ಅಸಮಾನತೆ ಅಳಿಸಿ ಅಖಂಡತೆ ಬೆಳೆಸಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಆ. 16
ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಅಸಮಾನತೆ, ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ ಇನ್ನಿತರ ದೇಶ ವಿರೋಧಿ ಚಟುವಟಿಕೆಯನ್ನು ಸಂಪೂರ್ಣ ಅಳಿಸಿ ಅಖಂಡತೆ ಬೆಳೆಸಿ ಸಮೃದ್ಧ ನಾಡು ಕಟ್ಟಬೇಕಿದೆ ಎಂದು ತಹಸೀಲ್ದಾರ್ ಎ.ಬಿ. ವಿಜಯಕುಮಾರ ಹೇಳಿದರು.
ಪಟ್ಟಣದ ಜಿಪಿಜಿ ಕಾಲೇಜು ಮೈದಾನದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ಆಯೋಜಿಸಿದ್ದ 67ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಮಾರ್ಗ ಹಿಡಿಯದೇ ಶಾಂತಿ ಮಾರ್ಗದ ಮೂಲಕ ಆಂಗ್ಲ ಅಧಿಪತ್ಯ ಅಳಿಸಿ, ಸ್ವಾತಂತ್ರ್ಯ ಪಡೆದ ರೀತಿ ಇಂದು ವಿಶ್ವಕ್ಕೆ ಮಾದರಿಯಾಗಿ ನಿಂತಿದೆ. ವಿವಿಧತೆ ಇದ್ದರೂ ಎಲ್ಲರೂ ಏಕತೆ ಸಾರಿ ಭಾರತೀಯರೆಂದು ಹೆಮ್ಮೆ ಪಡುವ ನಾವು, ವಿವಿಧ ಭಾಷೆ, ಉಡುಗೆ-ತೊಡುಗೆ, ಆಹಾರ ಪದ್ಧತಿ ಸೇರಿದಂತೆ ವೈವಿಧ್ಯದಲ್ಲಿ ಏಕತೆ ಸಂಸ್ಕೃತಿ ಹೊಂದಿದ್ದೇವೆಂದು ಹೇಳಿದರು.
ದೇಶ ರಕ್ಷಣೆಯಲ್ಲಿ ತಮ್ಮ ಜೀವದ ಹಂಗು ತೊರೆದು ಹಗಳಿರುಳು ಹೋರಾಟ ಮಾಡುತ್ತಿರುವ ಸೈನಿಕರು, ಆಂಗ್ಲರ ಆಡಳಿತ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮ ಹೋರಾಟಗಾರರನ್ನು ಸ್ಮರಣೆ ಮಾಡುವ ಸುದಿನ ಎಂದ ಅವರು, ಸೌಹಾರ್ದತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಭಾರತೀಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಉನ್ನತಿ ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಸಮಗ್ರ ಅಭಿವೃದ್ಧಿ ಪಥದತ್ತ ಸಾಗೋಣ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ವಿರೋಧಿ ರಾಷ್ಟ್ರಗಳ ಉಪಟಳ, ವಿಛಿದ್ರಕಾರಿಗಳು ದೇಶದ ಗಡಿಭಾಗ ಹಾಗೂ ದೇಶದ ಒಳಗೆ ವಿಧ್ವಂಸಕ ಕೃತ್ಯಗಳನ್ನು ಕಿತ್ತು ಹಾಕುವ ಮೂಲಕ ಅವುಗಳನ್ನು ಮೀರಿ ನಿಂತು ಅಭಿವೃದ್ಧಿ ಕನಸನ್ನು ಎಲ್ಲರೂ ಕಾಣಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ದುರುಗಮ್ಮ ಪೂಜಾರ, ಉಪಾಧ್ಯಕ್ಷೆ ಪ್ರೇಮಾ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಡಿವೈಎಸ್ಪಿ ನಾಗರಾಜ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಕಸಾಪ ಅಧ್ಯಕ್ಷ ಸುರೇಶ ಅಂಗಡಿ ಇತರರಿದ್ದರು.
ಮಾಗಳದ ಪ್ರಗತಿ ಪರ ಕೃಷಿಕ ನೀರಲಗಿ ಬಸವರಾಜ, ಪ್ರಾಚಾರ್ಯ ಎಂ.ಎಂ. ಗುರುಬಸವರಾಜ ಅವರನ್ನು ಇದೇ ಸಂದರ್ಭ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಿಇಒ ಬಿ. ವಿಜಯಕುಮಾರ ಸ್ವಾಗತಿಸಿದರು. ಎಸ್. ದ್ವಾರಕೇಶರೆಡ್ಡಿ, ಶಿಕ್ಷಕ ನಾಗರಾಜ ನಿರೂಪಿಸಿದರು. ಇದಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳ ಪ್ರಭಾತ್ಫೇರಿ ಯಶಸ್ವಿಯಾಗಿ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

