ಬಿಸ್ಸಾರ್ಗೆ ಕೈ ಕೊಟ್ಟ ಜಿಪಂ ಸದಸ್ಯರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 5
ನಿರೀಕ್ಷೆಯಂತೆ ಕಾಂಗ್ರೆಸ್ನ ಜಿಲ್ಲಾ ಪಂಚಾಯಿತಿ ಸದಸ್ಯರು ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ವಿರುದ್ಧ ಅವಿಶ್ವಾಸ ಮಂಡನೆಗೆ ಸೂಚನಾ ಪತ್ರವನ್ನು ಅಧ್ಯಕ್ಷೆ ಸುಮಂಗಳಮ್ಮ ಹಾಗೂ ಜಿಪಂ ಸಿಇಒಗೆ ಸೋಮವಾರ ನೀಡುವ ಮೂಲಕ ಬಿಎಸ್ಸಾರ್ ಕಾಂಗ್ರೆಸ್ ತೆಕ್ಕೆಯಲ್ಲಿರುವ ಬಳ್ಳಾರಿ ಜಿಪಂನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಮುನ್ನುಡಿ ಬರೆದಿದ್ದಾರೆ.
ಇದರಿಂದಾಗಿ ಅಧ್ಯಕ್ಷರು 15 ದಿನಗಳ ಒಳಗಾಗಿ ವಿಶೇಷ ಸಭೆ ಕರೆದು, ವಿಶ್ವಾಸ ಮತ ತೋರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದಲ್ಲದೇ ರೆಡ್ಡಿಗಳಿಗೆ ಸೆಡ್ಡು ಹೊಡೆದ ಕೈ ಪಾಳೆಯ ಬಿಜೆಪಿಯ ಕೋಗಳಿ ಸದಸ್ಯೆ ಕರಿಬಸವನಗೌಡರ ರತ್ನಮ್ಮ ಅವರನ್ನು ಆಪರೇಷನ್ ಹಸ್ತದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು, ಕಾಂಗ್ರೆಸ್ನ 17, ರತ್ನಮ್ಮ ಸೇರಿ ಒಟ್ಟು 18 ಸದಸ್ಯರು ಸೂಚನಾ ಪತ್ರಕ್ಕೆ ಸಹಿ ಹಾಕುವ ಮೂಲಕ ಹಾಲಿ 35 ಸದಸ್ಯ ಬಲವುಳ್ಳ ಜಿಪಂನಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ಸಿಗುವಂತಾಗಿದೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದ ಸದಸ್ಯರು ಜಿಪಂ ಉಪಾಧ್ಯಕ್ಷೆ, ಕಾಂಗ್ರೆಸ್ನ ಸದಸ್ಯೆ ಮಮತಾ ಸುರೇಶ್ ಸೇರಿ 18 ಸದಸ್ಯರ ಸಹಿಯುಳ್ಳ ಅವಿಶ್ವಾಸ ಮಂಡನೆಯ ಸೂಚನಾ ಪತ್ರವನ್ನು ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ಅವರ ಛೇಂಬರ್ಗೆ ಹೋಗಿ ನೀಡಿದ್ದಾರೆ. ಅನಂತರ ಜಿಪಂ ಸಿಇಒ ಮಂಜುನಾಥ್ ನಾಯಕ್ ಅವರಿಗೂ ಸಲ್ಲಿಸಿದ್ದಾರೆ. ಜಿಪಂ ಅಧ್ಯಕ್ಷರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅನುಷ್ಠಾನಗೊಂಡ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡಿದೆ ಮತ್ತು ಸದಸ್ಯರೊಂದಿಗೆ ಅಧ್ಯಕ್ಷರ ಸರಿಯಾದ ಸ್ಪಂದನೆ ಇರಲಿಲ್ಲ. ಹೀಗಾಗಿ ಅಧ್ಯಕ್ಷರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಗೆ ಸಹಿ ಮಾಡಿದ್ದೇವೆ. ಅತಿ ಜರೂರಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆಯಲು ಸೂಚಿಸುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ಗೆ ಸರಳ ಬಹುಮತ: 36 ಸದಸ್ಯ ಬಲವುಳ್ಳ ಜಿಪಂನಲ್ಲಿ ಕಾಂಗ್ರೆಸ್ ಸದಸ್ಯ ಭೀಮಾನಾಯ್ಕ ಜೆಡಿಎಸ್ನಿಂದ ಶಾಸಕರಾದ ಹಿನ್ನೆಲೆಯಲ್ಲಿ ಸದಸ್ಯ ಬಲ 35ಕ್ಕೆ ಇಳಿದಿದೆ. ಅದರಲ್ಲಿ ಕಾಂಗ್ರೆಸ್ನ 16 ಸದಸ್ಯರಿದ್ದು, ಅದರಲ್ಲಿ ಹಚ್ಚೊಳ್ಳಿ ಕ್ಷೇತ್ರದ ಜೆಡಿಎಸ್ ಸದಸ್ಯೆ ಸರಸ್ವತಿ ಅವರು ಬೆಂಬಲದಿಂದ ಕಾಂಗ್ರೆಸ್ ಬಲ 17ಕ್ಕೆ ಏರಿಕೆಯಾಗಿತ್ತು. ಇನ್ನು ಕೋಗಳಿ ಕ್ಷೇತ್ರದ ಬಿಜೆಪಿ ಸದಸ್ಯೆ ಕರಿಬಸವನಗೌಡರ ರತ್ನಮ್ಮ ಅವರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡು, ಅವಿಶ್ವಾಸದ ಸೂಚನಾ ಪತ್ರಕ್ಕೆ ಸಹಿ ಹಾಕುವ ಮೂಲಕ ಜಿಪಂನಲ್ಲಿ ಕಾಂಗ್ರೆಸ್ ಬಲ 18ಕ್ಕೇರಿದೆ. ಅಲ್ಲದೇ ಸರಳ ಬಹುಮತ ಸಂಖ್ಯೆಯನ್ನು ಪತ್ರದಲ್ಲೇ ತೋರಿಸಿದೆ.
15 ದಿನದಲ್ಲಿ ವಿಶೇಷ ಸಭೆ: ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆ ಕಲಂ 82ಎ ಪ್ರಕಾರ ಜಿಪಂನ 3ನೇ ಒಂದು ಭಾಗ ಸದಸ್ಯರು ಅವಿಶ್ವಾಸ ಸೂಚನಾ ಪತ್ರ ನೀಡಿದರೆ ಜಿಪಂ ಅಧ್ಯಕ್ಷರು ಆ ಕುರಿತು 15 ದಿನಗಳೊಳಗಾಗಿ ವಿಶೇಷ ಸಭೆ ಕರೆದು, ವಿಶ್ವಾಸ ಮತ ತೋರಿಸಬೇಕು. ಒಂದುವೇಳೆ ನಿಗದಿತ ಅವಧಿಯಲ್ಲಿ ವಿಶ್ವಾಸ ಮತ ಸೂಚಿಸದಿದ್ದರೆ ಜಿಪಂ ಸಿಇಒ ಸಭೆ ಕರೆಯಬೇಕಾಗುತ್ತದೆ ಎಂದು ಕಾಯ್ದೆ ಹೇಳುತ್ತದೆ. ಆದರೆ ಈ ಅವಿಶ್ವಾಸ ಸೂಚನಾ ಪತ್ರಕ್ಕೆ ಬಿಎಸ್ಸಾರ್ ಕಾಂಗ್ರೆಸ್ ಯಾವ ರೀತಿ ಪ್ರತಿತಂತ್ರ ಹೂಡುತ್ತದೆ ಎಂಬುದು ಕುತೂಹಲದ ವಿಷಯ. ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಪತ್ರ ನೀಡುವಾಗ ಅಧ್ಯಕ್ಷೆಯನ್ನು ಹೊರತುಪಡಿಸಿ ಬಿಎಸ್ಸಾರ್ ಕಾಂಗ್ರೆಸ್ನ ಯಾವೊಬ್ಬ ಸದಸ್ಯರೂ ಇರಲಿಲ್ಲ.
ಜಿಪಂ ಸಿಇಒ ಮಂಜುನಾಥ್ ನಾಯಕ್ ಮಾತನಾಡಿ, ಜಿಪಂ ಸದಸ್ಯರು ಅಧ್ಯಕ್ಷರಿಗೆ ಅವಿಶ್ವಾಸ ಮಂಡನೆಗೆ ಸೂಚನಾ ಪತ್ರ ನೀಡಿದ್ದಾರೆ. 15 ದಿನಗಳ ಒಳಗಡೆ ವಿಶೇಷ ಸಭೆ ಕರೆಯಬೇಕು, ತಪ್ಪಿದಲ್ಲಿ ಸಿಇಒ ಸಭೆ ಕರೆಯಬೇಕಾಗುತ್ತದೆ ಎಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿ ತಿಳಿಸಲಾಗಿದೆ ಎಂದರು.
ರಾಜ್ಯ ರಾಜಕೀಯದಲ್ಲಿ ಅಪರೇಷನ್ ಕಮಲದ ಮೂಲಕ ಹಲವರನ್ನು ತಮ್ಮತ್ತ ಸೆಳೆದು, ತಮ್ಮ ಹಿಡಿತ ಸಾಧಿಸಿದ್ದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲುಗೆ ಶಾಕ್ ನೀಡಿದ್ದಾರೆ ಕಾಂಗ್ರೆಸ್ ಸದಸ್ಯರು. ಇದೀಗ ಅವಿಶ್ವಾಸ ಗೊತ್ತುವಳಿ ಸೂಚನಾ ಪತ್ರ ನೀಡಿದ್ದು, ರೆಡ್ಡಿ ಬಳಗ ಯಾವ ತಂತ್ರ ಅನುಸರಿಸುತ್ತದೆ ಎಂಬುದನ್ನು ಜಿಲ್ಲೆ ಜನತೆ ಕುತೂಹಲದಿಂದ ಕಾಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

