ನಗರ ಕ್ಷೇತ್ರಕ್ಕೆ ಹೆಚ್ಚಾಯ್ತು ಕೈ ನೋವು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 10
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಣೆ ಮಾಡಿರುವ ಕಾಂಗ್ರೆಸ್ಗೆ ಬಳ್ಳಾರಿ ನಗರ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಈವರೆಗೆ ಸಾಧ್ಯವಾಗುತ್ತಿಲ್ಲ. ಇಷ್ಟರ ಮಟ್ಟಿಗೆ ಅಭ್ಯರ್ಥಿಗಳು ಅದರಲ್ಲೂ ಘಟಾನುಘಟಿ ರಾಜಕಾರಣಿಗಳು ಟಿಕೆಟ್ಗೆ ದುಂಬಾಲು ಬೀಳಲು ಕಾರಣ ಇಲ್ಲದಿಲ್ಲ. ಟಿಕೆಟ್ ಸಿಕ್ಕು ಆರಿಸಿ ಬಂದರೆ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಹೆಬ್ಬಯಕೆಯೇ ಇಂತಹ ಲಾಬಿಗೆ ಕಾರಣ ಎಂದು ಜಿಲ್ಲಾ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಈ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ನತ್ತ ಮುಖ ಮಾಡಿದ್ದು, ಅಂದುಕೊಂಡಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಗರ ಕ್ಷೇತ್ರದಲ್ಲಿ ಗೆದ್ದವರಿಗೆ ಈ ಸರ್ಕಾರದಲ್ಲಿ ಮಂತ್ರಿಸ್ಥಾನ ಸಿಗುತ್ತೆ ಎಂಬ ಮಹಾದಾಸೆ ಆಕಾಂಕ್ಷಿಗಳಲ್ಲಿ ಮೂಡಿದೆ. ಹೀಗಾಗಿಯೇ ನಗರ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ಗೆ ತಲೆನೋವಾಗಿದೆ. ರಾಜಕೀಯದಲ್ಲಿ ಸಾಕಷ್ಟು ಅನುಭವವುಳ್ಳ, ಹಿರಿಯ ಮುಖಂಡರು ಟಿಕೆಟ್ಗೆ ದುಂಬಾಲು ಬಿದ್ದಿರುವುದರಿಂದ ಪಕ್ಷ ಯಾರನ್ನೂ ಕಡೆಗಾಣಿಸಿ ಟಿಕೆಟ್ ನೀಡಲು ಬರುವುದಿಲ್ಲ ಎಂಬ ಕಾರಣಕ್ಕೆ ಟಿಕೆಟ್ ಘೋಷಣೆ ಸೂಕ್ಷ್ಮವಾಗುತ್ತಾ ಸಾಗಿದೆ. ಇಕ್ಬಾಲ್ ಅಹಮದ್ ಹೊತ್ತೂರು ಅವರು ಟಿಕೆಟ್ ಕೈ ತಪ್ಪಿದೆ ಎಂಬ ಕಾರಣಕ್ಕೆ ಕೆಜೆಪಿ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದರೆ, ಬುಧವಾರ ಅನಿಲ್ ಲಾಡ್ ಬಂಡಾಯದ ಕಹಳೆ ಊದುತ್ತಿರುವುದು ಕಾಂಗ್ರೆಸ್ ಮಟ್ಟಿಗೆ ಕೆಟ್ಟ ಸುದ್ದಿ.
ರೆಡ್ಡಿ ಪ್ರಾಬಲ್ಯ ಹತ್ತಿಕ್ಕಿದವರಿಗೆ ಸಚಿವ ಸ್ಥಾನ: ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಕಳೆದ 10 ವರ್ಷದ ಹಿಂದೆ ಛಿದ್ರಗೊಳಿಸಿದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರನ್ನು ಸೋಲಿಸಿದರೆ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಿರೋ ಆಗಿ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರ ಆಕಾಂಕ್ಷಿಗಳದ್ದಾಗಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಮಹಾನಗರ ಪಾಲಿಕೆಯಲ್ಲಿ ರೆಡ್ಡಿಗಳ ಪ್ರಾಬಲ್ಯವನ್ನು ಹತ್ತಿಕ್ಕಿ 35 ವಾರ್ಡ್ಗಳ ಪೈಕಿ 26 ವಾರ್ಡ್ಗಳಲ್ಲಿ ಗೆಲವು ಸಾಧಿಸುವ ಮೂಲಕ ಬಳ್ಳಾರಿಯಲ್ಲಿ ಕಾಂಗ್ರೆಸ್ ಪರ ಅಲೆ ಬೀಸಿದೆ ಎಂಬ ಸಂದೇಶವನ್ನು ಮತದಾರ ನೀಡಿರುವುದರಿಂದ ಟಿಕೆಟ್ ಲಾಬಿ, ಕಚ್ಚಾಟ ತಾರಕಕ್ಕೇರಲು ಕಾರಣ.
ಕೆ.ಸಿ. ಕೊಂಡಯ್ಯ, ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಅನಿಲ್ ಲಾಡ್ ಇವರಲ್ಲಿ ಯಾರೇ ಟಿಕೆಟ್ ಪಡೆದರೂ ಸಚಿವ ಸ್ಥಾನ ಗ್ಯಾರಂಟಿ. ಕಾರಣ ಇವರೆಲ್ಲರೂ ಹಿರಿಯ ನಾಯಕರಾಗಿರುವುದರಿಂದ ಚುನಾವಣೆಯಲ್ಲಿ ಗೆದ್ದು, ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸಚಿವ ಸ್ಥಾನ ಖಚಿತ. ಇನ್ನು ರೆಡ್ಡಿ ಸಹೋದರರ ವಿರುದ್ಧ ಕಳೆದ ಚುನಾವಣೆಯಲ್ಲಿ ತೊಡೆತಟ್ಟಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ (1022) ಸೋತಿದ್ದ ಅನಿಲ್ ಲಾಡ್ ಅವರು ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಗೆದ್ದರೆ ಸಚಿವ ಸ್ಥಾನ ಪಡೆಯುವಲ್ಲಿ ಸಫಲರಾಗುತ್ತಾರೆ ಎಂಬ ವಿಷಯ ಇದೀಗ ಬಳ್ಳಾರಿಯಲ್ಲಿ ಹರಿದಾಡುತ್ತಿದೆ.
ಆಂಜನೇಯಲುಗೆ ಅವಕಾಶ: ಬಳ್ಳಾರಿ ಜಿಲ್ಲೆಯಲ್ಲಿ ಕೆ.ಸಿ. ಕೊಂಡಯ್ಯ, ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಅನಿಲ್ ಲಾಡ್ ಅವರನ್ನು ಹಿಂದಿಕ್ಕಿ, ಆಂಜನೇಯಲು ಅವರಿಗೆ ಟಿಕೆಟ್ ನೀಡುವ ಮೂಲಕ ರಾಜ್ಯಧಾನಿಯ ಕೆಲ ಮುಖಂಡರು ಬಳ್ಳಾರಿ ಮೇಲೆ ಪ್ರಭುತ್ವ ಸಾಧಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಿರಿಯರಿಗೆ ಟಿಕೆಟ್ ನೀಡಿ ಗೆಲವು ಸಾಧಿಸಿದರೆ, ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ. ಇದರಿಂದಾಗಿ ಗಣಿ ಜಿಲ್ಲೆಯ ಮೇಲೆ ತಮ್ಮ ಹಿಡಿತ ಸಾಧಿಸುವುದು ಕಷ್ಟವಾಗುತ್ತದೆ ಎಂಬ ಆತಂಕ ಕಾಂಗ್ರೆಸ್ನ ಬೆಂಗಳೂರು ಮಟ್ಟದ ಕೆಲ ಹಿರಿಯ ಮುಖಂಡರಲ್ಲಿದ್ದು, ಆಂಜನೇಯಲುಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದ ತೇಲಿಬರುತ್ತಿವೆ.
ಕಾಣದ ಕೈಗಳ ಕೈವಾಡ: ಬಳ್ಳಾರಿಯ ಪ್ರಮುಖ ನಾಯಕರಿಗೆ ಟಿಕೆಟ್ ನೀಡಿದರೆ ಬಳ್ಳಾರಿ ನಗರದಲ್ಲಿ ಗೆಲವು ಸಾಧಿಸಿ, ಇಡೀ ಜಿಲ್ಲೆಯ ಪ್ರಭುತ್ವ ಸ್ಥಾಪಿಸುತ್ತಾರೆ. ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ ಎಂಬ ಕಾರಣದಿಂದ ಗಣಿ ಲಾಬಿಯು ಕಾಣದ ಕೈಗಳ ಮೂಲಕ ಟಿಕೆಟ್ ಲಾಬಿಯಲ್ಲಿ ತನ್ನ ಕೈವಾಡ ಮೆರೆಯುತ್ತಿದೆ ಎಂಬ ಅನುಮಾನ ಕಾಂಗ್ರೆಸ್ನ ಕೆಲ ಮುಖಂಡರಲ್ಲಿ ಕಾಡುತ್ತಿದೆ. ಆಂಜನೇಯಲು ಅವರಿಗೆ ಟಿಕೆಟ್ ನೀಡಿದರೆ, ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಲು ಸಾಧ್ಯವಿಲ್ಲ. ಆ ಮೂಲಕ ಗಣಿ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಬಹುದೆಂಬ ಲೆಕ್ಕಾಚಾರಗಳು ನಡೆಯುತ್ತಿವೆ ಎಂದು ಕೈ ಮೂಲಗಳು ತಿಳಿಸುತ್ತವೆ. ಈ ಎಲ್ಲ ಅಂಶಗಳಿಂದಲೇ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ನ್ನು ಒಮ್ಮತದ ಅಭ್ಯರ್ಥಿಗೆ ನೀಡಲು ವಿಳಂಬ ಹಾಗೂ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

