ನದಿಗೆ ನೀರು: ಕಂಪ್ಲಿ ಕೋಟೆ ಜಲಾವೃತ
ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಜಲಾಶಯದಿಂದ ನದಿಗೆ ಹರಿಬಿಡುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದೆ. ಇದರಿಂದಾಗಿ ಹೊಸಪೇಟೆ ತಾಲೂಕು ಕಂಪ್ಲಿಯ ಐತಿಹಾಸಿಕ ಕಂಪ್ಲಿ- ಕೋಟೆ ಹೆಬ್ಬಾಗಿಲಿನ ವರೆಗೆ ನದಿ ನೀರು ಬಂದಿದ್ದು, ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಂಪ್ಲಿ ಕೋಟೆಗೆ ತೆರಳುವವರು ತೆಪ್ಪದ ಆಸರೆ ಬಯಸುವಂತಾಗಿದೆ.
ಸೋಮವಾರ ಜಲಾಶಯದಿಂದ 1.55 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಟ್ಟಿದ್ದರಿಂದ ಕಂಪ್ಲಿ- ಗಂಗಾವತಿ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದೆ. ನೀರಿನಲ್ಲಿ ಸೇತುವೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯಲಾರದಷ್ಟು ಮಟ್ಟಿಗೆ ಮುಳುಗಡೆಯಾಗಿದೆ. ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಸೇತುವೆ ಸಮೀಪದ ಹೋಟೆಲ್, ಕಿರಾಣಿ, ಪಾನ್ಶಾಪ್ಗಳ ಸಮೀಪಕ್ಕೆ ನೀರು ಬಂದಿರುವ ಹಿನ್ನೆಲೆಯಲ್ಲಿ ನದಿ ದಂಡದಲ್ಲಿರುವ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ.
ಇನ್ನು ಕೋಟೆ ಪ್ರದೇಶದ ಪಂಪಾಪತಿ ಮತ್ತು ಸುಂಕ್ಲಮ್ಮ ಗುಡಿ ಭಾಗದ ಬಾಳೆ, ಕಬ್ಬು ತೋಟಗಳಲ್ಲಿ ನೀರು ನುಗ್ಗಿದೆ. ಸೇತುವೆ ಸಮೀಪದ ಮೀನುಗಾರರ ಕಾಲೋನಿಯಲ್ಲಿ ನೀರು ನುಗ್ಗಿದ್ದು, ಕಳೆದ 10 ದಿನಗಳಿಂದ ನದಿಯಲ್ಲಿ ಪ್ರವಾಹ ಸ್ಥಿತಿ ಇರುವುದರಿಂದ ಮೀನುಗಾರರು ನದಿಯಲ್ಲಿ ಮೀನು ಹಿಡಿಯಲು ಆಗುತ್ತಿಲ್ಲ. ದಿನದ ದುಡಿಮೆ ಇಲ್ಲದೆ ಜೀವನ ಹೇಗೆಂದು ಚಿಂತಿಸುವಂತಾಗಿದೆ.
ಕಟ್ಟೆಚ್ಚರ: ಕೋಟೆ ಅಗಸಿ ಮುಂಭಾಗದ ಬನ್ನಿ ಮಹಾಂಕಾಳಿ, ನದಿ ಪಾತ್ರದ ಪ್ರಸನ್ನ ವೆಂಕಟರಮಣ, ತುಳಸಿ ಹಾಗೂ ಹೊಳೆ ಆಂಜನೇಯ ಗುಡಿಗಳು ಜಲಾವೃತವಾಗಿವೆ. ತುಂಗಭದ್ರಾ ನದಿ ಪಾತ್ರದ ಕಂಪ್ಲಿ, ಕೋಟೆ, ನಂ. 5 ಬೆಳಗೋಡುಹಾಳ್, ನಂ. 3 ಸಾಣಾಪುರ, ಇಟಿಗಿ, ರಾಮಸಾಗರ, ವೆಂಕಟಾಪುರ ಹಾಗೂ ಬುಕ್ಕಸಾಗರ ಗ್ರಾಮಗಳ ರೈತರ ಕಬ್ಬು, ಬಾಳೆ, ಬತ್ತದ ಗದ್ದೆಗಳಲ್ಲಿ ನೀರು ನುಗ್ಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ತುಂಗಭದ್ರಾ ನದಿ ಸಮೀಪಕ್ಕೆ ಯಾರು ಹೋಗಬಾರದೆಂದು ಹಾಗೂ ನದಿ ಪಾತ್ರದ ಜನತೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಕಂದಾಯ, ಪುರಸಭೆ, ಪೊಲೀಸ್, ಆರೋಗ್ಯ, ಜೆಸ್ಕಾಂ ಇಲಾಖೆ ಅದಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಡ್ಯಾಂಗೆ ಧುಮುಕಿ ವ್ಯಕ್ತಿ ಆತ್ಮಹತ್ಯೆ
ಹೊಸಪೇಟೆ: ಅಪರಿಚಿತ ವ್ಯಕ್ತಿಯೋರ್ವ ತುಂಗಭದ್ರಾ ಜಲಾಶಯದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅಂದಾಜು 50 ವರ್ಷದವನಿದ್ದನು ಎಂದು ಅಲ್ಲಿಯೇ ಇದ್ದ ಸಾರ್ವಜನಿಕರು ತಿಳಿಸಿದ್ದಾರೆ. ಜಲಾಶಯ ತುಂಬಿದ್ದರಿಂದ ಪ್ರವಾಸಿಗರು, ಸ್ಥಳೀಯರು ನಿತ್ಯದಂತೆ ಡ್ಯಾಂ ವೀಕ್ಷಣೆಗೆ ಸೋಮವಾರವೂ ಬಂದಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಜಲಾಶಯದ ಬಳಿ ಜಾಲರಿ ನಿರ್ಮಿಸಿ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಜಲಾಶಯದ ಗೇಟ್ ಬಳಿಯ ಜಾಲರಿಯನ್ನು ದಾಟಿ ಈತನು ಜಲಾಶಯಕ್ಕೆ ಧುಮುಕಿದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಟಿ.ಬಿ. ಡ್ಯಾಂ ಪೊಲೀಸರು ಭೇಟಿ ನೀಡಿದ್ದು ಶವಕ್ಕಾಗಿ ಶೋಧನೆ ನಡೆಸಿದರು. ಶವ ಸಿಗದೇ ಹೋದರೆ ಮಂಗಳವಾರವೂ ಶೋಧಕಾರ್ಯ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

