ಇಂದು ಕರತೇಜ ದರ್ಪಣ ಗ್ರಂಥ ಬಿಡುಗಡೆ
ಬಳ್ಳಾರಿ: ಸಂಡೂರಿನ ಶ್ರೀ ಪ್ರಭುದೇವ ಸಂಸ್ಥಾನ ವಿರಕ್ತಮಠದ ವತಿಯಿಂದ ಕರತೇಜ ದರ್ಪಣ ಗ್ರಂಥ ಹಾಗೂ ಭಕ್ತಿ ನಿನಾದ ಸಿಡಿ ಬಿಡುಗಡೆ ಸಮಾರಂಭ ಹಾಗೂ ಚೇಳ್ಳಗುರ್ಕಿ ವಾಸ ಶ್ರೀ ಎರ್ರಿತಾತ ನಾಟಕ ಪ್ರದರ್ಶನ ಕಾರ್ಯಕ್ರಮ ಆ. 10ರ ಶನಿವಾರ ಸಂಜೆ 5.30ಕ್ಕೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಸಂಡೂರಿನ ವಿರಕ್ತಮಠದ ಪ್ರಭುಸ್ವಾಮಿಗಳು, ಹರಿಹರದ ಪಂಚಮಸಾಲಿ ಜಗದ್ಗುರು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕಾಪನಹಳ್ಳಿಯ ದಕ್ಷಿಣಕಾಶಿ ಪೀಠಾಧ್ಯಕ್ಷ ಸ್ವತಂತ್ರ ಬಸವಲಿಂಗ ಶಿವಯೋಗಿಗಳು, ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಶಿವಲಿಂಗ ಸ್ವಾಮಿ ಮಠದ ಡಾ. ಚೆನ್ನಬಸವರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಕಾರ್ಯಕ್ರಮದ ಅಧ್ಯಕ್ಷೆತ ವಹಿಸಲಿದ್ದಾರೆ. ಸಾಹಿತಿ ಡಾ. ಮನು ಬಳಿಗಾರ ಅವರು ಕರತೇಜ ದರ್ಪಣ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ನಿಕಟಪೂರ್ವ ಕಸಾಪದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಪುಸ್ತಕ ರಚಿಸಿದ್ದಾರೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೇಣಿ ಬಸಪ್ಪ ಅವರು ಗ್ರಂಥ ದಸೋಹಿಗಳಾಗಿದ್ದಾರೆ. ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಂಜಯ್ ಮಕಲ್ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಮಾಜಿ ಸಂಸದ ಕೋಳೂರು ಬಸವನಗೌಡ ಅವರು ಭಕ್ತಿ ನಿನಾದ ಸಿಡಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಭೀಮಾನಾಯ್ಕ ಅವರು ವೆಬ್ಸೈಟ್ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್ ಸೇರಿದಂತೆ ಇತರರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಗಾರ್ಡನ್ ಬ್ರೌನ್ ಪ್ರಶಸ್ತಿ ವಿಜೇತೆ ಅಶ್ವಿನಿ ಅಂಗಡಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂದಿ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಸ್ವರ ಸ್ಪಂದನ ಆಡಿಯೋ ಸಂಸ್ಥೆಯ ಕೆ. ವಸಂತಕುಮಾರ್, ಕವಿತಾ ಅವರಿಂದ ರಾಗ ಸಂಯೋಜನೆ ಮತ್ತು ಗಾಯನ ಕಾರ್ಯಕ್ರಮ ನಡೆಯಲಿದೆ. ಎಸ್ಬಿಐ ಅಧಿಕಾರಿ ಕೆ. ಜಗದೀಶ್ ಅವರು ರಚಿಸಿ, ನಿರ್ದೇಶಿಸಿದ ಚೇಳ್ಳಗುರ್ಕಿ ವಾಸ ಶ್ರೀ ಎರ್ರಿತಾತ ನಾಟಕ ಪ್ರದರ್ಶನ ನಡೆಯಲಿದೆ.
ಪುರಾಣ ಪ್ರವಚನ
ಕೊಟ್ಟೂರು: ಸಮೀಪದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತ ನಡೆಯಲಿರುವ ಲಿಂಗೈಕ್ಯ ಜಗದ್ಗುರು ಸಿದ್ಧಲಿಂಗ ಭಗವತ್ಪಾದರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗರಾಜ ದೇಶೀಕೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು. ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯ ಶ್ರೀ, ಪುರಾಣ ಪ್ರವಚನಕಾರ ವೇ.ಮೂ. ಪಂಚಾಕ್ಷರ ಶಾಸ್ತ್ರಿಗಳು, ವಾಗೀಶ್ವರಯ್ಯ, ಸಂಗೀತಕಾರ ಶಿವಕುಮಾರಸ್ವಾಮಿ, ಪೀಠದ ವ್ಯವಸ್ಥಾಪಕ ಲಿಂಗಶೆಟ್ಟಿ ಇತರರಿದ್ದರು.
ಹೊಟ್ಟೆನೋವು: ವ್ಯಕ್ತಿ ಆತ್ಮಹತ್ಯೆ
ಬಳ್ಳಾರಿ: ಹೊಟ್ಟೆನೋವಿನ ಬಾಧೆ ತಾಳಲಾರದೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಕೊಳಗಲ್ ಗ್ರಾಮದ ಕಲಾವಿದ ಸಾರಥಿ ಈರಣ್ಣ (60) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಜು. 31ರಂದು ಹೊಟ್ಟೆನೋವು ಹೆಚ್ಚಾಗಿದ್ದರಿಂದ ಮನೆಯವರು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಕಲಾಂ ವೃತ್ತ ಅನಾವರಣ
ಹೂವಿನಹಡಗಲಿ: ಪಟ್ಟಣದಲ್ಲಿ ಶುಕ್ರವಾರ ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನಕ್ಕೆ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆಗೆ ಆಗಮಿಸಿದ್ದ ಸಂದರ್ಭ ಇಲ್ಲಿನ ಎಪಿಎಂಸಿ ಬಳಿಯ ವೃತ್ತಕ್ಕೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂರವರ ವೃತ್ತ ನಾಮಕರಣ ಫಲಕವನ್ನು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅನಾವರಣಗೊಳಿಸಿದರು. ಈ ಸಂದರ್ಭ ಅಂಜುಮಾನ್ ಕಮಿಟಿ ಅಧ್ಯಕ್ಷ ಸಿ. ಚಾಂದ್ಸಾಬ್, ಎಪಿಎಂಸಿ ರಾಜ್ಯ ಮಂಡಳಿ ಸದಸ್ಯ ಹಾಗೂ ಅಧ್ಯಕ್ಷ, ವಾರದ್ ಗೌಸ್ ಮೊಹಿದ್ದೀನ್, ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಾಹುಬಲಿ ಸಿ. ಪಾಟೀಲ್, ಮುಖಂಡ ಅರವಳ್ಳಿ ವೀರಣ್ಣ ಇದ್ದರು.
ಪ್ರಬಂಧ ಸ್ಪರ್ಧೆ
ಕೂಡ್ಲಿಗಿ: ತಾಲೂಕಿನ ಚಿಕ್ಕೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಎಂ.ಬಿ. ಅಯ್ಯನಹಳ್ಳಿ ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳ ಮತ್ತು ಶಿಕ್ಷಕರಿಗೆ ದೇಶಪ್ರೇಮಿ ಚಂದ್ರಶೇಖರ್ ಅಜಾದ್ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯನ್ನು ಸಿಆರ್ಪಿ ಕೆ. ಕರಿವೀರಾಚಾರಿ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಬಿ. ಏಕಾಂತಪ್ಪ, ಎಸ್ಡಿಎಂಸಿ ಅಧ್ಯಕ್ಷ ಜಿ. ಮಂಜುನಾಥ, ವಿವಿಧ ಶಾಲೆಗಳ ಶಿಕ್ಷಕರು ಇದ್ದರು. ಕ್ಲಸ್ಟರ್ ವ್ಯಾಪ್ತಿಯ 18ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಾಹನ ಡಿಕ್ಕಿ: ಮಹಿಳೆ ಸಾವು
ಬಳ್ಳಾರಿ: ಬಳ್ಳಾರಿ ಆಲೂರು ರಸ್ತೆಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಮಹಿಳೋರ್ವಳು ಸಾವನ್ನಪ್ಪಿದ ಘಟನೆ ಆ. 7ರ ರಾತ್ರಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ಗುರುತು ಪತ್ತೆಯಾಗಿಲ್ಲ, ರಾಜ್ಯ ಹೆದ್ದಾರಿಯಲ್ಲಿ 55 ವರ್ಷದ ಹೆಂಗಸಿನ ಶವವು ಬೋರಲಾಗಿ ಬಿದಿದ್ದು, ಮೈಮೇಲೆ ಯಾವುದೇ ಬಟ್ಟೆಗಳಿಲ್ಲ. ಮೃತಳು 5.2 ಅಡಿ ಎತ್ತರ, ಗೋದಿಬಣ್ಣ, 3 ಇಂಚು ಉದ್ದನೆಯ ಬಿಳಿ ಕೂದಲು, ದುಂಡನೆಯ ಮುಖ ಇದ್ದು, ಕೈಯಲ್ಲಿ ಹಿತ್ತಾಳೆ ಬಣ್ಣದ ಬಳೆಗಳು ಇವೆ, ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ
ಕೂಡ್ಲಿಗಿ: ಕರವೇ ತಾಲೂಕು ಘಟಕದಿಂದ ಪಟ್ಟಣದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಆ. 12ರ ಬೆಳಗ್ಗೆ 10.30ಕ್ಕೆ ಪ್ರೌಢಶಾಲೆ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ದೇಶಭಕ್ತಿಗೀತೆ, ಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಭಾಗವಹಿಸಲಿಚ್ಛಿಸುವ ಶಾಲಾ ತಂಡಗಳು ಆ. 11ರೊಳಗೆ ಹೆಸರು ನೋಂದಾಯಿಸುವಂತೆ ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ-9591235253, 9663598988 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಹಗರಿಬೊಮ್ಮನಹಳ್ಳಿ: ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ನೆಲ್ಕುದ್ರಿ ಚಂದ್ರಪ್ಪ,ಪ್ರಧಾನ ಕಾರ್ಯದರ್ಶಿಯಾಗಿ ಚಿಂತ್ರಪಳ್ಳಿ ಗಂಗಾಧರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿಕಟಪೂರ್ವ ಅಧ್ಯಕ್ಷ ಮೈಲಾರಪ್ಪ ಅಧ್ಯಕ್ಷತೆಯಲ್ಲಿ ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಿಗೇನಹಳ್ಳಿ ಮಾರುತೇಪ್ಪ ಗೌರವಾಧ್ಯಕ್ಷ, ಸಿ.ಎಂ. ರಾಮಣ್ಣ, ಸೊನ್ನದ ಮಹೇಶ ಉಪಾಧ್ಯಕ್ಷ, ಡಾಬಾ ರಾಮಣ್ಣ ಸಹ ಕಾರ್ಯದರ್ಶಿ, ಕೊಗಳಿ ಮಹಾಂತೇಶ ಸಂಘಟನಾ ಕಾರ್ಯದರ್ಶಿ, ಆರ್. ವೆಂಕಟೇಶ್ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು.
ಕನಕ ಯುವ ಸೇನೆಗೆ ಆಯ್ಕೆ: ಇದೇ ಸಂದವೇಳೆ ತಾಲೂಕು ಕನಕ ಯುವ ಸೇನೆಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕಿನ ಬ್ಯಾಲಾಳು ಗ್ರಾಮದ ಕೆ. ದೊಡ್ಡಬಸಪ್ಪ ಅಧ್ಯಕ್ಷ ಹಾಗೂ ಕೊಗಳಿ ಸಿದ್ದಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಕೆ. ಪರುಶುರಾಮ ಗೌರವಾಧ್ಯಕ್ಷ, ಬಿ.ಕೆ. ಬಸವರಾಜ, ಜಿ. ಕರಿಬಸಪ್ಪಉಪಾಧ್ಯಕ್ಷ, ಭೀಮಪ್ಪ ಸಹ ಕಾರ್ಯದರ್ಶಿ, ಐ. ಲಕ್ಷ್ಮಣ್ಣ ಸಂಘಟನಾ ಕಾರ್ಯದರ್ಶಿ, ಯಲ್ಲಪ್ಪ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಮಕ್ಕಳಿಗೆ ಸಮವಸ್ತ್ರ ವಿತರಣೆ
ಬಳ್ಳಾರಿ: ನಗರದ ರೋಟರಿ ಕ್ಲಬ್ ಆಫ್ ಕಂಟೋನ್ಮೆಂಟ್ದಿಂದ ಇಲ್ಲಿನ ಕಿಂಗ್ ಆಫ್ ಕಿಂಗ್ಸ್ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಶಾಸಕ ಅನಿಲ್ ಲಾಡ್ ಉಚಿತ ಸಮವಸ್ತ್ರ ವಿತರಿಸಿದರು. ಸಮವಸ್ತ್ರ ದಾನಿ ಪಿ. ಗುರು ಮ್ಯಾಥ್ಯೂವ್ಸ್, ರೋಟರಿ ಕ್ಲಬ್ ಅಧ್ಯಕ್ಷ ಪಿ. ಸುಬಿ ಮ್ಯಾಥಿವ್, ಕಾರ್ಯದರ್ಶಿ ಜಿ. ರಾಮು, ಖಜಾಂಚಿ ರಾಮಕೃಷ್ಣ, ಸದಸ್ಯರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಬ್ರಾಹ್ಮಣ ನೌಕರರಿಗೆ ಸನ್ಮಾನ
ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಚುನಾವಣೆಯಲ್ಲಿ ಆಯ್ಕೆಯಾದ ಬ್ರಾಹ್ಮಣ ಸಮಾಜದ ನೌಕರರನ್ನು ಬ್ರಾಹ್ಮಣ ಸಂಘರ್ಷ ಸಮಿತಿಯಿಂದ ಸನ್ಮಾನಿಸಲಾಯಿತು. ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಂದಾಯ ಇಲಾಖೆಯ ವೈ. ವಸುದೇಂದ್ರರಾವ್, ವಾಣಿಜ್ಯ ತೆರಿಗೆ ಇಲಾಖೆಯ ಶ್ರೀನಿವಾಸರಾವ್, ಅರಣ್ಯ ಇಲಾಖೆಯ ಸಿ. ನಾಗರಾಜ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಂ.ವಿ. ಮುರಳಿಧರ್, ಪಂಚಾಯತ್ ತಾಂತ್ರಿಕ ಇಲಾಖೆಯ ಸಿ. ಸುದೀಂದ್ರ ಮತ್ತು ವಾರ್ತಾ ಇಲಾಖೆಯ ಸುರೇಶ್ಬಾಬು ಅವರನ್ನು ಸನ್ಮಾನಿಸಲಾಯಿತು. ಹಿರಿಯ ನ್ಯಾಯವಾದಿ ಮಹೇಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಸಂಘರ್ಷ ಸಮಿತಿ ಅಧ್ಯಕ್ಷ ಡಾ. ರಾಧಕೃಷ್ಣ, ಶ್ರೀನಿವಾಸ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮೂರ್ತಿ, ಕೆ.ಎಸ್. ಗುರುರಾಜ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

