ಜೈವಿಕ ಇಂಧನ ಸಸ್ಯ: ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 8
ಮುಖ್ಯಮಂತ್ರಿಯವರ ಪರಿಕಲ್ಪನೆಯಂತೆ ರಚಿತಗೊಂಡ ರಾಜ್ಯ ಜೈವಿಕ ಇಂಧನ ನೀತಿ ಇಡೀ ರಾಷ್ಟ್ರದಲ್ಲಿ ಗಮನ ಸೆಳೆದಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ರಮಗಳಾದ ಹಸಿರು ಹೊನ್ನು ಹಾಗೂ ಬರಡು ಬಂಗಾರ ಕಾರ್ಯಕ್ರಮಗಳು ಯಶಸ್ಸು ಕಂಡಿವೆ. ಇನ್ನೂ ಅಧಿಕ ಯಶಸ್ಸು ಹಾಗೂ ಪ್ರಯೋಜನವನ್ನು ರಾಜ್ಯದ ಜನತೆಗೆ ತಲುಪಿಸುವ ದಿಶೆಯಲ್ಲಿ ಸರ್ಕಾರ ಪ್ರಯತ್ನಿಸುತ್ತಿದ್ದು, ಜೈವಿಕ ಇಂಧನ ಜಾಗೃತಿ ಕುರಿತು ವಿಶ್ವದಾದ್ಯಂತ ಆ. 10ರಂದು ಅಂತರಾಷ್ಟ್ರೀಯ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತಿದೆ.
ರಾಜ್ಯದಲ್ಲಿ ಜೈವಿಕ ಇಂಧನ ಬಳಕೆ ಹಾಗೂ ಅಭಿವೃದ್ಧಿಗಾಗಿ ರಾಜ್ಯ ಜೈವಿಕ ಇಂಧನ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ವಿಶೇಷ ತಿಳಿವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಅರಣ್ಯ, ಕೃಷಿ, ಪರಿಸರ ಇಲಾಖೆಗಳ ಸಹಯೋಗದೊಂದಿಗೆ ಈ ಜೈವಿಕ ಇಂಧನ ದಿನವನ್ನು ಹಮ್ಮಿಕೊಳ್ಳಲಾಗಿದೆ. ಜೈವಿಕ ಇಂಧನ ದಿನದ ಅಂಗವಾಗಿ ಸ್ಥಳೀಯ ಜನ ಪ್ರತಿನಿಧಿಗಳನ್ನು ಒಳಗೊಂಡಂತೆ ಜೈವಿಕ ಇಂಧನ ಸಸಿಗಳ ಪ್ರದರ್ಶನ, ಸಸಿಗಳನ್ನು ನೆಡುವುದು, ಕರಪತ್ರ ಹಂಚುವುದು, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಜೈವಿಕ ಇಂಧನ ಉಪಯೋಗ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆ ಏರ್ಪಡಿಸಲಾಗುವುದು.
ಅರಣ್ಯ ಇಲಾಖೆಯಿಂದ ಜೈವಿಕ ಇಂಧನ ಸಸಿಗಳ ವಿತರಣೆ, ಸರ್ಕಾರದ ಹಸಿರು ಹೊನ್ನು ಹಾಗೂ ಬರಡು ಬಂಗಾರ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ರಮದ ಬಗ್ಗೆ ರೈತರಿಗೆ, ಸ್ವಯಂ ಸೇವಾ ಸಂಸ್ಥೆಗಳಿಗೆ, ಮಹಿಳಾ ಸ್ವಯಂ ಸೇವಾ ಸಂಘಗಳಿಗೆ ಹಾಗೂ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ ಕಾರ್ಯಾಗಾರ (ಕನಿಷ್ಠ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದರಂತೆ) ಏರ್ಪಡಿಸಲಾಗುವುದು. ಎಲ್ಲ ಶಾಲಾ ಕಾಲೇಜುಗಳಲ್ಲಿ ಜೈವಿಕ ಇಂಧನ ಕುರಿತು ಚರ್ಚಾಕೂಟ, ಚಿತ್ರಕಲಾ ಶಿಬಿರ, ಕಾರ್ಯಾಗಾರ, ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ವಿವಿಧ ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸೈಕಲ್ ಜಾಥಾ, ಭಿತ್ತಿಚಿತ್ರ, ಮೆರವಣಿಗೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಜೈವಿಕ ಇಂಧನ (ಡೀಸೆಲ್) ಚಾಲಿತ ಬಸ್ನಿಂದ ನಗರ ಪ್ರದಕ್ಷಿಣೆ ಮಾಡುವುದರೊಂದಿಗೆ ಪ್ರಚಾರ ಏರ್ಪಡಿಸಲಾಗುವುದು. ಬ್ಯಾನರ್ಸ್, ಬಂಟಿಂಗ್ಸ್, ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುವುದು. ಜೈವಿಕ ಇಂಧನ ಬಳಕೆ ಹಾಗೂ ಉಪಯೋಗ ಕುರಿತು ವಾರ್ತಾ ಇಲಾಖೆ, ಪತ್ರಿಕೆ, ದೂರದರ್ಶನಗಳ ಮೂಲಕ ಪ್ರಚಾರ ಕಾರ್ಯ ಕೈಗೊಂಡು, ಜಿಲ್ಲಾದ್ಯಂತ ಹಸಿರು ಹೊನ್ನು ಕುರಿತು ಡಿವಿಡಿ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಗಣ್ಯರು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜೈವಿಕ ಇಂಧನ ಸಸ್ಯಗಳ ಕುರಿತು ತಿಳಿವಳಿಕೆ ಮೂಡಿಸಲು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸೈಕಲ್ ಜಾಥಾ, ಭಿತ್ತಿಚಿತ್ರ, ಮೆರವಣಿಗೆ ನಡೆಸಲಾಗುವುದು. ಬ್ಯಾನರ್ಸ್, ಬಂಟಿಂಗ್ಸ್, ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುವುದು. ಜೈವಿಕ ಇಂಧನ ಬಳಕೆ ಹಾಗೂ ಉಪಯೋಗ ಕುರಿತು ವಾರ್ತಾ ಇಲಾಖೆ, ಪತ್ರಿಕೆ, ದೂರದರ್ಶನಗಳ ಮೂಲಕ ಪ್ರಚಾರ ಕಾರ್ಯ ಕೈಗೊಂಡು, ಜಿಲ್ಲಾದ್ಯಂತ ಹಸಿರು ಹೊನ್ನು ಕುರಿತು ಡಿವಿಡಿ ಪ್ರದರ್ಶನ ಹಮ್ಮಿಕೊಳ್ಳಲಾಗುವುದು.
ಎಂ. ಮಂಜುನಾಥ ನಾಯಕ, ಜಿಪಂ ಸಿಇಒ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

