ಬಿಡಿಸಿಸಿ ಬ್ಯಾಂಕ್ಗೆ ರು. 3.15 ಕೋಟಿ ಲಾಭ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 13
ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) 2012-13ನೇ ಸಾಲಿನಲ್ಲಿ ರು. 3.15 ಕೋಟಿ ಲಾಭ ಗಳಿಸಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಎಂ.ಪಿ. ರವೀಂದ್ರ ಹೇಳಿದರು.
ಈ ಕುರಿತು ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2011-12ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸಾಲಮನ್ನಾ ಘೋಷಣೆ ಮಾಡಿದಂತೆ ನಮ್ಮ ಬ್ಯಾಂಕ್ನ ಜಿಲ್ಲೆಯ 138 ವ್ಯವಸಾಯ ಸಹಕಾರ ಸಂಘಗಳಲ್ಲಿ ಸದರಿ ಅವಧಿಯಲ್ಲಿ ಬೆಳೆ ಸಾಲ ಪಡೆದು, 25-7-2012ಕ್ಕೆ ಹೊರಬಾಕಿ ಹೊಂದಿರುವ 37,686 ರೈತ ಸದಸ್ಯರಿಗೆ ರು. 25 ಸಾವಿರ ಬೆಳೆ ಸಾಲದಂತೆ ರು. 82.35 ಕೋಟಿ ಸಾಲಮನ್ನಾ ಸೌಲಭ್ಯ ಪಡೆದಿದ್ದಾರೆ. ರೈತರಿಗೆ ರು. 165 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ಸಾಲಿನಲ್ಲಿ ರು. 450 ಕೋಟಿ ವರೆಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ರೈತರ ಬೆನ್ನೆಲುಬಾಗಿ ಬಿಡಿಸಿಸಿ ಬ್ಯಾಂಕ್ ನಿಲ್ಲುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೃಷಿಗೆ ಹೆಚ್ಚಿನ ಒತ್ತು: ಬಿಡಿಸಿಸಿ ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವ ಹಿನ್ನಲೆಯಲ್ಲಿ ರು. 156.11 ಕೋಟಿ ಕೃಷಿ ಸಾಲ ನೀಡಲಾಗಿದೆ. ರು. 111.68 ಕೋಟಿ ಕೃಷಿಯೇತರ ಚಟುವಟಿಕೆಗೆ ಸಾಲ ನೀಡಲಾಗಿದೆ. ಸ್ವಸಹಾಯ ಗುಂಪುಗಳ ರಚನೆ ಮತ್ತು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಬ್ಯಾಂಕ್ನ ಕೇಂದ್ರ ಕಚೇರಿ ಸೇರಿದಂತೆ ಜಿಲ್ಲೆಯ 24 ಶಾಖೆಗಳಲ್ಲಿ ಗಣಕೀಕರಣ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭವಾಗಲಿದೆ. ಜಿಲ್ಲೆಯ 138 ವ್ಯವಸಾಯ ಸಹಕಾರ ಸಂಘಗಳಿಗೂ ಈ ವ್ಯವಸ್ಥೆ ಕಲ್ಪಿಸಿ, ಗಣಕೀಕರಣ ಮಾಡಿ ಬ್ಯಾಂಕ್ ವಹಿವಾಟು ವಿಸ್ತರಿಸಲಾಗುವುದು ಎಂದರು.
ಅವಧಿ ಇಳಿಕೆ: ಪ್ರಸಕ್ತ ಸಾಲಿನಲ್ಲಿ 1100 ಲಕ್ಷ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ರೈತ ಸಮುದಾಯಕ್ಕೆ ಅಲ್ಪಾವಧಿ, ಮಧ್ಯಾವಧಿ ಸಾಲ ವಿತರಣೆ, ಸ್ವಸಹಾಯ ಹಾಗೂ 100 ಸ್ತ್ರೀಶಕ್ತಿ ಗುಂಪುಗಳ ರಚನೆ ಮಾಡಿ ರು. 100 ಲಕ್ಷ ಹೊಸ ಸಾಲ ವಿತರಣೆ ಯೋಜನೆ ಇದೆ. ಅದೇ ರೀತಿ ಮೊಬೈಲ್ ಬ್ಯಾಂಕ್ ವ್ಯವಸ್ಥೆ ಕಲ್ಪಿಸಿ, ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯಶಸ್ವಿನಿ ಯೋಜನೆಯ ನೋಂದಣಿಗೆ ಎಸ್ಸಿ, ಎಸ್ಟಿಯವರಿಗೆ ಮಾತ್ರ ರು. 10 ಪಾವತಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ನೋಂದಣಿಗೆ 6 ತಿಂಗಳಿಂದ 3 ತಿಂಗಳಿಗೆ ಇಳಿಸಲಾಗಿದೆ. ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯನ್ನು ಸೌಂದರ್ಯೀಕರಣಗೊಳಿಸಿ ಅಧುನಿಕವಾಗಿ ಸಜ್ಜುಗೊಳಿಸಲಾಗುವುದು, ವಾಹನ ನಿಲುಗಡೆ ಸೇರಿದಂತೆ ಉದ್ಯಾನ ನಿರ್ಮಿಸಲಾಗುವುದು ಎಂದರು.
ಕಬ್ಬಿಗೆ ಬೆಂಬಲ ಬೆಲೆ: ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಲು ಕೋರಲಾಗಿದೆ. ಸಕ್ಕರೆ ಸಚಿವರ ಗಮನಕ್ಕೂ ತರಲಾಗಿದೆ. ಬೀದರ್, ಬೆಳಗಾವಿ, ಬಿಜಾಪುರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿಗೆ ದರ ನಿಗದಿ ಮಾಡಿದಂತೆ ಅದೇ ದರವನ್ನು ಇಲ್ಲಿಯೂ ನಿಗದಿ ಮಾಡಬೇಕೆಂದು ಆಗ್ರಹಿಸಲಾಗಿದೆ. ನಗರದ ಚಿತ್ತವಾಡ್ಗಿ ಐಎಸ್ಆರ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ 2 ಲಕ್ಷ ಟನ್ ಮಾತ್ರ. 7 ಲಕ್ಷ ಟನ್ ಕಬ್ಬು ರೈತರು ಬೆಳೆದಿದ್ದಾರೆ. ಉಳಿದ ಕಬ್ಬನ್ನು ಹೊರ ಬೇರೆ ಕಾರ್ಖಾನೆಗೆ ಸಾಗಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ನ ಉಪಾಧ್ಯಕ್ಷ ಡಿ. ಭೋಗಾರೆಡ್ಡಿ, ನಿರ್ದೇಶಕರಾದ ಚೊಕ್ಕಬಸವನಗೌಡ, ಜೆ.ಎಂ. ವೃಷಭೇಂದ್ರಯ್ಯ, ಎ. ವಿರೂಪಾಕ್ಷ ರೆಡ್ಡಿ, ಕೋಳೂರು ಮಲ್ಲಿಕಾರ್ಜುನಗೌಡ, ಭಾತಿ ಚೌಡಪ್ಪ, ಆರ್. ಮಂಜುನಾಥ ಗೌಡ, ಎಂ. ಶಿವಶಂಕರ ಗೌಡ, ಬ್ಯಾಂಕ್ನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಮುನಿಯಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

