ಬಳ್ಳಾರಿ

ಜನರ ಸಮಸ್ಯೆ ಆಲಿಸುವವನೇ ಜನನಾಯಕ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 29
ಸಾರ್ವಜನಿಕರ ಬಳಿ ನಿರ್ಭಯವಾಗಿ ತೆರಳಿ ಅವರ ಕುಂದು ಕೊರತೆ, ಸಮಸ್ಯೆಗಳನ್ನು ಆಲಿಸುವವನೇ ನಿಜವಾದ ನಾಯಕ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ. ದಿವಾಕರಬಾಬು ಹೇಳಿದರು.
ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸುಂಡಿ ಹೊನ್ನೂರಪ್ಪ ಪರ ತಾಲೂಕಿನ ಮೋಕಾ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಜನಪರ ಕೆಲಸಗಳನ್ನು ಮಾಡುವ ನಾಯಕರನ್ನು ನಂಬಬೇಕು, ಆಸೆ, ಆಮಿಷಗಳನ್ನು ಒಡ್ಡುವವರನ್ನು ನಂಬಬೇಡಿ. ಕಾಂಗ್ರೆಸ್ ಹೊರತು ಪಡಿಸಿ ಉಳಿದ್ಯಾವ ಪಕ್ಷಗಳೂ ಬಡವರ ಸೇವೆ ಮಾಡುವುದಿಲ್ಲ ಎಂದರು.
ನಿವೃತ್ತ ಜಿಲ್ಲಾಧಿಕಾರಿ, ಕಾಂಗ್ರೆಸ್ ಮುಖಂಡ ಶಿವಪ್ಪ ಮಾತನಾಡಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುವ ಪಕ್ಷವಾಗಿದ್ದು, ರಾಜ್ಯದಲ್ಲಿ ಎಲ್ಲಿಯೂ ಸಂಘಟನೆಯಿಲ್ಲ. ಜನತೆಗೆ ಯಾವುದೇ ಕೊಡುಗೆ ನೀಡಿಲ್ಲ. ಪಕ್ಷದಲ್ಲಿ ಆಂತರಿಕ ಚರ್ಚೆಗಳಿಲ್ಲ, ಏಕ ವ್ಯಕ್ತಿ ನಿರ್ಣಯಕ್ಕೆ ಪ್ರಾಧಾನ್ಯ ನೀಡುತ್ತದೆ. ಇದರಿಂದ ಜನತೆಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನರ ಸೇವೆ ಮಾಡುವ ಉದ್ದೇಶದಿಂದ ಬಿಎಸ್‌ಆರ್ ತೊರೆದು ಕಾಂಗ್ರೆಸ್ ಸೇರಿರುವುದಾಗಿ ತಿಳಿಸಿದರು.
ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಅಸುಂಡಿ ಹೊನ್ನೂರಪ್ಪ ಮಾತನಾಡಿ, ಅಧಿಕಾರವಿದ್ದಾಗಲೇ ಜನತೆಯ ಯಾವುದೇ ಸೇವೆ ಮಾಡದ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದ  ಶಾಸಕ ಬಿ. ಶ್ರೀರಾಮುಲು ಈಗ ಸ್ವಂತ ಪಕ್ಷ ಕಟ್ಟಿಕೊಂಡು ಏನು ಮಾಡಲು ಸಾಧ್ಯ? ಹಣದಿಂದ ಜನತೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಸಿ ಕೊಂಡಯ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ  ಮಾತನಾಡಿದರು.
ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್. ಆಂಜನೇಯಲು, ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ರೂಪನಗುಡಿ-ಮೋಕಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಸುಂಡಿ ನಾಗರಾಜ ಗೌಡ, ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಬಕ್ಷ, ಯಾಳ್ಪಿ ಪೊಂಪನಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.