ಬಳ್ಳಾರಿ

ಬಾಟಲಿ ಹಾಲಿಗಿಂತ ಸ್ತನ್ಯಪಾನ ಅತಿಮುಖ್ಯ

Published On :

ಹಗರಿಬೊಮ್ಮನಹಳ್ಳಿ: ಹಳೇ ಹಗರಿಬೊಮ್ಮನಹಳ್ಳಿ ಜೆ.ಜೆ. ನಗರದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು ವಿತರಣೆ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಉಪಾಧ್ಯಕ್ಷೆ ಕುರುಬರ ನಾಗರತ್ನಾ, ಸ್ತನ್ಯಪಾನದ ಮಹತ್ವ ಅರಿತುಕೊಳ್ಳುವುದನ್ನು ತಾಯಂದಿರು ಮರೆತು, ಮಕ್ಕಳಿಗೆ ಬಾಟಲಿ ಹಾಲು ನೀಡುತ್ತಿದ್ದಾರೆ. ಇದು ಸರಿಯಲ್ಲ.  ಮಕ್ಕಳು ಉತ್ತಮ ಬೆಳವಣಿಗೆಯಾಗುವವರೆಗೂ ತಾಯಂದಿರು ಸ್ತನ್ಯಪಾನ ನಿಲ್ಲಿಸಬಾರದು ಎಂದು ಮನವಿ ಮಾಡಿಕೊಂಡರು.
ಆರೋಗ್ಯ ಇಲಾಖೆಯ ಬಿಎಚ್‌ಇಒ ಯಮುನಮ್ಮ ಮಾತನಾಡಿ, ತಾಯಂದಿರು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತಪ್ಪದೆ ಭೇಟಿ ಮಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆದು ನಿಮ್ಮ ಮಕ್ಕಳನ್ನು ಪೋಷಿಸಬೇಕು. ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಬೇಕೆಂದು ತಿಳಿಸಿದರು.
ಹಗರಿಬೊಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಜಾಹೀದಾ ಬೇಗಂ, ಪೋಷಕರಾದ ಸೊನ್ನದ ಬಸಮ್ಮ, ಹನುಮಕ್ಕ, ಲತಾ, ಫರ್ವೀನ್, ಆರೋಗ್ಯ ಸಹಾಯಕಿ ಜಿ. ಮಾಬುನ್ನಿ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ, ಸಹಾಯಕಿ ಕಾಳಮ್ಮ, ಆಶಾ ಸಹಾಯಕಿ ಎಂ. ಶಂಕ್ರಮ್ಮ ಹಾಗೂ ಸಲಹಾ ಸಮಿತಿ ಸದಸ್ಯರಿದ್ದರು.
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸಾವು
ಹೊಸಪೇಟೆ: ಮೈನ್ಸ್ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಸವಾರ ತೀವ್ರ ಗಾಯಗೊಂಡ ಘಟನೆ ನಗರದ ಬಳ್ಳಾರಿ ರಸ್ತೆಯ ಹೊರವಲಯದಲ್ಲಿ ಶನಿವಾರ ಸಂಜೆ ನಡೆದಿದೆ. ಬೈಕ್ ಸವಾರ ಕೊಟ್ಟೂರು ನಿವಾಸಿ ಇರ್ಸಾದ್ (20) ಮೃತಪಟ್ಟಿದ್ದು, ಸನ್ಮಾನ್ (19) ತೀವ್ರ ಗಾಯಗೊಂಡಿದ್ದಾರೆ. ಬೈಕ್ ಸವಾರರಿಬ್ಬರೂ ಹೊಸಪೇಟೆಯಿಂದ ಬಳ್ಳಾರಿಗೆ ಕಡೆಗೆ ಹೋಗುವಾಗ ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುವ ಮೈನ್ಸ್ ಟಿಪ್ಪರ್ ಡಿಕ್ಕಿ ಹೊಡೆದಿದೆ. ಗಾಯಗೊಂಡ ಸನ್ಮಾನ್ ಅವರಿಗೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈನ್ಸ್ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕರ ತತ್ವ ಪ್ರಚುರಪಡಿಸಿ
ಹಗರಿಬೊಮ್ಮನಹಳ್ಳಿ: ಕನಕದಾಸರ ತತ್ವ, ಆದರ್ಶಗಳನ್ನು ಮನೆ ಮನೆಗೂ ಪ್ರಚುರಪಡಿಸಿ ಜಗತ್ತಿಗೆ ಕನಕವಾಣಿ ಸಂದೇಶವನ್ನು ಬಿತ್ತುವ ಮೂಲಕ ಕನಕದಾಸರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಮಾಜವನ್ನು ಪ್ರಬಲ ಸಂಘಟನೆಯನ್ನಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು ಎಂದು ಕುರುಬ ಸಮಾಜದ ಹಿರಿಯ ಮುಖಂಡ ಜಳಕಿ ಗುರುಬಸಪ್ಪ ಸಮಾಜ ಬಂಧುಗಳಿಗೆ ತಿಳಿಸಿದರು. ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ತಾಲೂಕು ಕುರುಬ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಕನಕ ಸಂಸ್ಕೃತಿ ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಮಾನವ ನಾಗರಿಕತೆ ಸಂಸ್ಕೃತಿಯಾಗಿದೆ. ಆಧುನಿಕ ಸಮಾಜದಲ್ಲಿ ಈ ಸಮಾಜ ಬಹು ಹಿಂದುಳಿದಿದ್ದು, ಲಭ್ಯ ಇರುವ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜವನ್ನು ಪ್ರಗತಿಪಥದತ್ತ ಕೊಂಡೊಯ್ಯುವುದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿ ಎಂದರು. ಅನಕ್ಷರತೆ ಮತ್ತು ಬಡತನ ನಮ್ಮ ಸಮಾಜದ ಬೆಳವಣಿಗೆಗೆ ಅಡ್ಡಿಯಾಗಿದೆ. ಮೊದಲು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ಅಕ್ಷರವಂತರನ್ನಾಗಿಸುವ ಜತೆಗೆ ಉನ್ನತ ಶಿಕ್ಷಣವನ್ನು ಅವರಿಗೆ ಕೊಡಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ಬಡತನ ತಾನಾಗಿಯೇ ನಿರ್ಮೂಲನೆಯಾಗುತ್ತದೆ. ಅನಕ್ಷರತೆ, ಬಡತನ ನಿವಾರಿಸಲು ಎಲ್ಲರೂ ಶ್ರಮಿಸಬೇಕೆಂದರು. ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಟಿ. ಪ್ರಭಾಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಕುರುಬರ ಸಂಘದ ರಾಜ್ಯ ನಿರ್ದೇಶಕ ಜಿ. ಅಜ್ಜಯ್ಯ, ಕಾಂಗ್ರೆಸ್ ಮುಖಂಡ ಪಿ. ಛತ್ರಪ್ಪ, ವಿಎಂಎಸ್ ರಾಮು, ಕೊಗಳಿ ಹನುಮಂತಪ್ಪ, ಕುದುರಿ ಬಸವರಾಜ, ಸಿ.ಎಂ. ರಾಮಣ್ಣ, ಚೌಟಗಿ ಕರಿಯಪ್ಪ, ಮಾಲ್ವಿ ಚನ್ನಬಸಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಇದ್ದರು.
ವಿವಿ ಜಗಳ: ಖಂಡನೆ
ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಲಪತಿ ಮತ್ತು ಕುಲಸಚಿವರ ನಡುವೆ ನಡೆಯುತ್ತಿರುವ ಮಾತಿನ ತಿಕ್ಕಾಟವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎಂ. ವೆಂಕಟೇಶ್ ಬಣ)ಯ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ. ವಿಶ್ವನಾಥ್, ವಿಎಸ್‌ಕೆ ವಿವಿಯಲ್ಲಿ ಪ್ರಾರಂಭದಲ್ಲೇ ಅಕ್ರಮ, ಅವ್ಯವಹಾರ, ಗಲಾಟೆಗಳಂತಹ ಆರೋಪಗಳು ಕೇಳಿ ಬರುತ್ತಿರುವುದು ನೋವಿನ ಸಂಗತಿಯಾಗಿದ್ದು, ಕೋರ್ಟ್‌ನಲ್ಲಿರುವ ವರ್ಗಾವಣೆಗೊಂಡ ಪ್ರಾಧ್ಯಾಪಕರೊಬ್ಬರ ಮರು ನೇಮಕಾತಿ ಹಿನ್ನೆಲೆಯಲ್ಲಿ ಉಂಟಾಗಿರುವ ಕುಲಪತಿ-ಕುಲಸಚಿವರ ಕಚ್ಚಾಟಕ್ಕೆ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಬೇಕೇ ವಿನಃ ಈ ರೀತಿ ಆಂತರಿಕ ವಿಷಯಗಳನ್ನೆಲ್ಲಾ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದು ವಿವಿಯ ಗೌರವ ಘನತೆಗೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದು ಸಮಿತಿಯ ಗೌರವಾಧ್ಯಕ್ಷ ಗುಜರಿ ಬಸವರಾಜ್, ಅಧ್ಯಕ್ಷ ಹುಸೇನಪ್ಪ, ಕಾನೂನು ಸಲಹೆಗಾರ ರಾಘವೇಂದ್ರ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.