ಬಳ್ಳಾರಿ

ದ್ವಾದಶ ಜ್ಯೋತಿರ್ಲಿಂಗಗಳ ಪ್ರಾಣ ಪ್ರತಿಷ್ಠಾಪನೆ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಆ. 13
ಇಲ್ಲಿಗೆ ಸಮೀಪದ ನಂ. 10 ಮುದ್ದಾಪುರ ಗ್ರಾಮದಲ್ಲಿ ಶ್ರೀ ಶಿವ ದೇವಾಲಯ ಉದ್ಘಾಟನೆ, ದ್ವಾದಶ ಜ್ಯೋತಿರ್ಲಿಂಗಗಳ ಪ್ರಾಣ ಪ್ರತಿಷ್ಠಾಪನೆ, ಶ್ರೀಮದ್ ಉಜ್ಜಿನಿ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಧರ್ಮಸಭೆಯಲ್ಲಿ ಮಾತನಾಡಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಕಟ್ಟೆ ಉಮಾಪತಿ ಮತ್ತು ಕಟ್ಟೆ ಸರೋಜಮ್ಮ ದಂಪತಿ ಒಂದಾಗಿ ನಿರ್ಮಿಸಿರುವ ಶಿವ ದೇವಾಲಯಕ್ಕೆ ಉಮಾ ಮಹೇಶ್ವರ ದೇವಾಲಯವೆಂದು ಹೆಸರನ್ನಿಡಬೇಕು ಎಂದು ತಿಳಿಸಿದರು.
ರಾಜ್ಯ ಜವಳಿ, ಬಂದರು, ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರು, ದೇವಸ್ಥಾನ ಮತ್ತು ಮೂರ್ತಿಗಳ ಪ್ರತಿಷ್ಠಾಪಕ, ಹೊಸಪೇಟೆ ತಾಲೂಕು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಟ್ಟೆ ಉಮಾಪತಿ ಮಾತನಾಡಿದರು. ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಂಪ್ಲಿ ಕಲ್ಮಠ ಅಭಿನವ ಪ್ರಭು ಸ್ವಾಮೀಜಿ, ಹೆಬ್ಬಾಳು ಶಿವಪ್ರಕಾಶ ಶರಣರು ಹಾಗೂ ಬುಕ್ಕಸಾಗರ ವಿಶ್ವಾರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿದರು.
ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಅಧ್ಯಕ್ಷ ಜವಳಿ ಚನ್ನಬಸಪ್ಪ, ಷಾ ಅಸಲ್‌ಚಂದ್ ರಾಂಕ್, ಷಾ. ಗೇವರ್‌ಚಂದ್ ಜೋರಾವರಮಲ್, ಕಮ್ಮವಾರಿ ಸಂಘ ಅಧ್ಯಕ್ಷ ಕೆ. ರಣಧೀರ, ಗುರುರಾಜ ಸೇವಾ ಸಮಿತಿಯ ಜೆ. ಹನುಮಂತಾಚಾರ್, ಬಂಡಾರಿ ಹುಲುಗಪ್ಪ ಅವರನ್ನು ಸನ್ಮಾನಿಸಲಾಯಿತು.
ನಂ.10. ಮುದ್ದಾಪುರ ಗ್ರಾಮದ ನೀಲಮ್ಮ ಮತ್ತು ಬಂಡೇ ಬಸವೇಶ್ವರ ದೇವಸ್ಥಾನದಿಂದ ಶ್ರೀ ಶಿವ ಮತ್ತು ದ್ವಾದಶ ಜ್ಯೋತಿರ್ಲಿಂಗ ದೇವಾಲಯದ ವರೆಗೆ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಅಲಂಕೃತ 16 ಜೋಡಿ ಎತ್ತುಗಳು, ವೀರಗಾಸೆ, ನಂದಿಕೋಲು, ಸುಮಂಗಲೆಯರು ಪಾಲ್ಗೊಂಡಿದ್ದರು. ಕಟ್ಟೆ ದುರುಗಪ್ಪ, ವೈ.ಈರಪ್ಪ, ಟಿ. ಸೋಮಶೇಖರಪ್ಪ, ಟಿ. ಸೋಮನಾಥ, ಟಿ. ಶಂಕರ, ಕಟ್ಟೆ ಮಹಾದೇವ, ಕಟ್ಟೆ ಮಂಜುನಾಥ, ಕಟ್ಟೆ ಸುನಿಲ್ ಕುಮಾರ್ ಭಾಗವಹಿಸಿದ್ದರು. ಕಟ್ಟೆ ಉಮಾಪತಿ ಸ್ವಾಗತಿಸಿದರು. ರಾಗಿ ಶರಣಯ್ಯಸ್ವಾಮಿ ನಿರೂಪಿಸಿದರು. ಜಿ.ಚಂದ್ರಶೇಖರಗೌಡ ವಂದಿಸಿದರು.

ಸಂಭ್ರಮದ ಉಜ್ಜಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
ಹೊಸಪೇಟೆ: ತಾಲೂಕಿನ ಕಮಲಾಪುರ ಗ್ರಾಮದ ಈಶ್ವರ ದೇವಸ್ಥಾನದ 21ನೇ ವಾರ್ಷಿಕೋತ್ಸವ, ಉಜ್ಜಿನಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸುಮಂಗಲಿಯರಿಂದ 108  ಕುಂಭಮೇಳ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಉಜ್ಜಿನಿ ಜಗದ್ಗುರುಗಳನ್ನು ಹೊತ್ತ ಅಡ್ಡಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಿತು. ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ಇರುವ ಈಶ್ವರ ದೇವಸ್ಥಾನದ ಈಶ್ವರ ಲಿಂಗಕ್ಕೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಜ್ಜಿನಿ ಮಹಾಪೀಠದ ಜಗದ್ಗುರು ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಬುಕ್ಕಸಾಗರ ಕ್ಷೇತ್ರದ ಕರಿಸಿದ್ದೇಶ್ವರ ಸಂಸ್ಥಾನ ಮಂಟಪದ ಗುರುಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.