ಗಾಂಧಿ ಪ್ರತಿಮೆಗೆ ಒದಗಿದ ದುರ್ಗತಿ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 14
ಪಟ್ಟಣದಲ್ಲೊಂದು ಸ್ಥಳವಿದ್ದು, ಅದು ರಾಷ್ಟ್ರೀಯ ಹಬ್ಬಗಳಂದು ಮಾತ್ರ ಪೂಜ್ಯನೀಯ ತಾಣ, ಉಳಿದೆಲ್ಲ ದಿನಗಳಲ್ಲಿ ಇದು ಸಾರ್ವಜನಿಕರ ಮಲ, ಮೂತ್ರ ವಿಸರ್ಜಿಸುವ ಸ್ಥಳವಾಗಿದೆ.
ಹೌದು, ಈ ದುರ್ಗತಿ ಒದಗಿ ಬಂದಿರುವುದು ಕೊಟ್ಟೂರು ಪಟ್ಟಣದ ಮಹಾತ್ಮಗಾಂಧಿ ಪ್ರತಿಮೆ ಸುತ್ತಲಿನ ಜಾಗಕ್ಕೆ. ಈ ತಾಣವನ್ನು ಸುರಕ್ಷಿತವಾಗಿರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಸ್ಥಳೀಯ ಆಡಳಿತ ಕೈಚೆಲ್ಲಿದ್ದರ ಪರಿಣಾಮ ಇಂದು ಸೋಮಾರಿಗಳು, ದಾರಿಹೋಕರು ಕಾಲ ಕಳೆಯುವ ಕಟ್ಟೆಯಾಗಿ ಮಾರ್ಪಟ್ಟಿದೆ. ಪ್ರತಿಮೆ ಇರುವ ಮುಂಭಾಗದಲ್ಲಿ ದೊಡ್ಡದಾದ ಚರಂಡಿ ಇರುವುದರಿಂದ ಸಾರ್ವಜನಿಕರು ಈ ಸ್ಥಳದ ಪಾವಿತ್ರ್ಯದ ಮಹತ್ವ ಅರಿಯದೆ ಇದನ್ನೆ ಮೂತ್ರ ವಿಸರ್ಜನೆಗೆ ಸೂಕ್ತ ಸ್ಥಳವನ್ನಾಗಿರಿಸಿಕೊಂಡಿದ್ದಾರೆ. ರಾತ್ರಿ ಹೊತ್ತು ಈ ಸ್ಥಳ ಮಲ ವಿಸರ್ಜನೆಗೆ ಬಳಕೆ ಆಗತೊಡಗಿದೆ.
ಮೂರ್ತಿ ಭಗ್ನ: ಮಹಾತ್ಮಗಾಂಧಿ ಪ್ರತಿಮೆಯ ಒಂದೊಂದೇ ಭಾಗಗಳು ಸದ್ಯ ಕಳಚಿಕೊಳ್ಳುತ್ತಿವೆ. ಸ್ಥಳೀಯ ಜನಪ್ರತಿನಿಧಿಗಳು ಇತ್ತ ಕಡೆ ಸಂಬಂಧವಿಲ್ಲದವರಂತೆ ವರ್ತಿಸುತ್ತ ಸಾಗಿದ್ದು, ಬರು ಬರುತ್ತಾ ಗಾಂಧಿ ಪ್ರತಿಮೆ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಆ. 15ರ ಸಮಾರಂಭಕ್ಕಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಯವರು ಪ್ರತಿಮೆಗೆ ಬಣ್ಣ ಬಳಿದು ಶೃಂಗರಿಸಿದೆಯಾದರೂ ಗಾಂಧಿ ಪ್ರತಿಮೆ ಹೊಂದಿದ್ದ ಚಾಳೀಸು, ಊರುಗೋಲು, ಕೈಯಲ್ಲಿ ಹಿಡಿದ ಪುಸ್ತಕ ಮಾಯವಾಗಿವೆ. ಈ ಕುರಿತು ಪ್ರತಿಮೆ ಸುತ್ತಲೂ ಸ್ವಚ್ಛತೆ ಕೈಗೊಂಡ ಸಿಬ್ಬಂದಿಯನ್ನು ವಿಚಾರಿಸಿದರೆ, ಆಗಸ್ಟ್ 15ರ ಬೆಳಗ್ಗೆ ಸಮಾರಂಭದ ಹೊತ್ತಿಗೆ ಚಾಳೀಸು, ಊರುಗೋಲು, ಪುಸ್ತಕ ಅಳವಡಿಸುತ್ತೇವೆ. ಈಗಲೇ ಅಳವಡಿಸಿಬಿಟ್ಟರೆ ಮತ್ತೆ ಕಿಡಿಗೇಡಿಗಳು ಹೊತ್ತೊಯ್ಯುತ್ತಾರೆ ಎಂದು ಉತ್ತರಿಸಿದ್ದು ಪ್ರತಿಮೆಗಿಲ್ಲಿ ಸೂಕ್ತ ರಕ್ಷಣೆ ಇಲ್ಲದಿರುವುದನ್ನು ಸಷ್ಟಪಡಿಸುತ್ತದೆ.
ದೂರಾದ ಕಂಚು: 2010ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರತಿಮೆಯ ಎಡಗೈ ಭಾಗ ಕಿತ್ತು ಹೋಗಿತ್ತು. ಈ ಸಂದರ್ಭದಲ್ಲಿ 'ಕನ್ನಡಪ್ರಭ' ಪ್ರತಿಮೆ ಭಗ್ನಗೊಂಡ ಬಗ್ಗೆ ವರದಿ ಮಾಡಿದ್ದರ ಪರಿಣಾಮ ಎಚ್ಚೆತ್ತ ಅಂದಿನ ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ಮತ್ತು ಶಾಸಕ ಕೆ. ನೇಮಿರಾಜ ನಾಯ್ಕ ಪ್ರತಿಮೆಗೆ ದಕ್ಕೆ ಬರುತ್ತಿರುವುದನ್ನು ತಪ್ಪಿಸಲು ಪ್ರತಿಮೆಯನ್ನು ಕಂಚಿನದನ್ನಾಗಿಸಿ ಪುನರ್ ಪ್ರತಿಷ್ಠಾಪಿಸುವ ನಿರ್ಧಾರ ಕೈಗೊಂಡಿದ್ದರು. ಈ ಕುರಿತು ಸ್ಥಳೀಯ ಪಪಂ ಆಡಳಿತಕ್ಕೆ ತನ್ನ ಅನುದಾನದಲ್ಲಿ ರು. 7 ಲಕ್ಷ ಮೀಸಲಿರಿಸುವಂತೆ ಸೂಚಿಸಿದ್ದರು. ನಂತರದ ದಿನಗಳಲ್ಲಿ ಸರ್ಕಾರದಿಂದ ಮೂರು ಬಾರಿ ಭಾರೀ ಪ್ರಮಾಣದ ಅನುದಾನ ಬಂದರೂ ಗಾಂಧಿ ಪ್ರತಿಮೆಯನ್ನು ಕಂಚಿನದನ್ನಾಗಿಸುವ ಪ್ರಸ್ತಾಪಕ್ಕೆ ಹಣ ಮೀಸಲಿರಿಸುವ ಒಂದೇ ಒಂದು ಮಾತು ಬಾರದಿರುವುದು ದೊಡ್ಡ ದುರಂತ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸುತ್ತಾರೆ.
ಮಹಾತ್ಮಗಾಂಧಿ ಪ್ರತಿಮೆಯನ್ನು ಕಂಚಿನದಾಗಿಸುವ ಪ್ರಕ್ರಿಯೆಗೆ ಹಣಕಾಸಿನ ಕೊರತೆ ಇದೆ. ಪ್ರತಿಮೆಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದರೆ ಅಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಮಗಾರಿ ಸ್ಥಳೀಯ ಆಡಳಿತಕ್ಕೆ ತೊಂದರೆಯೊಡ್ಡಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಈ ತಾಣವನ್ನು ಸುಂದರವನ್ನಾಗಿಸಲು ಪ್ರಯತ್ನಿಸಲಾಗುವುದು. ಅಲ್ಲಿಯವರೆಗೂ ಗಾಂಧಿ ಪ್ರತಿಮೆ ಇದೇ ಸ್ಥಿತಿಯಲ್ಲಿರುವುದು ಅನಿವಾರ್ಯವಾಗಿದೆ. ಪರ್ಯಾಯ ಮಾರ್ಗ ತೋಚುತ್ತಿಲ್ಲ.
- ಹನುಮಂತಮ್ಮ,ಪಪಂ ಮುಖ್ಯಾಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

