ಬಿಜೆಪಿ ಸರ್ಕಾರದಿಂದ ರಾಜ್ಯ ಹದಗೆಟ್ಟಿದೆ: ಖರ್ಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 22
ಬಿಜೆಪಿ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಬಳ್ಳಾರಿ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯವನ್ನೇ ಹದಗೆಡಿಸಿದೆ. ಇದುವರೆಗೂ ರಾಜ್ಯದಲ್ಲಾಗದ ಪಾಪದ ಕೆಲಸಗಳನ್ನು ಬಿಜೆಪಿಯವರು ಮಾಡಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಸೋಮವಾರ ನಗರ ಮತ್ತು ಗ್ರಾಮೀಣ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಈ ಹಿಂದೆ ಅನೇಕ ಮಹನೀಯರು, ಗಣ್ಯ ವ್ಯಕ್ತಿಗಳು, ಸೋನಿಯಾ ಗಾಂಧಿ ಸೇರಿದಂತೆ ಇತರರು ಲೋಕಸಭೆಗೆ ಆಯ್ಕೆಯಾಗಿ ಕೀರ್ತಿ ತಂದಿದ್ದರು. ಆದರೆ ಇಂದು ಇಲ್ಲಿ ಆಯ್ಕೆಯಾದವರು ಬಳ್ಳಾರಿ ಹೆಸರನ್ನು ರಾಜ್ಯದಲ್ಲಷ್ಟೇ ಅಲ್ಲ ಇಡೀ ದೇಶಾದ್ಯಂತ ಕೆಡಿಸಿದ್ದಾರೆ ಎಂದರು.
ಬಿಎಸ್ಸಾರ್ ಎಲ್ಲಿದೆ?: ಬಿಜೆಪಿ, ಜೆಡಿಎಸ್, ಕೆಜೆಪಿ ಪಕ್ಷಗಳಿಗೆ ರಾಜ್ಯದ ಕೆಲ ಭಾಗಗಳಲ್ಲಾದರೂ ಅಸ್ತಿತ್ವವಿದೆ. ಆದರೆ ಬಿಎಸ್ಸಾರ್ ಪಕ್ಷದ ಸ್ಥಿತಿ ನಾ ಖಾಯಾ, ನಾ ಪೀಯಾ, ನಾ ಚಾಯಾ ಆಗಿದೆ. ರಾಜ್ಯದಲ್ಲಿ ಎಲ್ಲಿಯೂ ಆ ಪಕ್ಷಕ್ಕೆ ಅಸ್ತಿತ್ವವಿಲ್ಲ. ಪಕ್ಷವನ್ನಾದರೂ ಏಕೆ ಸ್ಥಾಪಿಸಿದ್ದಾರೋ ಗೊತ್ತಿಲ್ಲ. ಅದಕ್ಕೆ ಜನ ಬೆಂಬಲವೂ ಇಲ್ಲ ಎಂದ ಅವರು, ನ್ಯಾಯಯುತ ಆಡಳಿತ ನೀಡುವ ಪಕ್ಷ ಬೇಕಾದಲ್ಲಿ ಕಾಂಗ್ರೆಸ್ಗೆ ಮತ ನೀಡಿ ಎಂದು ಮನವಿ ಮಾಡಿದರು. ಅನೇಕ ಪಕ್ಷಗಳು ಅಧಿಕಾರಕ್ಕಾಗಿ ಹುಟ್ಟುತ್ತವೆ, ಸಾಯುತ್ತವೆ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯ, ತ್ಯಾಗ ಬಲಿದಾನಕ್ಕಾಗಿ ಹುಟ್ಟಿ ಬೆಳೆದ ಪಕ್ಷವಾಗಿದೆ. ಈ ಬಾರಿ ಕಾಂಗ್ರೆಸ್ ಪರ ಅಲೆಯಿದ್ದು, ಪಕ್ಷಕ್ಕೆ 130ರಿಂದ 140 ಸೀಟುಗಳು ಬಂದೇ ಬರುತ್ತವೆ. ಹಣಕ್ಕೆ ಮಹತ್ವ ನೀಡದೇ, ಬಡವರ ಪರ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದರು.
ಹೈ-ಕ ವಿಶೇಷ ಸ್ಥಾನಮಾನಕ್ಕಾಗಿ ಸಂವಿಧಾನದ 371ನೇ ಜೆ ವಿಧಿಗೆ ತಿದ್ದುಪಡಿ ಮಾಡುವ ಕುರಿತಂತೆ ಮಸೂದೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಮ್ಮತಿ ನೀಡಿದೆ. ಆ ಮೂಲಕ ಹಿಂದುಳಿದ 6 ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ, ಉದ್ಯೋಗಾವಕಾಶ, ಅನುದಾನ ಬಿಡುಗಡೆ, ಶಿಕ್ಷಣದಲ್ಲಿ ಆದ್ಯತೆ ನೀಡುವ ತಿದ್ದುಪಡಿಯನ್ನು ಪಕ್ಷ ಮಾಡಿದೆ. ಐದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಇಡೀ ರಾಜ್ಯವನ್ನೇ ಕೊಳ್ಳೆ ಹೊಡೆದು ನಾಶ ಮಾಡಿ, ಬಡವರನ್ನು ವಂಚಿಸಿದೆ ಎಂದು ದೂರಿದರು.
ಕಾಂಗ್ರೆಸ್ ಸೇರ್ಪಡೆ: ಮಾಜಿ ಸಂಸದ ಕೋಳೂರು ಬಸವನಗೌಡ, ವೀರಶೈವ ಮುಖಂಡ ದರೂರು ಶಾಂತನಗೌಡ, ಇತರ ಮುಖಂಡರಾದ ಹಂಪಿ ರಮಣ, ಯಲ್ಲಪ್ಪ, ಮಲ್ಲಮ್ಮ, ಬಂಗಾರು ಗವಿಬಸಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಸೋಮವಾರ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ಆಗಮಿಸಿದ ಖರ್ಗೆ ಹೆಲಿಕಾಪ್ಟರ್ನಿಂದ ಇಳಿಯಲಾಗದೆ, ಭದ್ರತಾ ಸಿಬ್ಬಂದಿ ನೆರವು ಪಡೆದರು.
ಕಾಂಗ್ರೆಸ್ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ ಲಾಡ್, ಗ್ರಾಮೀಣ ಅಭ್ಯರ್ಥಿ ಹೊನ್ನೂರಪ್ಪ, ಮಾಜಿ ಎಂಎಲ್ಸಿ ಕೆ.ಸಿ. ಕೊಂಡಯ್ಯ, ಆಂಜನೇಯಲು, ಅಲ್ಲಂ ವೀರಭದ್ರಪ್ಪ, ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯ ಎಚ್.ಪಿ. ಬೈರೆಡ್ಡಿ ಸೇರಿದಂತೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

