನೀಡಲು ಸಂತ್ರಸ್ತರ ಆಗ್ರಹ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಏ. 5
ಆಸರೆ ಯೋಜನೆಯಡಿ ಸ್ಥಳಾಂತರವಾಗಿರುವ ತಾಲೂಕಿನ ಮಾಗಳ ಗ್ರಾಮದ ಬಸ್ತಿಓಣಿ, ಬ್ಯಾಡರಗೇರಿ ಓಣಿಗಳಿಗೆ ತಹಸೀಲ್ದಾರ್ ವಿಜಯ ಕುಮಾರ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ಮೂರು ದಿನಗಳ ಹಿಂದೆ ಮಾಗಳ ಗ್ರಾಮದ ಬಸ್ತಿಓಣಿ, ಬ್ಯಾಡರಗೇರಿ ಸಂತ್ರಸ್ತರು ಮೂಲ ಗ್ರಾಮದಲ್ಲಿ ಮೂಲ ಸೌಲಭ್ಯ ಮತ್ತು ಮನೆ ನಿರ್ಮಾಣಕ್ಕೆ ಗ್ರಾಪಂನಿಂದ ಪರವಾನಗಿ ನೀಡಬೇಕು, ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವ ಬೆದರಿಕೆ ಹಾಕಿ ಗ್ರಾಪಂಗೆ ಮುತ್ತಿಗೆ ಹಾಕಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿಜಯ ಕುಮಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಸ್ತಿಓಣಿ ಮತ್ತು ಬ್ಯಾಡರಗೇರಿ ಓಣಿಗಳಲ್ಲಿ ಮನೆಗಳನ್ನು ಕಳದುಕೊಂಡ ಸಂತ್ರಸ್ತರು ಅಳಿದುಳಿದ ಮನೆಗಳಲ್ಲಿ ವಾಸವಾಗಿರುವುದು, ಕೊಳಚೆ ನೀರು ತುಂಬಿರುವ ತಗ್ಗು ಗುಂಡಿಗಳ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದು ಕಂಡು ಬಂತು.
ಪರವಾನಗಿ ನೀಡಿಲ್ಲ: ಈಗಾಗಲೆ ನಿರ್ಮಾಣವಾಗುತ್ತಿರುವ ನವ ಗ್ರಾಮದಲ್ಲಿ 560 ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು, ಆದರೆ 3 ವರ್ಷ ಕಳೆದರೂ ಈವರೆಗೂ ಮನೆ ನಿರ್ಮಾಣವಾಗಿಲ್ಲ, ಅಲ್ಲಿಯೂ ಮನೆ ಇಲ್ಲ, ಮೂಲ ಗ್ರಾಮದಲ್ಲಿಯೂ ಮನೆ ಕಟ್ಟಲು ಪರವಾನಗಿ ನೀಡುತ್ತಿಲ್ಲ. ನಂತರ ನೆರೆ ಹಾವಳಿಯಿಂದ ತತ್ತರಿಸಿರುವ ಆಸರೆ ಯೋಜನೆಯಡಿ ಸ್ಥಳಾಂತರವಾಗುತ್ತಿರುವ ಗ್ರಾಮಗಳಲ್ಲಿ ಯಾವ ಮೂಲ ಸೌಲಭ್ಯಗಳನ್ನು ನೀಡಬಾರದೆಂದು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈವರೆಗೂ ಇಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿದೀಪ, ರಸ್ತೆ, ಕುಡಿಯುವ ನೀರು, ಶೌಚ ನಿರ್ಮಾಣ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣ ಸೇರಿದಂತೆ ಯಾವ ಅಭಿವೃದ್ಧಿಗೂ ಗ್ರಾಪಂ ಪರವಾನಗಿ ನೀಡುತ್ತಿಲ್ಲ ಎಂದು ತಹಸೀಲ್ದಾರ್ ಎದುರು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡರು.
ಚುನಾವಣಾ ಬಹಿಷ್ಕಾರ: ಈ ಕೂಡಲೇ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆದು ಅಗತ್ಯ ಮೂಲ ಸೌಲಭ್ಯಗಳನ್ನು ನೀಡದಿದ್ದರೆ ಚುನಾವಣೆಯನ್ನು ಸಂಪೂರ್ಣ ಬಹಿಷ್ಕಾರ ಮಾಡುತ್ತೇವೆಂದು ತಹಸೀಲ್ದಾರ್ ಎದುರು ಹೇಳಿದರು. ಮಾಗಳ ಗ್ರಾಮವನ್ನು ಸಿಂಗಟಾಲೂರು ಏತ ನೀರಾವರಿಯ ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಡೆ ಗ್ರಾಮವೆಂದು ಘೋಷಣೆ ಮಾಡಬೇಕು, ಮೂಲ ಗ್ರಾಮದಲ್ಲಿ ಮನೆಗಳನ್ನು ಕಟ್ಟಲು ಪರವಾನಗಿ ನೀಡಬೇಕು, ನವಗ್ರಾಮದಲ್ಲಿರುವ ಮನೆಗಳನ್ನಾದರೂ ಮುಗಿಸಿ ಗುಣಮಟ್ಟದ ಮನೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಂತ್ರಸ್ತರ ನೋವನ್ನು ಆಲಿಸಿದ ತಹಸೀಲ್ದಾರ್ ವಿಜಯಕುಮಾರ್, ಈ ಓಣಿಗಳಲ್ಲಿರುವ ಸಮಸ್ಯೆ ಕುರಿತು ಸ್ಥಳ ಪರಿಶೀಲನೆ ಮಾಡಿದ್ದೇನೆ, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿ ಒಂದು ವರದಿಯನ್ನು ಕಳಿಸುತ್ತೇವೆ. ಈ ಕುರಿತು ಅವರು ಕ್ರಮ ತೆಗೆದುಕೊಳ್ಳುತ್ತಾರೆಂದು ಹೇಳಿದರು.
ಈಗಾಗಲೇ ನವಗ್ರಾಮದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ, ಅಲ್ಲಿಯೂ ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದೇವೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

