ಬಳ್ಳಾರಿ

ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ

Published On :

ಬಳ್ಳಾರಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ 69ನೇ ಜನ್ಮ ದಿನಾಚರಣೆ ಅಂಗವಾಗಿ ಕಳೆದ 22 ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪಕ್ಷದ ಜಿಲ್ಲಾ ಕಛೇರಿಯಿಂದ ಬೀಳ್ಕೊಟ್ಟರು.
ಈ ಜ್ಯೋತಿಯಾತ್ರೆಗೆ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಘೋಷಣೆಯ (ಕ್ವಿಟ್ ಇಂಡಿಯಾ ಚಳವಳಿ) ದಿನವಾದ ಆಗಸ್ಟ್ 9ರಂದು ತಮಿಳುನಾಡಿನ ಪೆರಂಬೂರುನಿಂದ ಆರಂಭವಾದ ಜ್ಯೋತಿಯಾತ್ರೆಗೆ ತಮಿಳುನಾಡಿನ ಕಾಂಗ್ರೆಸ್ ಹಿರಿಯ ಮುಖಂಡರು ಚಾಲನೆ ನೀಡಿದರು. ಅನಂತರ ಶನಿವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಯಾತ್ರೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ  ಬರಮಾಡಿಕೊಂಡರು.
ಶನಿವಾರ ರಾತ್ರಿ 10ಕ್ಕೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಈ ಯಾತ್ರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿ ಬರಮಾಡಿಕೊಂಡರು. ಅನಂತರ ಭಾನುವಾರ ಬೆಳಗ್ಗೆ ಮಾಜಿ ಸಂಸದ ಕೋಳೂರು ಬಸವನಗೌಡ ಮತ್ತಿತರರು ಜ್ಯೋತಿಯನ್ನು ಬೀಳ್ಕೊಟ್ಟರು.
ಅನಂತರ ಈ ಯಾತ್ರೆಯು ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಹುಬ್ಬಳ್ಳಿ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಹರಿಯಾಣ ಮೂಲಕ ಆ.19ಕ್ಕೆ ನವದೆಹಲಿ ತಲುಪಲಿದ್ದು, ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ ಜ್ಯೋತಿಯನ್ನು ಬರಮಾಡಿಕೊಳ್ಳಲಿದ್ದಾರೆ.
ಆ. 20ರಂದು ನವದೆಹಲಿಯ ರಾಜೀವ್‌ಗಾಂಧಿ ವೀರಭೂಮಿಗೆ ತೆರಳಲಿದೆ. ಈ ಯಾತ್ರೆಯನ್ನು ರಾಹುಲ್‌ಗಾಂಧಿ, ಪ್ರಿಯಾಂಕಗಾಂಧಿ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು ಆಹ್ವಾನಿಸಲಿದ್ದಾರೆ. ಅನಂತರ ಯಾತ್ರೆ ಕೊನೆಗೊಳ್ಳಲಿದೆ.
ಇದಕ್ಕೂ ಮುನ್ನ ನಗರದಲ್ಲಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪ್ರಕಾಶಂ ಮಾತನಾಡಿ, ಭಾರತದ ಅಖಂಡತೆ, ಏಕತೆ, ಸಮಗ್ರತೆ ಕಾಪಾಡುವ ಜೊತೆಗೆ ಭಯೋತ್ಪಾದನೆ ಹಾಗೂ ಉಗ್ರಗಾಮಿಗಳ ವಿರುದ್ಧದ ಸಂದೇಶದ ಯಾತ್ರೆ ಇದಾಗಿದೆ. ದೇಶದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕಿ, ಭಯೋತ್ಪಾದನೆ ನಿರ್ನಾಮ ಮಾಡುವ ಮೂಲಕ ದೇಶದಲ್ಲಿ ಶಾಂತಿ ಕಾಪಾಡುವ ಸದುದ್ದೇಶದ ಸದಾಶಯದೊಂದಿಗೆ ಸದ್ಭಾವನಾ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭ ಮಾಜಿ ಸಂಸದ ಕೋಳೂರು ಬಸವನಗೌಡ, ಮುಖಂಡರಾದ ಎಲ್. ಮಾರೆಣ್ಣ, ಕಲ್ಲುಕಂಬ ಪಂಪಾಪತಿ, ಕಮಲಾ ಮರಿಸ್ವಾಮಿ, ಅಸುಂಡಿ ಹೊನ್ನೂರಪ್ಪ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಎಚ್. ಅರ್ಜುನ್, ಪಾಲಿಕೆ ಸದಸ್ಯರಾದ ಜಿ. ಶ್ರೀನಿವಾಸ್, ಪರ್ವೀನ್‌ಬಾನು, ಇತರೆ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.