ವಲಸಿಗರಿಗೆ ಟಿಕೆಟ್: ಕೈಗೆ ಬಂಡಾಯದ ಬಿಸಿ
ಹಗರಿಬೊಮ್ಮನಹಳ್ಳಿ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿದ ಬೆನ್ನಲ್ಲೇ ಈಗ ಕ್ಷೇತ್ರದ ಕೈ ಪಾಳೆಯದಲ್ಲಿ ಟಿಕೆಟ್ ವಂಚಿತರ ಬಂಡಾಯದ ಬಿಸಿ ಭುಗಿಲೆದ್ದಿದೆ. ಮೂರು ದಶಕಗಳಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಇದ್ದರೂ ಅವರನ್ನು ಕಡೆಗಣಿಸಿ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಬಂಡಾಯ ಹೇಳಲು ಕಾರಣವಾಗಿದೆ.
ಕಾಂಗ್ರೆಸ್ನಲ್ಲಿ ಎದ್ದಿರುವ ಬಂಡಾಯದ ಬಿಸಿ ಅನ್ಯ ಪಕ್ಷಗಳಿಗೆ ವರದಾನವಾಗಲಿದೆ. ಟಿಕೆಟ್ ವಂಚಿತ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಚಿಂತನೆ ನಡೆಸುತ್ತಿದ್ದಾರೆ. ಈ ಮಧ್ಯೆ ಟಿಕೆಟ್ ಹಂಚಿಕೆ ನಂತರ ಉದ್ಭವಿಸಿರುವ ಬಂಡಾಯವನ್ನು ತಣ್ಣಗಾಗಿಸಲು ಘೋಷಣೆ ಮಾಡಿರುವ ಅಭ್ಯರ್ಥಿಯನ್ನು ಬದಲಾಯಿಸಿ, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲು ಶನಿವಾರ ಸಂಜೆ ಹಲವು ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿದ್ದಾರೆ.
ತೀವ್ರ ಅಸಮಾಧಾನ: ಟಿಕೆಟ್ ಹಂಚಿಕೆ ಬಹಿರಂಗವಾಗುವವರೆಗೆ 20ಕ್ಕೂ ಅಧಿಕ ಆಕಾಂಕ್ಷಿಗಳು ಟಿಕೆಟ್ಗಾಗಿ ದೆಹಲಿ, ಬೆಂಗಳೂರಿಗೆ ತೆರಳಿ ಲಾಬಿ ನಡೆಸುವ ಮೂಲಕ ಕ್ಷೇತ್ರದ ಅಭ್ಯರ್ಥಿಯಾಗಲು ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಬಳ್ಳಾರಿಯ ಎಲ್. ಮಾರೆಣ್ಣ ಎಂಬುವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದಂತೆಯೇ ಸ್ಥಳೀಯ ಎಲ್ಲ ಆಕಾಂಕ್ಷಿಗಳಲ್ಲಿ ಪಕ್ಷದ ಈ ನಿರ್ಧಾರ ತೀವ್ರ ಅಸಮಾಧಾನ ಹುಟ್ಟುಹಾಕುವಂತೆ ಮಾಡಿತು.
ಅಲ್ಲಂ ಬೆಂಬಲಿಗನಿಗೆ ಟಿಕೆಟ್: ಸದ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವ ಬಳ್ಳಾರಿಯ ಮಾರೆಣ್ಣ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ಬೆಂಬಲಿಗರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲಂ ವೀರಭದ್ರಪ್ಪ, ಬೆಂಗಳೂರಿನ ರಾಜಾಜಿನಗರ ಇಲ್ಲವೆ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ ಈ ಎರಡು ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಅವರು ಬಯಸುವ ಅಭ್ಯರ್ಥಿಗೆ ಮಣೆ ಹಾಕುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಅಪರಿಚಿತರಾದ ಮಾರೆಣ್ಣ ಅವರಿಗೆ ಅನಾಯಾಸವಾಗಿ ಟಿಕೆಟ್ ಲಭಿಸಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚಿತವಾಗುತ್ತಿದೆ.
ಈ ಮಧ್ಯೆ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ಮೇಲೆ ಇಲ್ಲಿಯ ತನಕ ಜರುಗಿರುವ ಗ್ರಾಪಂ, ತಾಪಂ, ಜಿಪಂ, ಪಪಂ, ಎಪಿಎಂಸಿ, ಪಿಕಾರ್ಡ್ ಬ್ಯಾಂಕ್, ರೈತ ಸೇವ ಸಹಕಾರ ಬ್ಯಾಂಕ್ ಸೇರಿದಂತೆ ಎಲ್ಲ ಹಂತದ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದಕ್ಕೆ ಸ್ಥಳೀಯ ಕಾಂಗ್ರೆಸ್ ಪಾಳಯದಲ್ಲಿ ಚಾಲ್ತಿಯಲ್ಲಿರುವ ಸಾಮೂಹಿಕ ನಾಯಕತ್ವವೇ ಕಾರಣ ಎಂದು ಕೈ ಪಾಳಯ ಹೇಳುತ್ತಿದೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದರೆ ಈ ತಕ್ಷಣವೇ ಮಾರೆಣ್ಣರನ್ನು ಬದಲಾಯಿಸಿ ಸ್ಥಳೀಯ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಿದರೆ ಗೆಲವು ಸಾಧ್ಯ. ಇಲ್ಲದಿದ್ದರೆ ಕಾಂಗ್ರೆಸ್ಗೆ ಸುಲಭವಾಗಿ ಸಿಗಬಹುದಾದ ಒಂದು ಸ್ಥಾನ ಕೈತಪ್ಪುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕೆಪಿಸಿಸಿ ಸದಸ್ಯ ಮರಿಯಮ್ಮನಹಳ್ಳಿ ಕೃಷ್ಣನಾಯ್ಕ.
-ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

