ಬಳ್ಳಾರಿ

ಇಂದು ಕವಿ ಮನ-ಮನೆಯೊಂದಿಗೆ ಕಸಾಪ

Published On :

ಬಳ್ಳಾರಿ:  ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಕವಿ ಮನ-ಮನೆಯೊಂದಿಗೆ ಕಸಾಪ ಕಾರ್ಯಕ್ರಮ ಏ.30ರಂದು ಬೆಳಗ್ಗೆ 10.30ಕ್ಕೆ ನಗರದ ವಿದ್ಯಾಗಿರಿ ಬಡಾವಣೆಯ ಟಿ.ಎಚ್.ಎಂ ಬಸವರಾಜರ ನಿವಾಸದಲ್ಲಿ ಏರ್ಪಡಿಸಿದೆ.  ಲೇಖಕ ಡಾ.ರಾಜಶೇಖರ ನೀರಮಾನ್ವಿ ಕಾರ್ಯಕ್ರಮ ಉದ್ಘಾಟಿಸುವರು. ಲೇಖಕ ಟಿ.ಎಚ್.ಎಂ ಬಸವರಾಜ ಗೌರವ, ಬಳ್ಳಾರಿಯ ರಂಗಭೂಮಿ ಕಲಾವಿದ ಸುಬ್ಬಣ್ಣ ಉಪಸ್ಥಿತರಿರುವರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಅಧ್ಯಕ್ಷತೆ ವಹಿಸುವರು.

ದಾಖಲೆ ಇಲ್ಲದ ರು. 8.40 ಲಕ್ಷ ವಶ
ಹೊಸಪೇಟೆ:
ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಬಳ್ಳಾರಿ ನಿವಾಸಿ ಈಶ್ವರಗೌಡ ಎಂಬುವರು ಯಾವುದೇ ದಾಖಲೆ ಇಲ್ಲದೆ ರು. 8.40 ಲಕ್ಷ ನಗದು ಒಯ್ಯುತ್ತಿದ್ದಾಗ ವಿಜಯನಗರ ಕಾಲೇಜು ಸಮೀಪ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗೆ ಮುಟ್ಟಿಸಲು ಈ ಹಣ ಒಯ್ಯುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಾಗಿದೆ.

ಮಹೇಶ್ವರ ಸ್ವಾಮಿ ಕಾಂಗ್ರೆಸ್ ಸೇರ್ಪಡೆ
ಬಳ್ಳಾರಿ:
ಜನತಾ ಪರಿವಾರದ ಮುಖಂಡ, ರೇಲ್ವೆ ಹೋರಾಟಗಾರ ಕೆ.ಎಂ. ಮಹೇಶ್ವರ ಸ್ವಾಮಿ ಜೆಡಿಎಸ್ ಬಿಟ್ಟು, ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಮಹೇಶ್ವರ ಸ್ವಾಮಿ ಈ ಕುರಿತು ವಿವರಣೆ ನೀಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. 35 ವರ್ಷಗಳಿಂದ ಜನತಾ ಪರಿವಾರ ಹಾಗೂ ಜೆಡಿಎಸ್‌ನಲ್ಲಿ ಇದ್ದೆ, ಆದರೆ ಜೆಡಿಎಸ್ ಹಿರಿಯ ನಾಯಕರ ದ್ವಂದ್ವ ನೀತಿಗಳು, ವರ್ತನೆಗಳು ಬೇಸರ ತಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ತಿಳಿಸಿದರು. ಈ ಭಾಗದ ಬಹುದಿನಗಳ ಬೇಡಿಕೆಯಾದ ಕಲಂ 371 ತಿದ್ದುಪಡಿಯನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ಅದರ ಋಣ ತೀರಿಸಬೇಕಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲಿದೆ. ಕಾಂಗ್ರೆಸ್‌ನಿಂದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಶಯ ತಮ್ಮದಾಗಿದೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಯಾಚನೆ ಮಾಡಲಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪಲ್ಲೇದ ದೊಡ್ಡಪ್ಪ, ಕೆ. ತಿಪ್ಪೇಸ್ವಾಮಿ, ಡಾ. ಜಿ. ಸೋಮನಗೌಡ ಇದ್ದರು.

ಹೂವಿನಹಡಗಲಿಗೆ ಇಂದು ಶ್ರೀರಾಮುಲು
ಹೂವಿನಹಡಗಲಿ:
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೇಮಂತ್‌ಕುಮಾರ ಭಾರತಿ ಪರ ಮತಯಾಚನೆ ಮಾಡಲು ಏ. 30ರಂದು ಹೂವಿನಹಡಗಲಿಗೆ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು, ಸಂಸದೆ ಜೆ. ಶಾಂತ ಮತ್ತು ಚಿತ್ರನಟಿ ಪೂಜಾಗಾಂಧಿ ಆಗಮಿಸಲಿದ್ದಾರೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಎಸ್ಸಾರ್ ಜಿಲ್ಲಾ ಸಂಚಾಲಕ ಕೊಟ್ರೇಶನಾಯ್ಕ, ಏ. 30ರಂದು ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ತಾಲೂಕಿನ ಹ್ಯಾರಡ, ಹೊಳಲು, ಹಿರೇಹಡಗಲಿ, ಹೂವಿನಹಡಗಲಿ, ಸೋಗಿ, ಇಟ್ಟಿಗಿ ಗ್ರಾಮಗಳಿಗೆ ಆಗಮಿಸಿ ಮತಯಾಚಿಸಲಿದ್ದಾರೆಂದು ತಿಳಿಸಿದ್ದಾರೆ.

ಕಡ್ಡಾಯವಾಗಿ ವೇತನ ಸಹಿತ ರಜೆ ನೀಡಿ
ಬಳ್ಳಾರಿ:
ಬಳ್ಳಾರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ಮತದಾನ ಮಾಡಲು ಅನುವಾಗುವಂತೆ ಮೇ 5ರಂದು ಕಡ್ಡಾಯವಾಗಿ ವೇತನ ಸಹಿತ ರಜೆ ನೀಡಬೇಕೆಂದು ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ  ಸೂಚಿಸಿದ್ದಾರೆ. ವೇತನ ಸಹಿತ ರಜೆ ನೀಡಲು ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ
ಹಗರಿಬೊಮ್ಮನಹಳ್ಳಿ: 
ಸುಭದ್ರ ಸರ್ಕಾರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್. ಮಾರೆಣ್ಣ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮೀತಿಮೀರಿದ ಭ್ರಷ್ಟಾಚಾರದಿಂದಾಗಿ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಸ್ವಚ್ಛ ಆಡಳಿತಕ್ಕಾಗಿ ರಾಜ್ಯದ ಜನತೆ ಹಂಬಲಿಸುತ್ತಿದ್ದು, ಕಾಂಗ್ರೆಸ್ ಬೆಂಬಲಿಸಿ, ಉತ್ತಮ ಸರ್ಕಾರ ರಚನೆಯಲ್ಲಿ ಪಾಲುದಾರರಾಗಬೇಕು ಎಂದು ವಿನಂತಿಸಿದರು. ರಾಯರಾಳುತಾಂಡ ಕೃಷ್ಣನಾಯ್ಕ, ತಳವಾರ ಹುಲುಗಪ್ಪ,  ಹಂಪಾಪಟ್ಟಣ ಮೀಸಿಹುಲುಗಪ್ಪ, ಮಹಾದೇವಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.