ಸೌಹಾರ್ದಕ್ಕೆ ಮಕ್ಕಳ ಮುನ್ನುಡಿ
ಕೂಡ್ಲಿಗಿ: ಧರ್ಮದ ಹೆಸರಿನಲ್ಲಿ ಭಾವೈಕ್ಯತೆಯ ಬೆಸುಗೆ ತಪ್ಪುವಂತೆ ನೋಡಿಕೊಳ್ಳುವ ಮೂಲಭೂತವಾದಿಗಳೇ ಹೆಚ್ಚಾಗಿ ಇರುವ ಇಂದಿನ ಸಮಾಜದಲ್ಲಿ ಏನೂ ಅರಿಯದ ಹಿಂದೂ ಧರ್ಮದ ಮೂವರು ಮುಗ್ದ ಮಕ್ಕಳು ಸ್ಥಳೀಯ ಈದ್ಗಾ ಮೈದಾನಕ್ಕೆ ತೆರಳಿ ನಿರಂತರ 5 ವರ್ಷಗಳಿಂದ ರಂಜಾನ್ ಪ್ರಾರ್ಥನೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಗೆ ಪಾಠವಾಗಿದ್ದಾರೆ.
ಪಟ್ಟಣದ ನಿವೃತ್ತ ಶಿಕ್ಷಕ ಅಂಗಡಿ ಸಿದ್ದಣ್ಣ ಅವರ ಮೊಮ್ಮಕ್ಕಳು, ವಕೀಲರಾದ ಶಿವರಾಜ ಅವರ ಮಕ್ಕಳಾದ ಅಂಗಡಿ ವಿನಯ್, ಅಂಗಡಿ ವೀರಭದ್ರ, ಅಂಗಡಿ ನಾಗರತ್ನ ಈ ಮೂರು ಮಕ್ಕಳೇ ರಂಜಾನ್ ಹಬ್ಬದಂದು ಪ್ರತಿವರ್ಷ ಪ್ರಾರ್ಥನೆ ಸಲ್ಲಿಸುವ ಭಾವೈಕ್ಯತೆಯ ಮಕ್ಕಳಾಗಿದ್ದಾರೆ. ಈ ಮೂರು ಮಕ್ಕಳು ವೀರಶೈವ ಮತಕ್ಕೆ ಸೇರಿದವರು. ಪ್ರತಿವರ್ಷ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸುತ್ತಿದ್ದು, ಮನೆಯವರು ಮಕ್ಕಳ ಭಕ್ತಿಗೆ ಬೇಡ ಎನ್ನದೇ ಧರ್ಮ ಯಾವುದಾದರೇನು ಭಕ್ತಿ ಅರ್ಪಿಸಲು ಎಂದು ತಿಳಿದು ಮಕ್ಕಳ ಪ್ರಾರ್ಥನೆಗೆ ಸಂತಸ ವ್ಯಕ್ತಪಡಿಸುತ್ತಾರೆ.
ಇಬ್ಬರು ಬಾಲಕರು ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರೆ, ಮತ್ತೊಬ್ಬ ಬಾಲಕಿ ಮುಸ್ಲಿಂ ಮಹಿಳೆಯರ ಜತೆ ಪ್ರಾರ್ಥನೆ ಸಲ್ಲಿಸುತ್ತಾಳೆ. ಇವರಿಗೆ ಹಿಂದೂ-ಮುಸ್ಲಿಂ ಎಂಬ ಭೇದ ಈವರೆಗೂ ಹತ್ತಿರಕ್ಕೂ ಸುಳಿದಿಲ್ಲ. ಯಾರದೋ ಒತ್ತಡಕ್ಕೆ ಮಣಿದು ಪ್ರಾರ್ಥನೆ ಮಾಡುತ್ತಿಲ್ಲ. ಸ್ವ ಆಸಕ್ತಿಯಿಂದ ಪ್ರತಿವರ್ಷ ರಂಜಾನ್ ಪ್ರಾರ್ಥನೆಯಲ್ಲಿ ತಪ್ಪದೇ ಹಾಜರಿರುತ್ತಾರೆ. ಇದನ್ನು ಕಂಡವರು ಇವರ ಆಸಕ್ತಿಗೆ ಮಾರು ಹೋಗುತ್ತಾರೆ. ಈ ಮಕ್ಕಳ ಕುಟುಂಬದವರ ಭಾವೈಕ್ಯತೆ ಮನೋಭಾವನೆ ಇಂದಿಗೂ ಇತರರಿಗೆ ಪ್ರೇರಣೆ.
ಹಿಂದೂ, ಮುಸ್ಲಿಂ ಭಾವೈಕ್ಯತೆ: ಪಟ್ಟಣದ ಅಂಗಡೇರ ಓಣಿಯಲ್ಲಿ ಬಹುತೇಕ ವೀರಶೈವ ಲಿಂಗಾಯತ ಕುಟುಂಬಗಳೇ ಇದ್ದು, ಈ ಓಣಿಯಲ್ಲಿ ಬಳೆ ವ್ಯಾಪಾರ ಮಾಡುವ ರಹಿಮತ್ವುಲ್ಲಾ, ಬಟ್ಟೆ ವ್ಯಾಪಾರ ಮಾಡುವ ನಬೀಸಾಬ್ ಕುಟುಂಬದವರೂ ಮಾತ್ರ ಮುಸ್ಲಿಂ ಕುಟುಂಬದವರು. ಮುಸ್ಲಿಂರನ್ನು ಸಹ ಯಾವುದೇ ಬೇಧ, ಭಾವದಿಂದ ಇಲ್ಲಿ ಯಾರೂ ನೋಡುವುದಿಲ್ಲ. ಪ್ರತ್ಯೇಕತೆಯ ಮಾತು ಯಾರಲ್ಲೂ ಸುಳಿದಿಲ್ಲ. ಒಂದೇ ಕುಟಂಬದವರೆನ್ನುವ ಭಾವನೆ ಎಲ್ಲರಲ್ಲೂ ಇದೆ. ಇವರು ಸಹ ಪ್ರತಿವರ್ಷ ಮೊರಬದಲ್ಲಿ ನಡೆಯುವ ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಹಿಂದೂಗಳೊಳಗೂಡಿ ಭಕ್ತಿ ಅರ್ಪಿಸುತ್ತಾರೆ. ಇದರಿಂದ ಈ ಓಣಿಯಲ್ಲಿ ಧಾರ್ಮಿಕ ಸಹಿಷ್ಣುತೆ ಮನೆ ಮಾಡಿದೆ.
ಹಿಂದೂ, ಮುಸ್ಲಿಂರ ಯಾವುದೇ ಹಬ್ಬ ಹರಿದಿನಗಳು ನಡೆದರು ಈ ಓಣಿಯಲ್ಲಿ ಎಲ್ಲರು ಒಂದೇ ಎಂಬ ಭಾವನೆಯಿಂದ ಹಬ್ಬದ ಸಡಗರದಲ್ಲಿ ಬೆರೆಯುತ್ತಾರೆ. ಇಂತಹ ವಿಶೇಷ ಸಂದರ್ಭಗಳಲ್ಲಿ ಪರಸ್ಪರ ಅಡುಗೆ ತಯಾರಿಕೆಯಲ್ಲಿ ಪಾಲ್ಗೊಂಡು ಹಬ್ಬ ಆಚರಿಸುತ್ತಾರೆ. ಧರ್ಮ, ಧರ್ಮಗಳ ಮದ್ಯೆ ಕಂದಕಗಳೇ ನಿರ್ಮಿಸುವ ಇಂದಿನ ದಿನಗಳಲ್ಲಿ ಮಕ್ಕಳು ಕೋಮು ಸೌಹಾರ್ದತೆಯ ಪಾಠ ಮಾಡುತ್ತಿರುವುದು ಮಾತ್ರ ಅಚ್ಚರಿ ಮೂಡಿಸುತ್ತದೆ.
ಪ್ರತಿವರ್ಷದ ರಂಜಾನ್ ಹಬ್ಬದಲ್ಲಿ ನಮ್ಮ ಮನೆಯ ಮಕ್ಕಳು ಬೆಳಗ್ಗೆಯೇ ಸ್ವಯಂ ಪ್ರೇರಣೆಯಿಂದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆಯಲ್ಲಿ ತೊಡುಗುತ್ತಾರೆ. ಇಂತ ಬಾಂಧವ್ಯಕ್ಕೆ ನಮಗೂ ಸಂತಸವಿದೆ. ಮಕ್ಕಳಿಗೆ ತೆರಳುವಂತೆ ಯಾರು ಒತ್ತಡ ಹೇರಿಲ್ಲ. ಕಳೆದ ಐದು ವರ್ಷಗಳಿಂದ ಅವರು ಪ್ರಾರ್ಥನೆಗೆ ಹೋಗುತ್ತಿದ್ದಾರೆ.
- ಅಂಗಡಿ ವೀರೇಶ್, ಬಾಲಕರ ಚಿಕ್ಕಪ್ಪ
ನಾವು ಮುಸ್ಲಿಂ ಆದರೂ ನಮ್ಮ ಕುಟುಂಬದವರು ಸಮೀಪದ ಮೊರಬದ ವೀರಭದ್ರೇಶ್ವರ ಸ್ವಾಮಿ ರಥೋತ್ಸವಕ್ಕೆ ಹೋಗಿ ದೇವರ ದರ್ಶನ ಪಡೆಯುತ್ತೇವೆ. ನಮ್ಮ ಓಣಿಯಲ್ಲಿರುವ ಹಿಂದೂಗಳ ಜತೆಗೆ ಎಲ್ಲ ಹಿಂದೂ ಹಬ್ಬ ಹರಿದಿನಗಳನ್ನು ಆಚರಿಸುತ್ತೇವೆ. ಎಲ್ಲರೊಂದಿಗೂ ಒಟ್ಟಾಗಿ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದೇವೆ.
- ನಬೀಸಾಬ್, ಬಟ್ಟೆ ವ್ಯಾಪಾರಿ
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

